Menu

ವಿಪಕ್ಷಗಳ ಗ್ಯಾರಂಟಿ ವಿರೋಧಿ ನೀತಿಗೆ ಅವರ ಶಾಸಕರಿಂದಲೇ ಉತ್ತರ: ಸುರ್ಜೇವಾಲಾ

ಮೂರು ವರ್ಷಗಳಲ್ಲಿ ಕಾಂಗ್ರೆಸ್ ಪಕ್ಷ ಮಾಡಿದ ಜನಪರ ಕೆಲಸಗಳಿಗೆ ಶಾಸಕರು ನೀಡಿರುವ ಬೆಂಬಲ ಈ ಪರಿಷತ್ ಚುನಾವಣೆ ಪಲಿತಾಂಶ. ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಗ್ಯಾರಂಟಿ ವಿರೋಧಿ ನಿಲುವನ್ನು ಅವರ ಪಕ್ಷದ ಶಾಸಕರೇ ವಿರೋಧಿಸಿ ಸಂದೇಶ ನೀಡಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿರಣದೀಪ್ ಸುರ್ಜೇವಾಲಾ  ಹೇಳಿದರು.

ವಿಧಾನಸಭೆಯಿಂದ ವಿಧಾನ ಪರಿಷತ್ ಗೆ ಗುರುವಾರ ನಡೆದ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಕಾಂಗ್ರೆಸ್ ಅಭ್ಯರ್ಥಿಗಳನ್ನು ವಿಧಾನಸೌಧದಲ್ಲಿ ಅಭಿನಂದಿಸಿದರು. ನಂತರ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದರು. ಸಿಎಂ ಡಿ ಕೆ ಶಿವಕುಮಾರ್ ಅವರು ಇದ್ದರು.

ಗ್ಯಾರಂಟಿ ಯೋಜನೆಗಳಿಗೆ ಬೆಂಬಲ ನೀಡಿದ್ದಾರೆ. ‌ಪಕ್ಷಾತೀತವಾಗಿ ನಮ್ಮ ಜೊತೆ ನಿಂತಿದ್ದಾರೆ. ಇದರ ಜೊತೆಗೆ ಕರ್ನಾಟಕ ವಿರೋಧಿಯಾಗಿ ನಡೆದುಕೊಳ್ಳುತ್ತಿರುವ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರಕ್ಕೆ ಕರ್ನಾಟಕದ ಶಾಸಕರು ಪಕ್ಷಾತೀತವಾಗಿ ಉತ್ತರ ನೀಡಿದ್ದಾರೆ. ಕರ್ನಾಟಕದ ಹಕ್ಕುಗಳನ್ನು ಮೊಟಕುಗೊಳಿಸಲು ಆಗಲ್ಲ ‌ಎಂದು ಅವರ ಪಕ್ಷದ ಶಾಸಕರೇ ಉತ್ತರ ನೀಡಿದ್ದಾರೆ ಎಂದರು.

ಮತದ ಮೂಲಕ ಐದು ಗ್ಯಾರಂಟಿ ಯೋಜನೆಗಳಿಗೆ ಬಿಜೆಪಿ, ಜನತಾದಳದ ಶಾಸಕರೂ ಒಪ್ಪಿಗೆ ಮುದ್ರೆ ಒತ್ತಿದ್ದಾರೆ. ಯಾರೇ ಗ್ಯಾರಂಟಿ ವಿರೋಧಿಸಿದರೂ ನಾವು ಗ್ಯಾರಂಟಿ ಪರವಾಗಿದ್ದೇವೆ ಎಂದು ದನಿ ಎತ್ತಿದ್ದಾರೆ. ಕರ್ನಾಟಕದ ಜನರ ವಿರೋಧಿಯಾದ ಅವರ ನಕಾರಾತ್ಮಕ ರಾಜಕಾರಣ ಅವರಿಗೆ ತಿರುಗಿದೆ. ನಾನು ನನ್ನ ಹೃದಯದಿಂದ ಧನ್ಯವಾದಗಳನ್ನು ಹೇಳುತ್ತೇನೆ ಎಂದರು.

ಬಿ.ಕೆ.ಹರಿಪ್ರಸಾದ್ ಅವರು ಸೇರಿದಂತೆ ಬಿ.ಎಸ್.ಶಿವಣ್ಣ, ತಿಪ್ಪಣ್ಣ ಕಮಕನೂರ, ಪಿ.ವಿ.ಮೋಹನ್ ಮತ್ತು ವಿನಯ್ ಕಾರ್ತಿಕ್ ಅವರು ಮೊದಲ ಪ್ರಾಶಸ್ತ್ಯದ ಮತಗಳನ್ನು ಪಡೆದು ಗೆದ್ದಿದ್ದಾರೆ. ಕಾಂಗ್ರೆಸ್ ಪಕ್ಷವು 11 ಮತಗಳನ್ನು ಹೆಚ್ಚುವರಿಯಾಗಿ ಪಡೆದಿದೆ. ನಮ್ಮ ಪಕ್ಷದ ಶಾಸಕರ ಸಂಖ್ಯೆ 135. ಸರ್ವೋದಯ ಪಕ್ಷದ ‌ಒಬ್ಬರು, ಇಬ್ಬರ ಪಕ್ಷೇತರರು ಸೇರಿ 138 ಶಾಸಕರ ಬೆಂಬಲ ನಮಗಿತ್ತು. ನಾವು 151 ಮತಗಳನ್ನು ಪಡೆದಿದ್ದೇವೆ. ಬಿಜೆಪಿಯ 64 ಮತಗಳಲ್ಲಿ ಅವರು 56 ಪ್ರಥಮ ಪ್ರಾಶಸ್ತ್ಯದ ಮತಗಳನ್ನು ಪಡೆದಿದ್ದಾರೆ. ಒಂದು ಮತವು ತಿರಸ್ಕೃತವಾಗಿದೆ. ಜನತಾದಳದಲ್ಲಿ 18 ಶಾಸಕರಿದ್ದು 14 ಮತಗಳನ್ನು ಅವರ ಅಭ್ಯರ್ಥಿ ಪಡೆದಿದ್ದಾರೆ ಎಂದು ತಿಳಿಸಿದರು.

ನಮಗೆ ಬೆಂಬಲಿಸಿದ ಕರ್ನಾಟಕದ ಎಲ್ಲಾ ಕನ್ನಡಿಗರಿಗೆ ಹಾಗೂ ನಮಗೆ ಬೆಂಬಲಿಸಿದ ಶಾಸಕರಿಗೆ ಧನ್ಯವಾದಗಳು. ಈ ಗೆಲುವು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ.ಹರಿಪ್ರಸಾದ್ ಹಾಗೂ ಪಕ್ಷದ ಶಾಸಕರು ಮತ್ತು ಎಲ್ಲಾ ನಾಯಕರು, ಕಾರ್ಯಕರ್ತರ ಗೆಲುವು . ಕೆಪಿಸಿಸಿ ಅಧ್ಯಕ್ಷರು ಸೇರಿದಂತೆ ಕಾಂಗ್ರೆಸ್ ಪಕ್ಷದ ಐದು ಜನ ಅಭ್ಯರ್ಥಿಗಳು ವಿಧಾನ ಪರಿಷತ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ‌. ಇದು ಕರ್ನಾಟಕದ ಇತಿಹಾಸದಲ್ಲಿಯೇ ಮಹತ್ವದ ದಿನ. ಇತಿಹಾಸ ಮರುಕಳಿಸಿದೆ” ಎಂದರು.

ಗ್ಯಾರಂಟಿ ಯೋಜನೆಗಳನ್ನು ಬಿಜೆಪಿ ಹಾಗೂ ಜನತಾದಳದವರು ಟೀಕೆ ಮಾಡುತ್ತಿದ್ದರು. ಈಗ ಅವರಿಗೆ ತಕ್ಕ ಉತ್ತರ ಸಿಕ್ಕಿದೆ. ಜನತೆಯ ವಿಶ್ವಾಸ ಕಾಂಗ್ರೆಸ್ ಪಕ್ಷದ ಜೊತೆಗಿದೆ ಎಂದು ಪರಿಷತ್ತಿಗೆ ನೂತನವಾಗಿ ಆಯ್ಕೆಯಾದ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಅವರು ಹೇಳಿದರು.

ಬಿಜೆಪಿ ತನ್ನ ಕುಚೋಧ್ಯಗಳನ್ನು ಬಿಟ್ಟು ಜನರ ನೋವು ನಲಿವುಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಾರೆ ಎಂದು ನಾವು ತಿಳಿದುಕೊಂಡಿದ್ದೇವೆ. ಬೇರೆ ಪಕ್ಷದ ಯಾರಿಗೂ ನಾವು ಬೆಂಬಲಿಸಿ ಎಂದು ಕೇಳಿರಲಿಲ್ಲ‌ ಆತ್ಮಸಾಕ್ಷಿಯ ಮತ ನೀಡಿ ಎಂದು ಅವರ ಪಕ್ಷದವರೇ ಹೇಳಿದ್ದರು. ಅವರೇ ಆತ್ಮಸಾಕ್ಷಿಯ ಮತಗಳನ್ನು ನೀಡಿದ್ದಾರೆ. ಮತ ನೀಡಿದ ಅವರಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ. ಮಲ್ಲಿಕಾರ್ಜುನ ಖರ್ಗೆ , ಸೋನಿಯಾಗಾಂಧಿ,  ರಾಹುಲ್ ಗಾಂಧಿ, ಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಜನಪರವಾಗಿ ಮುನ್ನಡೆಯುತ್ತಿದೆ ಎಂದರು.

Related Posts

Leave a Reply

Your email address will not be published. Required fields are marked *