Menu

ಜಪಾನ್‌ನಲ್ಲಿ ಪ್ರಬಲ ಭೂಕಂಪ: ಸುನಾಮಿ ಆತಂಕ, ತುರ್ತು ಪರಿಸ್ಥಿತಿ ಘೋಷಣೆ

ಜಪಾನ್‌ನ ದಕ್ಷಿಣ ಭಾಗದ ಕ್ಯುಶು ದ್ವೀಪದ ಕುಮಾಮೊಟೊ ಪ್ರಾಂತ್ಯದಲ್ಲಿ  ಪ್ರಬಲ ಭೂಕಂಪ ಸಂಭವಿಸಿದ್ದು,  ರಿಕ್ಟರ್ ಮಾಪಕದಲ್ಲಿ 7.1 ತೀವ್ರತೆ ದಾಖಲಾಗಿದೆ.  ಕರಾವಳಿ ಭಾಗದಲ್ಲಿ ಸುನಾಮಿ ಎಚ್ಚರಿಕೆ ನೀಡಿದ್ದು, ನಿವಾಸಿಗಳ ಸ್ಥಳಾಂತರಕ್ಕೆ ಸೂಚಿಸಲಾಗಿದೆ.

ಜಪಾನ್ ಹವಾಮಾನ ಇಲಾಖೆ ನೀಡಿರುವ ಮಾಹಿತಿಯ ಪ್ರಕಾರ, ಭೂಕಂಪದ ಕೇಂದ್ರಬಿಂದು ಸಮುದ್ರ ಮಟ್ಟದಿಂದ 10 ಕಿಲೋಮೀಟರ್ ಆಳದಲ್ಲಿತ್ತು. ಈ ಕಂಪನದ ಪ್ರಭಾವದಿಂದ ದಕ್ಷಿಣ ಜಪಾನ್‌ನ ಹಲವು ಪ್ರಾಂತ್ಯಗಳಲ್ಲಿ ಕಟ್ಟಡಗಳು ತೀವ್ರವಾಗಿ ಕಂಪಿಸಿದ್ದು, ಕೆಲವು ಕಡೆ ಹಾನಿ ಸಂಭವಿಸಿದೆ. ಭೂಕಂಪದಿಂದ ಕೆಲವರು ಗಾಯಗೊಂಡಿದ್ದು, ರಕ್ಷಣಾ ಕಾರ್ಯಪಡೆಗಳನ್ನು ತುರ್ತು ಕಾರ್ಯಾಚರಣೆಗೆ ನಿಯೋಜಿಸಲಾಗಿದೆ.

ಹವಾಮಾನ ಇಲಾಖೆಯು ಕರಾವಳಿ ಭಾಗದ ಜನರಿಗೆ ಸುನಾಮಿ ಎಚ್ಚರಿಕೆ ಜಾರಿಗೊಳಿಸಿದೆ. ಸಮುದ್ರದಲ್ಲಿ ಒಂದು ಮೀಟರ್‌ವರೆಗಿನ ಎತ್ತರದ ಅಲೆಗಳು ಅಪ್ಪಳಿಸುವ ಸಾಧ್ಯತೆಯಿರುವುದರಿಂದ, ಕರಾವಳಿ ತೀರದ ನಿವಾಸಿಗಳು ತಕ್ಷಣವೇ ಸುರಕ್ಷಿತ ಹಾಗೂ ಎತ್ತರದ ಪ್ರದೇಶಗಳಿಗೆ ತೆರಳುವಂತೆ ಸೂಚಿಸಲಾಗಿದೆ. ಕುಮಾಮೊಟೊ, ನಾಗಸಾಕಿ, ಕಾಗೋಶಿಮಾ, ಫುಕುವೋಕಾ ಸೇರಿದಂತೆ ವಿವಿಧ ಪ್ರಾಂತ್ಯಗಳಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ.

ಸದ್ಯಕ್ಕೆ ಪರಮಾಣು ವಿದ್ಯುತ್ ಸ್ಥಾವರಗಳಲ್ಲಿ ಯಾವುದೇ ತಕ್ಷಣದ  ತೊಂದರೆ, ಹಾನಿ  ಕಂಡುಬಂದಿಲ್ಲ ಎಂದು ಪರಮಾಣುನಿಯಂತ್ರಣ ಪ್ರಾಧಿಕಾರ ಸ್ಪಷ್ಟಪಡಿಸಿದೆ. ಪೆಸಿಫಿಕ್ ಮಹಾಸಾಗರದ ರಿಂಗ್ ಆಫ್ ಫೈರ್ ವಲಯದಲ್ಲಿ ಜಪಾನ್ ನೆಲೆಗೊಂಡಿರುವುದೇ ಈ ನಿರಂತರ ಭೂಕಂಪಗಳಿಗೆ ಪ್ರಮುಖ ಕಾರಣ. ಇದು ಜಗತ್ತಿನ ಅತಿ ಹೆಚ್ಚು ಸಕ್ರಿಯ ಜ್ವಾಲಾಮುಖಿಗಳು ಮತ್ತು ಟೆಕ್ಟಾನಿಕ್ ಪ್ಲೇಟ್‌ಗಳ ಘರ್ಷಣೆ ನಡೆಯುವ ಪ್ರದೇಶವಾಗಿದೆ. ವಿಶ್ವದ ಶೇಕಡಾ 75ರಷ್ಟು ಭೂಕಂಪಗಳು ಈ ವಲಯದಲ್ಲೇ ಸಂಭವಿಸುತ್ತವೆ.

2011ರಲ್ಲಿ ಸಂಭವಿಸಿದ್ದ 9.0 ತೀವ್ರತೆಯ ಭೀಕರ ಭೂಕಂಪ ಮತ್ತು ಅಪ್ಪಳಿಸಿದ ದೈತ್ಯ ಸುನಾಮಿ ಸಾವಿರಾರು ಜೀವಗಳನ್ನು ಬಲಿ ಪಡೆದಿತ್ತು. ಫುಕುಶಿಮಾ ಪರಮಾಣು ಸ್ಥಾವರಕ್ಕೆ ತೀವ್ರ ಹಾನಿಯುಂಟು ಮಾಡಿ ಜಾಗತಿಕ
ಮಟ್ಟದಲ್ಲಿ ಆತಂಕ ಸೃಷ್ಟಿಸಿತ್ತು.

Related Posts

Leave a Reply

Your email address will not be published. Required fields are marked *