ಉದಯಕಾಲ ನ್ಯೂಸ್, ಬೆಂಗಳೂರು: ರಾಜ್ಯದ ಜನಸಾಮಾನ್ಯರಿಗೆ ಮತ್ತೊಂದು ಆಘಾತ ಎದುರಾಗಿದ್ದು, ಹಾಲು ಮತ್ತು ಮೊಸರಿನ ದರ ಏರಿಕೆಯ ಬೆನ್ನಲ್ಲೇ ಬೆಂಗಳೂರು ಹಾಲು ಒಕ್ಕೂಟವು (ಬಮೂಲ್) ನಂದಿನಿ ತುಪ್ಪ, ಬೆಣ್ಣೆ, ಪನೀರ್ ಹಾಗೂ ತೃಪ್ತಿ ಹಾಲಿನ ಚಿಲ್ಲರೆ ಮಾರಾಟ ದರಗಳನ್ನು ಗಣನೀಯವಾಗಿ ಹೆಚ್ಚಿಸಿದೆ. ಪರಿಷ್ಕೃತಗೊಂಡ ಹೊಸ ದರಗಳು ನವೆಂಬರ್ 4ರ ಮಧ್ಯರಾತ್ರಿಯಿಂದಲೇ ರಾಜ್ಯಾದ್ಯಂತ ಜಾರಿಗೆ ಬಂದಿವೆ. ಕೆಎಂಎಫ್ (KMF) ಹಾಲಿನ ದರವನ್ನು ಹೆಚ್ಚಿಸಿದ ಕೇವಲ ಒಂದು ವಾರದ ಅಂತರದಲ್ಲೇ ಈ ಉತ್ಪನ್ನಗಳ ಬೆಲೆಯೂ ಕೂಡ ಏರಿಕೆಯಾಗಿರುವುದು ಬಡವರು ಹಾಗೂ ಜನಸಾಮಾನ್ಯ ಗ್ರಾಹಕರ ಜೇಬಿಗೆ ಮತ್ತಷ್ಟು ಕತ್ತರಿ ಬೀಳುವಂತೆ ಮಾಡಿದೆ.
ನಂದಿನಿ ತುಪ್ಪ ಮತ್ತು ಬೆಣ್ಣೆ ಹೊಸ ದರ ವಿವರ
ಬಮೂಲ್ ಹೊರಡಿಸಿರುವ ಸುತ್ತೋಲೆಯ ಪ್ರಕಾರ, ನಂದಿನಿ ತುಪ್ಪದ ಬೆಲೆಯಲ್ಲಿ ಭಾರಿ ಹೆಚ್ಚಳವಾಗಿದ್ದು, 200 ಮಿಲಿ ಸ್ಯಾಚೆಟ್‌ಗೆ 95 ರೂ., 500 ಮಿಲಿ ಪ್ಯಾಕ್‌ಗೆ 425 ರೂ. ಹಾಗೂ 1 ಲೀಟರ್ ಪ್ಯಾಕ್‌ನ ತುಪ್ಪದ ಬೆಲೆ 850 ರೂಪಾಯಿಗೆ ಏರಿಕೆಯಾಗಿದೆ. ಪಿಇಟಿ ಜಾರ್‌ಗಳಲ್ಲಿ ದೊರೆಯುವ 1 ಲೀಟರ್ ತುಪ್ಪಕ್ಕೆ 870 ರೂ. ಹಾಗೂ 5 ಲೀಟರ್ ಪ್ಯಾಕ್‌ಗೆ 4,250 ರೂ. ನಿಗದಿಪಡಿಸಲಾಗಿದೆ. ವಾಣಿಜ್ಯ ಬಳಕೆಯ 15 ಕೆಜಿ ತುಪ್ಪದ ಡಬ್ಬಿಯ ಬೆಲೆ ಬರೋಬ್ಬರಿ 14,100 ರೂಪಾಯಿಗೆ ತಲುಪಿದೆ.
ಇದಲ್ಲದೆ, ಬೆಣ್ಣೆ ಪ್ರಿಯರಿಗೂ ಬೆಲೆ ಏರಿಕೆಯ ಬಿಸಿ ತಟ್ಟಿದ್ದು, ಉಪ್ಪು ಬೆರೆಸಿದ 100 ಗ್ರಾಂ ಬೆಣ್ಣೆಗೆ 90 ರೂ., 500 ಗ್ರಾಂಗೆ 380 ರೂ. ಹಾಗೂ ಉಪ್ಪಿಲ್ಲದ 200 ಗ್ರಾಂ ಬೆಣ್ಣೆಗೆ 160 ರೂ., 500 ಗ್ರಾಂಗೆ 390 ರೂ. ನಿಗದಿಪಡಿಸಲಾಗಿದೆ. ಫ್ಯಾಮಿಲಿ ಪ್ಯಾಕ್ ಬೆಣ್ಣೆಗೆ 90 ರೂ. ಹಾಗೂ 10 ಗ್ರಾಂ ಬ್ಲಿಸ್ಟರ್ ಪ್ಯಾಕ್ ಪ್ರತಿ ಕೆಜಿಗೆ 900 ರೂ. ಆಗಿದೆ.
ಪನೀರ್ ಹಾಗೂ ತೃಪ್ತಿ ಹಾಲು ದರವೂ ಏರಿಕೆ
ತುಪ್ಪ ಮತ್ತು ಬೆಣ್ಣೆಯ ಜೊತೆಗೆ ನಂದಿನಿ ಪನೀರ್ ಹಾಗೂ ತೃಪ್ತಿ ಹಾಲಿನ ದರದಲ್ಲೂ ಬದಲಾವಣೆ ಮಾಡಲಾಗಿದೆ. ನಂದಿನಿ ಪನೀರ್‌ನ 200 ಗ್ರಾಂ ಪ್ಯಾಕ್‌ಗೆ 115 ರೂ., 500 ಗ್ರಾಂಗೆ 260 ರೂ. ಹಾಗೂ ಒಂದು ಕೆಜಿ ಪನೀರ್ ಬೆಲೆ 485 ರೂ.ಗೆ ಏರಿಕೆಯಾಗಿದೆ. ಮೀಡಿಯಂ-ಫ್ಯಾಟ್ ಪನೀರ್ 200 ಗ್ರಾಂಗೆ 110 ರೂ. ಇದೆ. ಹಾಗೆಯೇ ತೃಪ್ತಿ ಹಾಲಿನ 135 ಎಂಎಲ್ ಪ್ಯಾಕ್‌ಗೆ 11 ರೂ. ಹಾಗೂ 450 ಎಂಎಲ್ ಪ್ಯಾಕ್‌ಗೆ 33 ರೂ. ನಿಗದಿಪಡಿಸಲಾಗಿದೆ. ಒಟ್ಟಾರೆಯಾಗಿ ದಿನಬಳಕೆಯ ಹಾಲಿನ ಉತ್ಪನ್ನಗಳ ಬೆಲೆ ಏರಿಕೆಯಿಂದ ಬಡ ಹಾಗೂ ಮಧ್ಯಮ ವರ್ಗದ ಜನರ ತಿಂಗಳ ಅಡುಗೆ ಮನೆ ಬಜೆಟ್ ಮತ್ತಷ್ಟು ಅಸ್ತವ್ಯಸ್ತಗೊಂಡಿದೆ.
#NandiniGheePriceHike #Bamul #NandiniButter #KarnatakaNews #KMFMilkPrice #UdayakalaNews


