Saturday, October 17, 2026
Menu

ಭಿನ್ನಾಭಿಪ್ರಾಯ ಎದುರಿಸುವಾಗ ಇತರರ ಗೌರವಕ್ಕೆ ಧಕ್ಕೆಯಾಗಬಾರದು: ಪದವೀಧರರಿಗೆ ಸಿಜೆಐ ಸೂರ್ಯಕಾಂತ್ ಕಿವಿಮಾತು!

ಉದಯಕಾಲ ನ್ಯೂಸ್, ಬೆಂಗಳೂರು: ಸುಲಭದ ಹಾದಿ ಹಿಡಿಯುವ ಆಮಿಷಗಳು ಎದುರಾದಾಗಲೂ ಕಾನೂನು ವೃತ್ತಿಪರರು ತಮ್ಮ ನೈತಿಕ ಮೌಲ್ಯಗಳಿಗೆ ಕಟ್ಟುಬಿದ್ದು ಬದ್ಧತೆಯಿಂದ ಕಾರ್ಯನಿರ್ವಹಿಸಬೇಕು ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (CJI) ಸೂರ್ಯಕಾಂತ್ ಕರೆ ನೀಡಿದರು.
ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ (NLSIU)ಯ 34ನೇ ವಾರ್ಷಿಕ ಘಟಿಕೋತ್ಸವ ಸಮಾರಂಭದಲ್ಲಿ ಚಾನ್ಸೆಲರ್ ಅಧಿಕಾರದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಭಿನ್ನಾಭಿಪ್ರಾಯಗಳನ್ನು ಎದುರಿಸುವ ಸಂದರ್ಭದಲ್ಲಿ ಪರಸ್ಪರ ಗೌರವಕ್ಕೆ ಧಕ್ಕೆ ತರದಂತೆ ನಡೆದುಕೊಳ್ಳುವುದು ಅತ್ಯಗತ್ಯ. ಬೌದ್ಧಿಕ ಸ್ವಾತಂತ್ರ್ಯ, ನ್ಯಾಯಸಮ್ಮತತೆ ಮತ್ತು ವಿಭಿನ್ನ ಅಭಿಪ್ರಾಯಗಳನ್ನು ಗೌರವಿಸುವ ಗುಣವನ್ನು ಕಾನೂನು ಪದವೀಧರರು ಮೈಗೂಡಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.

ಸಮಾರಂಭದ ಆರಂಭ ಅನಿಶ್ಚಿತವಾಗಿತ್ತು!

ಕಾರ್ಯಕ್ರಮದ ಆರಂಭದಲ್ಲಿ ಮಾತನಾಡಿದ ಮುಖ್ಯ ನ್ಯಾಯಮೂರ್ತಿಗಳು, ಕೆಲವು ಅನಿರೀಕ್ಷಿತ ಹಾಗೂ ದುರದೃಷ್ಟಕರ ಸಂದರ್ಭಗಳಿಂದಾಗಿ, ನಿರ್ದಿಷ್ಟ “ಬಾಹ್ಯ ಶಕ್ತಿಗಳ” (External Forces) ಹಸ್ತಕ್ಷೇಪದಿಂದಾಗಿ ಈ ಘಟಿಕೋತ್ಸವವು ನಿಗದಿಯಂತೆ ನಡೆಯುತ್ತದೆಯೋ ಇಲ್ಲವೋ ಎಂಬ ಅನಿಶ್ಚಿತತೆಯು ಕೆಲಕಾಲ ಸೃಷ್ಟಿಯಾಗಿತ್ತು ಎಂದು ತಿಳಿಸಿದರು. ಆದರೂ, ವಿದ್ಯಾರ್ಥಿಗಳ ಸಂಘಟಿತ ಸ್ಪಷ್ಟ ನಿಲುವು ಮತ್ತು ದೃಢಸಂಕಲ್ಪದಿಂದ ಅಡೆತಡೆಗಳ ಕಾರ್ಮೋಡ ದೂರಾಗಿ, ಪ್ರಾಮಾಣಿಕ ಬಹುಸಂಖ್ಯಾತರ ಇಚ್ಛಾಶಕ್ತಿಯು ಅತಿಥಿಗಳ ದುಷ್ಪ್ರಯತ್ನಗಳನ್ನು ಮೀರಿ ನಿಂತಿದೆ ಎಂದು ಶ್ಲಾಘಿಸಿದರು.

ಕಾನೂನು ಶಿಕ್ಷಣದ ನಿಜವಾದ ಉದ್ದೇಶ

ಕೇವಲ ಕಾನೂನಿನ ವಿಧಿಗಳು ಮತ್ತು ಪೂರ್ವನಿದರ್ಶನಗಳ ಜ್ಞಾನವಷ್ಟೇ ವೃತ್ತಿಗೆ ಸಾಲದು ಎಂದು ಅಭಿಪ್ರಾಯಪಟ್ಟ ಸಿಜೆಐ ಸೂರ್ಯಕಾಂತ್, ನ್ಯಾಯಯುತವಾದುದನ್ನು ಸಮರ್ಥಿಸುವ ಧೈರ್ಯ ಹಾಗೂ ಸಮಾಜದಲ್ಲಿ ಕಡೆಗಣಿಸಲ್ಪಟ್ಟವರ ಧ್ವನಿಗೆ ಕಿವಿಗೊಡುವ ವಿನಯತೆ ವಕೀಲರಿಗೆ ಬೇಕು ಎಂದರು. ಕಾನೂನು ಶಾಲೆಗಳು ವಿಚಾರಗಳು ಮುಖಾಮುಖಿಯಾಗುವ ಜಾಗವಾಗಿದ್ದು, ವಿಭಿನ್ನ ದೃಷ್ಟಿಕೋನಗಳ ಜನರನ್ನು ಅರ್ಥಮಾಡಿಕೊಳ್ಳಲು ಮತ್ತು ಪರಸ್ಪರ ಸಂವಾದದ ಮೂಲಕ ಹೊಸ ತಿಳುವಳಿಕೆ ಮೂಡಿಸಿಕೊಳ್ಳಲು ಇದುವೇ ತವರur ಎಂದು ಬಣ್ಣಿಸಿದರು.

ಪ್ರಾಮಾಣಿಕತೆಯೇ ಅಂತಿಮ ಬಂಡವಾಳ

ವೃತ್ತಿಪರ ಅನುಕೂಲಗಳಿಗಾಗಿ ಪ್ರಾಮಾಣಿಕತೆಯೊಂದಿಗೆ ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳಬಾರದು. ತಾತ್ಕಾಲಿಕ ಲಾಭಗಳು ಆಕರ್ಷಿಸಿದರೂ, ಸಂಸ್ಥೆಯಲ್ಲಿ ಕಲಿತ ನೈತಿಕ ಮೌಲ್ಯಗಳೇ ಎಂದಿಗೂ ದಾರಿದೀಪವಾಗಬೇಕು. ಕಾನೂನು ವೃತ್ತಿಯು ತಾಳ್ಮೆ, ನೈತಿಕತೆ ಮತ್ತು ಧೈರ್ಯವನ್ನು ಪರೀಕ್ಷಿಸಿದರೂ, ಅನ್ಯಾಯವನ್ನು ಸರಿಪಡಿಸುವಲ್ಲಿ ಸಿಗುವ ತೃಪ್ತಿಯೇ ದೊಡ್ಡದು ಎಂದು ಹೇಳಿದರು.

ಪ್ರಜಾಪ್ರಭುತ್ವದಲ್ಲಿ ಪ್ರಶ್ನಿಸುವ ಹಕ್ಕು ಅತ್ಯಂತ ಮುಖ್ಯ – ಸಿಎಂ ಡಿಕೆ ಶಿವಕುಮಾರ್

ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಪ್ರಜಾಪ್ರಭುತ್ವ ಸಂಸ್ಥೆಗಳನ್ನು ರಕ್ಷಿಸಲು ಹಾಗೂ ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿಹಿಡಿಯಲು ಪ್ರತಿಯೊಬ್ಬ ಪ್ರಜೆಗೂ ಸರ್ಕಾರವನ್ನು ಪ್ರಶ್ನಿಸುವ ಅಧಿಕಾರವಿರಬೇಕು ಎಂದರು. ಎಲ್ಲರೂ ಸರ್ಕಾರದೊಂದಿಗೆ ಸಮ್ಮತಿಸುವುದೇ ಸಶಕ್ತ ಪ್ರಜಾಪ್ರಭುತ್ವವಲ್ಲ; ಸರ್ಕಾರದ ನೀತಿಗಳನ್ನು ಪ್ರಶ್ನಿಸುವ ಸ್ವಾತಂತ್ರ್ಯವಿರುವುದೇ ನಿಜವಾದ ಪ್ರಜಾಪ್ರಭುತ್ವದ ಲಕ್ಷಣ ಎಂದು ಅಭಿಪ್ರಾಯಪಟ್ಟರು.

ರಾಜ್ಯ ಸರ್ಕಾರದ ವತಿಯಿಂದ ಕಾನೂನು ಪದವೀಧರರಿಗೆ ನ್ಯಾಯಾಂಗ ಸೇವಾ ಪರೀಕ್ಷೆಗಳಿಗೆ ತರಬೇತಿ ನೀಡಲು ಮತ್ತು ಯುವ ವಕೀಲರಿಗೆ ನಿರಂತರ ಶಿಕ್ಷಣ ಒದಗಿಸಲು ಪ್ರತ್ಯೇಕ ಸಂಸ್ಥೆಯನ್ನು ಸ್ಥಾಪಿಸಲಾಗುವುದು. ಜೊತೆಗೆ, ‘ಸ್ಟಾರ್ಟ್-ಅಪ್ ಲಾ ಕ್ಲಿನಿಕ್’ (Start-up Law Clinic) ಆರಂಭಿಸಿ, ವಿದ್ಯಾರ್ಥಿಗಳು ಮತ್ತು ವಕೀಲರ ಮೂಲಕ ಯುವ ಉದ್ಯಮಿಗಳಿಗೆ ಉಚಿತ ಕಾನೂನು ಸಲಹೆ ನೀಡಲು ಸರ್ಕಾರ ಬೆಂಬಲಿಸಲಿದೆ ಎಂದು ಮುಖ್ಯಮಂತ್ರಿಗಳು ಮಹತ್ವದ ಘೋಷಣೆ ಮಾಡಿದರು.

ಘಟಿಕೋತ್ಸವದಲ್ಲಿ ಪದವಿ ಪಡೆಯಬೇಕಿದ್ದ ಎನ್‌ಎಲ್‌ಎಸ್‌ಐಯು ಪದವೀಧರೆ ದಿವಂಗತ ಊರ್ವಶಿ ಕೃಷ್ಣಾತ್ರಾ ಅವರ ಅಕಾಲಿಕ ನಿಧನಕ್ಕೆ ಸಿಜೆಐ ಸೇರಿದಂತೆ ಗಣ್ಯರು ತೀವ್ರ ಸಂತಾಪ ಸೂಚಿಸಿ, ಅವರ ನೆನಪುಗಳನ್ನು ಸ್ಮರಿಸಿದರು.

ಕಾರ್ಯಕ್ರಮಕ್ಕೂ ಮುನ್ನ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ ಹೊಸ ಸಭಾಂಗಣ ಹಾಗೂ ವಿದ್ಯಾರ್ಥಿ ಕೇಂದ್ರ (Student Centre) ನಿರ್ಮಾಣಕ್ಕೆ ಅಧಿಕೃತ ಶಂಕುಸ್ಥಾಪನೆ ನೆರವೇರಿಸಲಾಯಿತು. ಘಟಿಕೋತ್ಸವ ಸಮಾರಂಭದಲ್ಲಿ ಹಿರಿಯ ನಟಿ, ರಂಗಕರ್ಮಿ ಮುಖ್ಯ ಅತಿಥಿ ಅರುಂಧತಿ ನಾಗ್, ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು, ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
#UdayakalaNews #CJISuryaKant #NLSIUConvocation #BengaluruNews #LawGraduates #CMDKShivakumar #SupremeCourtOfIndia #LegalNews #KarnatakaGovernment #ConstitutionalValues

Related Posts

Leave a Reply

Your email address will not be published. Required fields are marked *