ಉದಯಕಾಲ ನ್ಯೂಸ್, ಬೆಂಗಳೂರು: ಕರ್ನಾಟಕದ ಪೊಲೀಸ್ ನೇಮಕಾತಿಯಲ್ಲಿ ತೃತೀಯ ಲಿಂಗಿ ಅಭ್ಯರ್ಥಿಗಳಿಗೆ ಸೂಕ್ತ ದೈಹಿಕ ಮಾನದಂಡ ಹಾಗೂ ಸಾಮರ್ಥ್ಯ ಪರೀಕ್ಷೆಯಲ್ಲಿ ವಿನಾಯಿತಿ ಕಲ್ಪಿಸದಿರುವುದನ್ನು ಮತ್ತು ಕೆಲವು ಪೊಲೀಸ್ ಪಡೆಗಳಿಂದ ಅವರನ್ನು ಸಂಪೂರ್ಣವಾಗಿ ಹೊರಗಿಟ್ಟಿರುವುದನ್ನು ಪ್ರಶ್ನಿಸಿ ಏಳು ಮಂದಿ ತೃತೀಯ ಲಿಂಗಿ ಅಭ್ಯರ್ಥಿಗಳು ಕರ್ನಾಟಕ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಜೆ.ವಿಕಾಶ್ ಮತ್ತಿತರರು ಸಲ್ಲಿಸಿರುವ ಈ ಅರ್ಜಿಯಲ್ಲಿ, ರಾಜ್ಯ ಸರ್ಕಾರ ಹಾಗೂ ಪೊಲೀಸ್ ನೇಮಕಾತಿ ಪ್ರಾಧಿಕಾರವನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.
ಕರ್ನಾಟಕ ನಾಗರಿಕ ಸೇವೆಗಳ (ಸಾಮಾನ್ಯ ನೇಮಕಾತಿ) ನಿಯಮಗಳು, 1977ರ ನಿಯಮ 9(1ಡಿ) ಅಡಿಯಲ್ಲಿ ತೃತೀಯ ಲಿಂಗಿಗಳಿಗೆ ಶೇ.1ರಷ್ಟು ಸಮತಲ ಮೀಸಲಾತಿ ಕಲ್ಪಿಸಲಾಗಿದೆ. ಆದರೆ, ಪುರುಷ ತೃತೀಯ ಲಿಂಗಿಗಳು ಎಂಬ ಪ್ರತ್ಯೇಕ ವರ್ಗ ಸೃಷ್ಟಿಸಿ, ಸಿಸ್ಜೆಂಡರ್ ಪುರುಷ ಅಭ್ಯರ್ಥಿಗಳಿಗೆ ನಿಗದಿಪಡಿಸಿದ ಕಠಿಣ ದೈಹಿಕ ಮಾನದಂಡಗಳನ್ನೇ ಅನ್ವಯಿಸುತ್ತಿರುವುದು ಕಾನೂನುಬಾಹಿರ ಎಂದು ಅರ್ಜಿದಾರರು ದೂರಿದ್ದಾರೆ. ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾದರೂ, 1,600 ಮೀಟರ್ ಓಟ ಹಾಗೂ ಜಿಗಿತದಂತಹ ಕಠಿಣ ದೈಹಿಕ ಪರೀಕ್ಷೆಗಳಲ್ಲಿ ವಿನಾಯಿತಿ ಇಲ್ಲದೆ ಅನರ್ಹಗೊಳಿಸಲಾಗುತ್ತಿದೆ ಎಂದು ಅಳಲು ತೋಡಿಕೊಂಡಿದ್ದಾರೆ.
ಅಲ್ಲದೆ, 2025ರ ಸರ್ಕಾರದ ನಿರ್ದೇಶನದ ಮೂಲಕ ಕೆಎಸ್ಆರ್ಪಿ, ಐಆರ್ಬಿ ಮತ್ತು ಕೆಎಸ್ಐಎಸ್ಎಫ್ನಂತಹ ಪ್ರಮುಖ ಪೊಲೀಸ್ ಪಡೆಗಳ ನೇಮಕಾತಿಯಿಂದ ತೃತೀಯ ಲಿಂಗಿಗಳನ್ನು ಹೊರಗಿಟ್ಟಿರುವುದನ್ನು ಪ್ರಶ್ನಿಸಲಾಗಿದೆ. ಅರ್ಜಿ ಸಲ್ಲಿಸಲು ಅವಕಾಶ ನೀಡಿ, ದೈಹಿಕ ಮಾನದಂಡಗಳಲ್ಲಿ ಸಡಿಲಿಕೆ ಮಾಡದಿದ್ದರೆ ಮೀಸಲಾತಿಯ ಮೂಲ ಉದ್ದೇಶವೇ ವಿಫಲವಾಗುತ್ತದೆ ಎಂದು ವಾದಿಸಿರುವ ಅರ್ಜಿದಾರರು, ಕರ್ನಾಟಕ ರಾಜ್ಯ ಆಡಳಿತಾತ್ಮಕ ನ್ಯಾಯಮಂಡಳಿಯ (KSAT) ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್ನಿಂದ ನ್ಯಾಯಕ್ಕಾಗಿ ಮೊರೆ ಹೋಗಿದ್ದಾರೆ.
#TransgenderRights #KarnatakaHighCourt #PoliceRecruitment #LegalNews #UdayakalaNews #HorizontalReservation #KarnatakaPolice #TransgenderCommunity #LawNews

