Menu

ಎಸ್‌ಐಆರ್ (SIR) ಪ್ರತಿಭಟನೆ ವೇಳೆ ತುರ್ತು ವಿಯೆಟ್ನಾಂಗೆ ಹೋದ ರಾಹುಲ್ ಗಾಂಧಿ

ಉದಯಕಾಲ ನ್ಯೂಸ್, ನವದೆಹಲಿ: ದೇಶದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯನ್ನು ವಿರೋಧಿಸಿ ಕಾಂಗ್ರೆಸ್ ಹಾಗೂ ಇತ್ತೀಚೆಗೆ ‘ಇಂಡಿಯಾ’ (INDIA) ಕೂಟದಿಂದ ತೀವ್ರ ಹೋರಾಟ ಹಾಗೂ ಪ್ರತಿಭಟನೆಗಳು ಮುಂಚೂಣಿಯಲ್ಲಿರುವ ಬೆನ್ನಲ್ಲೇ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ವಿದೇಶಕ್ಕೆ ಪ್ರಯಾಣ ಬೆಳೆಸಿರುವುದು ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಗ್ರಾಸವಾಗಿದೆ. ಮೂಲಗಳ ಪ್ರಕಾರ, ರಾಹುಲ್ ಗಾಂಧಿ ಅವರು ಭಾನುವಾರ ಮಧ್ಯಾಹ್ನ ದೆಹಲಿಯ ಇಂದಿರಾಗಾಂಧಿ ಅಂತರರಾಷ್ಟ್ರೀಯ (IGI) ವಿಮಾನ ನಿಲ್ದಾಣದಿಂದ ವಿಯೆಟ್ನಾಂನ ಹನೋಯಿಗೆ ತೆರಳಿದ್ದಾರೆ.

ವೈಯಕ್ತಿಕ ಭೇಟಿಯೋ ಅಥವಾ ರಹಸ್ಯ ಪ್ರವಾಸವೋ?

ಉತ್ತರ ಪ್ರದೇಶದ ರಾಯ್ ಬರೇಲಿ ಕ್ಷೇತ್ರದ ಸಂಸತ್ತಿನ ಸದಸ್ಯರಾಗಿರುವ ರಾಹುಲ್ ಗಾಂಧಿ ಅವರ ಈ ವಿಯೆಟ್ನಾಂ ಭೇಟಿಯು ವೈಯಕ್ತಿಕ ಕಾರಣಗಳಿಗಾಗಿಯೇ ಅಥವಾ ಯಾವುದೇ ಪೂರ್ವಯೋಜಿತ ಕಾರ್ಯಕ್ರಮಗಳ ಭಾಗವಾಗಿಯೇ ಎಂಬುದು ಸದ್ಯಕ್ಕೆ ಸ್ಪಷ್ಟವಾಗಿಲ್ಲ. ಈ ಕುರಿತು ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಅಥವಾ ಅಧಿಕೃತ ಮೂಲಗಳಿಂದ ಇದುವರೆಗೆ ಯಾವುದೇ ಸ್ಪಷ್ಟನೆ ಅಥವಾ ಹೇಳಿಕೆ ಹೊರಬಂದಿಲ್ಲ. ಪ್ರಮುಖ ರಾಜಕೀಯ ಬೆಳವಣಿಗೆಗಳು ಮತ್ತು ಪ್ರತಿಭಟನೆಗಳು ತಾರಕಕ್ಕೇರುತಿರುವ ಮಹತ್ವದ ಸಮಯದಲ್ಲಿ ವಿಪಕ್ಷ ನಾಯಕರು ವಿದೇಶಕ್ಕೆ ತೆರಳಿರುವುದು ವಿರೋಧ ಪಕ್ಷಗಳ ಆಂತರಿಕ ಒಗ್ಗಟ್ಟಿನ ಬಗ್ಗೆಯೂ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಬಿಜೆಪಿಯಿಂದ ತೀವ್ರ ಆಕ್ರೋಶ ಹಾಗೂ ವಾಗ್ದಾಳಿ

ರಾಹುಲ್ ಗಾಂಧಿ ಅವರ ವಿದೇಶ ಪ್ರವಾಸಗಳು ಆಗಾಗ್ಗೆ ರಾಜಕೀಯ ವಿವಾದಗಳಿಗೆ ಕಾರಣವಾಗುತ್ತಲೇ ಬಂದಿದ್ದು, ಈ ಬಾರಿಯೂ ಬಿಜೆಪಿ ನಾಯಕರು ರಾಹುಲ್ ಗಾಂಧಿ ವಿರುದ್ಧ ಹರಿಹಾಯ್ದಿದ್ದಾರೆ. ದೇಶದಲ್ಲಿ ಪ್ರಮುಖ ರಾಜಕೀಯ ವಿಷಯಗಳ ಕುರಿತು ಪ್ರತಿಭಟನೆಗಳು ನಡೆಯುತ್ತಿರುವ ಸಂದರ್ಭದಲ್ಲೇ ಕಾಂಗ್ರೆಸ್ ನಾಯಕರು ವಿದೇಶಕ್ಕೆ ಹಾರುವುದನ್ನು ಬಿಜೆಪಿ ನಾಯಕರು ತೀವ್ರವಾಗಿ ಟೀಕಿಸಿದ್ದಾರೆ. ವಿದೇಶಿ ಪ್ರವಾಸಗಳ ಮೂಲಕ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ಸರ್ಕಾರದ ವಿರುದ್ಧ ಅಪಪ್ರಚಾರ ನಡೆಸುವುದೇ ಇವರ ಏಕೈಕ ಉದ್ದೇಶ ಎಂದು ಕಮಲಪಡೆಯ ಮುಖಂಡರು ಕಿಡಿಕಾರಿದ್ದಾರೆ.

#Rahul Gandhi #SIR Protest #Congress #VietnamVisit #BJPVsCongress #IndianPolitics #UdayakalaNews #NewDelhi

Related Posts

Leave a Reply

Your email address will not be published. Required fields are marked *