ವಿಧಾನ ಪರಿಷತ್ ಚುನಾವಣೆಯಲ್ಲಿ ನಮ್ಮ ಸರ್ಕಾರಕ್ಕೆ ಶಾಸಕರ ಬೆಂಬಲ ನೋಡಿ ನನಗೆ ಆಶ್ಚರ್ಯವಾಗಿದೆ. ಇದು ನಮ್ಮ ಸರ್ಕಾರಕ್ಕೆ ಮಾತ್ರ ನೀಡಿರುವ ಬೆಂಬಲವಲ್ಲ. ರಾಜ್ಯದ ಜನತೆಯ ಹಿತಕ್ಕಾಗಿ ನಿಮ್ಮ ಜೊತೆ ಇದ್ದೇವೆ ಎಂದು ನೀಡಿರುವ ಬೆಂಬಲ ಎಂದು ಸಿಎಂ ಡಿಕೆ ಶಿವಕುಮಾರ್ ಹೇಳಿದರು.
ವಿಧಾನಸಭೆಯಿಂದ ವಿಧಾನ ಪರಿಷತ್ ಗೆ ಗುರುವಾರ ನಡೆದ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಪಕ್ಷದ ಬಿ.ಕೆ.ಹರಿಪ್ರಸಾದ್, ಮಳವಳ್ಳಿ ಶಿವಣ್ಣ, ಪಿ.ವಿ.ಮೋಹನ್, ವಿನಯ್ ಕಾರ್ತಿಕ್, ತಿಪ್ಪಣ್ಣಪ್ಪ ಕಮಕನೂರು ಅವರನ್ನು ವಿಧಾನಸೌಧದಲ್ಲಿ ಸಿಎಂ ಡಿ ಕೆ ಶಿವಕುಮಾರ್ ಅವರು ಅಭಿನಂದಿಸಿದ ನಂತರ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದರು. ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ ಇದ್ದರು.
ನಾವು ಯಾವ ಹೆಜ್ಜೆಯನ್ನಿಟ್ಟು ಮುಂದುವರಿಯುತ್ತಿದ್ದೇವೆಯೋ ಅದಕ್ಕೆ ನಾವೂ ಜೊತೆಗಿದ್ದೇವೆ ಎಂದು ಪಕ್ಷಾತೀತವಾಗಿ ಬೆಂಬಲ ನೀಡಿದ್ದಾರೆ. ನಮ್ಮ ಪಕ್ಷದ ಶಾಸಕರೂ ಒಗ್ಗಟ್ಟಾಗಿ ಬೆಂಬಲಿಸಿದ್ದಾರೆ. ನಮಗೆ ಹೆಚ್ಚಿನ ಮತ ನೀಡಿದ ಬೇರೆ, ಬೇರೆ ಪಕ್ಷದ ವಿಶ್ವಾಸವನ್ನು ನಾವು ಉಳಿಸಿಕೊಳ್ಳುತ್ತೇವೆ. ನಿಮ್ಮ ಭಾವನೆಯನ್ನು ಅರಿತುಕೊಂಡು ನಿಮ್ಮ ಸೇವೆಯಲ್ಲಿ ಮುಂದುವರೆಯುತ್ತೇವೆ. ನೀವು ನಮಗೆ ನೀಡಿದ ವಿಶ್ವಾಸ ಜನರಿಗೆ ನೀಡಿದ ಶಕ್ತಿ ಎಂದು ಬಣ್ಣಿಸಿದರು.
ನಮ್ಮ ಪಕ್ಷದ ಶಾಸಕರ ಒಂದು ಮತವೂ ತಿರಸ್ಕೃತವಾಗಬಾರದು ಎಂದು ತರಬೇತಿ ನೀಡಲಾಗಿತ್ತು. ಇದಕ್ಕೆ ಸಹಕರಿಸಿದ ಎಲ್ಲಾ ಪದಾಧಿಕಾರಿಗಳಿಗೆ ನಾನು ವಿಶೇಷವಾಗಿ ಧನ್ಯವಾದ ಹೇಳುತ್ತೇನೆ. ಇದಕ್ಕೆ ದುಡಿದಂತಹ ಪಕ್ಷದ ಎಲ್ಲಾ ಶಾಸಕರು, ನಾಯಕರು, ಎಐಸಿಸಿ ಪ್ರಧಾನ ಕಾರ್ಯದರ್ಶಿಯವರಾದ ರಣದೀಪ್ ಸುರ್ಜೇವಾಲಾ ಅವರು ಹಾಗೂ ಇತರೇ ಕಾರ್ಯದರ್ಶಿಗಳನ್ನು ನಾನು ಅಭಿನಂಧಿಸುತ್ತೇನೆ ಎಂದು ಹೇಳಿದರು.
ಮತ ಯಾರು ಹಾಕಿದ್ದಾರೆ ಎಂಬುದೂ ನನಗೆ ಗೊತ್ತಿಲ್ಲ. ಇಲ್ಲಿ ನಡೆದಿರುವುದು ಗುಪ್ತ ಮತದಾನ. ಯಾರು ಮತ ಹಾಕಿದ್ದಾರೆ ಎಂದು ಯಾರಿಗೆ ಗೊತ್ತು. ಆತ್ಮವಿಶ್ವಾಸದ ಮತ ಹಾಕಿದ್ದಾರೆ. ನಾನು ಯಾರ ಬಳಿಯೂ ಮಾತನಾಡಲು ಹೋಗಿಲ್ಲ, ಮತ ಕೇಳಲೂ ಹೋಗಿಲ್ಲ. ನಮ್ಮಪಕ್ಷದಿಂದ ಐದು ಅಭ್ಯರ್ಥಿಗಳು ನಿಂತಿದ್ದರು. ನಮ್ಮ ಶಾಸಕರ ಸಂಖ್ಯಾಬಲ ಎಷ್ಟಿತ್ತು ಎಂಬುದು ಮಾಧ್ಯಮಗಳಿಗೆ ತಿಳಿದಿತ್ತು. ಐದು ಜನ ಗೆಲ್ಲುತ್ತಾರೆ ಎನ್ನುವ ವಿಶ್ವಾಸವಿತ್ತು. ಅವರು ಗೆದ್ದಿದ್ದಾರೆ. ದಳ, ಬಿಜೆಪಿ ಸೇರಿದಂತೆ ಯಾವ ಪಕ್ಷದ ಆಂತರಿಕ ವಿಚಾರ ಏನಿದೆಯೋ ಎಂಬುದು ನನಗೆ ಏನೂ ಗೊತ್ತಿಲ್ಲ ಎಂದರು.
ನೀವು ಸಹಕಾರ ಕೋರಿದ್ದೀರಿ ಎಂದು ಎಸ್.ಟಿ. ಸೋಮಶೇಖರ್ ಹೇಳಿದ್ದಾರೆ ಎಂದಾಗ, ಅವರನ್ನು ಉಚ್ಚಾಟನೆ ಮಾಡಿ ಕಳಿಸಿದ್ದಾರಲ್ಲವೇ, ನಮ್ಮ ಹತ್ತಿರ ಇರಬೇಡಿ ಎಂದು ಕಳಿಸಿದ್ದರು. ಹೀಗೆ ಕಳಿಸಿದವರನ್ನು ದಾರಿಯಲ್ಲಿಯೇ ಬಿಡಲು ಆಗುತ್ತದೆಯೇ, ನಾವು ದಾರಿ ಇಲ್ಲದವರಿಗೆ ದಾರಿ ತೋರಿಸುವ ಕೆಲಸ ಮಾಡಿದ್ದೇವೆ ಎಂದು ಉತ್ತರಿಸಿದರು.


