ಉದಯಕಾಲ ನ್ಯೂಸ್, ಆನೇಕಲ್: ದಸರಾ ಹಬ್ಬದ ಸಂಭ್ರಮದ ದಿನವೇ ಆನೇಕಲ್ ಪಟ್ಟಣದಲ್ಲಿ ರಕ್ತಪಾತ ನಡೆದಿದೆ. ಕೂಲಿ ಕಾರ್ಮಿಕರೊಬ್ಬರನ್ನು ದೊಣ್ಣೆಯಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಿರುವ ದಾರುಣ ಘಟನೆ ಬೆಳಕಿಗೆ ಬಂದಿದೆ.
ತಮಿಳುನಾಡಿನ ಸಾರಕ್ಕಪಲ್ಲಿ ಗ್ರಾಮದ ನಿವಾಸಿ ಯಲ್ಲಪ್ಪ (56) ಕೊಲೆಯಾದ ದುರ್ದೈವಿ. ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ ಈತ, ದಸರಾ ಜಂಬೂಸವಾರಿ ವೀಕ್ಷಿಸಲು ಆನೇಕಲ್ಗೆ ಬಂದಿದ್ದನು.
ಜಂಬೂಸವಾರಿಗೆ ಬಂದವ ಹೆಣವಾಗಿ ಹೋದ!
ದಸರಾ ಅಂಬಾರಿ ಉತ್ಸವ ನೋಡಲು ಬಂದಿರುವುದಾಗಿ ಯಲ್ಲಪ್ಪ ತನ್ನ ಪತ್ನಿಗೆ ರಾತ್ರಿ ಫೋನ್ ಮಾಡಿ ತಿಳಿಸಿದ್ದನು. ಆದರೆ, ಅದೇ ರಾತ್ರಿ ಆನೇಕಲ್ ಪಟ್ಟಣದ ಚಿಕ್ಕಕೆರೆ ಸ್ಟೇಡಿಯಂ ಬಳಿ ಈ ಕೃತ್ಯ ನಡೆದಿದೆ. ರಾತ್ರಿ ವೇಳೆ ಚಿಕ್ಕಕೆರೆ ಸ್ಟೇಡಿಯಂ ಬಳಿ ಕುಳಿತು ಮದ್ಯ ಸೇವಿಸುವಾಗ ಯಾರೊಡನೆಯೋ ಗಲಾಟೆ ನಡೆದಿದ್ದು, ಅದೇ ಮುನಿಸಿನಲ್ಲಿ ದುಷ್ಕರ್ಮಿಗಳು ದೊಣ್ಣೆಯಿಂದ ತಲೆ ಹಾಗೂ ದೇಹದ ಇತರೆ ಭಾಗಗಳಿಗೆ ಮನಬಂದಂತೆ ಹೊಡೆದು ಹತ್ಯೆಗೈದಿರುವುದು ಮೇಲ್ನೋಟಕ್ಕೆ ತಿಳಿದುಬಂದಿದೆ. ಕೃತ್ಯ ಎಸಗಿದ ಬಳಿಕ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.
ಪೊಲೀಸರ ತನಿಖೆ ಚುರುಕು
ಮುಂಜಾನೆ ರಸ್ತೆಬದಿ ಹಾಗೂ ಸ್ಟೇಡಿಯಂ ಬಳಿ ವ್ಯಕ್ತಿಯೊಬ್ಬರ ಶವ ಬಿದ್ದಿರುವುದನ್ನು ಗಮನಿಸಿದ ಸ್ಥಳೀಯರು ಕೂಡಲೇ ಆನೇಕಲ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಸ್ಥಳಕ್ಕೆ ಧಾವಿಸಿದ ಆನೇಕಲ್ ಪೊಲೀಸ್ ಠಾಣೆಯ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆನೇಕಲ್ನ ಸರ್ಕಾರಿ ಶವಗಾರಕ್ಕೆ ರವಾನಿಸಲಾಗಿದೆ.
ಈ ಸಂಬಂಧ ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೊಲೆಗೈದು ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗಾಗಿ ಪೊಲೀಸರು ವಿಶೇಷ ಬಲೆ ಬೀಸಿದ್ದಾರೆ. ಹಬ್ಬದ ದಿನವೇ ನಡೆದ ಈ ಭೀಕರ ಕೊಲೆ ಘಟನೆಯಿಂದ ಸ್ಥಳೀಯವಾಗಿ ಆತಂಕ ಮೂಡಿದೆ.
#Anekal #DasaraMurder #CrimeNews #KarnatakaPolice #AnekalNews #UdayakalaNews #BreakingNews #TamilNaduLaborerMurder #BengaluruRural


