ಒಂದು ಕೋಟಿ ರೂಪಾಯಿ ವರದಕ್ಷಿಣೆ, ಫಾರ್ಚುನರ್ ಕಾರು ಜೊತೆಗೆ ಕೋಟಿ ರೂಪಾಯಿ ವೆಚ್ಚದಲ್ಲಿ ಮದುವೆ, 14 ತಿಂಗಳಲ್ಲಿ ಮಗಳ ಆತ್ಮಹತ್ಯೆ ಇದು ಗ್ರೇಟರ್ ನೋಯ್ಡಾದ ಜಲ್ಪುರ ವಲಯದಲ್ಲಿ ನಡೆದ ದುರಂತ ಕಥೆ. ಮದುವೆಯಾದ 14 ತಿಂಗಳಿಗೆ ಬದುಕು ಭಾರವಾಗಿ 24 ವರ್ಷದ ಯುವತಿ ದೀಪಿಕಾ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಆಕೆಯ ಮಾವ ಮತ್ತು ಗಂಡನನ್ನು ಪೊಲೀಸರು ಬಂಧಿಸಿದ್ದಾರೆ.
ದೀಪಿಕಾ ಹಾಗೂ ರಿತಿಕ್ ತನ್ವಾರ್ ಮದುವೆ ಅದ್ಧೂರಿಯಾಗಿ ನಡೆದಿದೆ. ಮದುವೆಗೆ ಮೂರು ತಿಂಗಳು ಇರುವಾಗ ವರನ ಕಡೆಯಿಂದ ವರದಕ್ಷಿಣೆ ಬೇಡಿಕೆ ತೀವ್ರಗೊಂಡಿತ್ತು. ಎಲ್ಲರಿಗೂ ಮದುವೆ ಆಹ್ವಾನ ನೀಡಿ ಆಗಿತ್ತು. ಹೀಗಾಗಿ ವರದಕ್ಷಿಣೆ ವಿಚಾರದಲ್ಲಿ ಮದುವೆ ನಿಂತರೆ ಮಗಳ ಭವಿಷ್ಯದ ಕುರಿತು ಚಿಂತಿಸಿದ ಪೋಷಕರು ಕೋಟಿ ರೂಪಾಯಿ ವರದಕ್ಷಿಣೆ ಜೊತೆಗೆ ಫಾರ್ಚುನರ್ ಕಾರನ್ನು ನೀಡಿದ್ದರು. ಮದುವೆಗೂ ಖರ್ಚು ಮಾಡಿದ್ದರು.
ಮದುವೆಯಾದ ಬಳಿಕ ಗಂಡನ ಮನೆಯಲ್ಲಿ ಮಾನಸಿಕ, ದೈಹಿಕ ಕಿರುಕುಳ ಆರಂಭಗೊಂಡಿದೆ. ಗಂಡ, ಮಾವ ಸೇರಿದಂತೆ ರಿತಿಕ್ ತನ್ವರ್ ಕುಟುಂಬ ಕಿರುಕುಳ ನೀಡಲು ಆರಂಭಿಸಿದೆ. ಈ ಕುರಿತು ಪೋಷಕರಿಗೆ ಹೇಳಿದ್ದ ದೀಪಿಕಾ ಉತ್ತಮ ಸಮಯ ಬರಲಿದೆ, ಎಲ್ಲವು ಬದಲಾಗಲಿದೆ ಎಂದು ಕಾದಿದ್ದಳು. ಪೋಷಕರು ಪೊಲೀಸ್ ದೂರು ನೀಡದೆ ಸಮಸ್ಯೆ ಬಗೆ ಹರಿಸಲು ಯತ್ನಿಸಿದ್ದರು.
ಸಮಸ್ಯೆ ಬಗೆ ಹರಿಯುವ ಬದಲು ತೀವ್ರಗೊಳ್ಳುತ್ತಿದ್ದಂತೆ ದೀಪಿಕಾ ಮನೆಯ ಮಹಡಿಗೆ ತೆರಳಿ ಅಲ್ಲಿಂದ ಜಿಗಿದಿದ್ದಾಳೆ. ಪೊಲೀಸರು ಸ್ಥಳಕ್ಕೆ ಧಾವಿಸಿ ಮೊಬೈಲ್ ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ. ರಿತಿಕ್ ಕುಟುಂಬಸ್ಥರ ವಿರುದ್ಧ ಪ್ರಕರಣ ದಾಖಲಾಗಿದೆ.


