ಉದಯಕಾಲ ನ್ಯೂಸ್, ಶಿವಮೊಗ್ಗ: ರಾಜ್ಯದ ಹಿರಿಯ ರಾಜಕಾರಣಿ ಹಾಗೂ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರಿಗೆ ಮೊಬೈಲ್ ಮೂಲಕ ಕರೆ ಮಾಡಿರುವ ಅನ್ಯಕೋಮಿನ ಇಬ್ಬರು ವ್ಯಕ್ತಿಗಳು, ಅವಾಚ್ಯ ಶಬ್ದಗಳಿಂದ ನಿಂದಿಸಿ ಪ್ರಾಣ ಬೆದರಿಕೆ ಹಾಕಿರುವುದಾಗಿ ಗಂಭೀರ ಆರೋಪ ಕೇಳಿಬಂದಿದೆ. ಈ ಸಂಬಂಧ ತಕ್ಷಣವೇ ಆರೋಪಿಗಳನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಈಶ್ವರಪ್ಪ ಅವರು ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ನಿಖಿಲ್ ಅವರಿಗೆ ಅಧಿಕೃತವಾಗಿ ದೂರು ದಾಖಲಿಸಿದ್ದಾರೆ.
ರಾತ್ರಿ ಸಿನಿಮಾ ನೋಡುತ್ತಿದ್ದಾಗ ಬಂದ ಬೆದರಿಕೆ ಕರೆಗಳು
ಅಕ್ಟೋಬರ್ 17ರ ರಾತ್ರಿ ಈ ಘಟನೆ ನಡೆದಿದ್ದು, ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಅವರು ಮಾಧ್ಯಮಗಳೊಂದಿಗೆ ಮಾತನಾಡಿ ಸಂಪೂರ್ಣ ವಿವರ ಹಂಚಿಕೊಂಡಿದ್ದಾರೆ. “ನಾನು ಕುಟುಂಬದವರ ಜೊತೆ ಚಿತ್ರಮಂದಿರದಲ್ಲಿ ಸಿನಿಮಾ ವೀಕ್ಷಿಸುತ್ತಿದ್ದ ಸಂದರ್ಭದಲ್ಲಿ ರಾತ್ರಿ 8:49ರ ಸುಮಾರಿಗೆ 7019994981 ಮೊಬೈಲ್ ಸಂಖ್ಯೆಯಿಂದ ಕರೆ ಬಂದಿತು. ಫೋನ್ ಮಾಡಿದ ವ್ಯಕ್ತಿ ‘ನೀನು ಈಶ್ವರಪ್ಪನೇ, ಮಾಜಿ ಡಿಸಿಎಂ ಅವರಾ?’ ಎಂದು ಪ್ರಶ್ನಿಸಿ ಏಕಾಏಕಿ ನಿಂದಿಸಲು ಶುರು ಮಾಡಿದನು. ನಾನು ಚಿತ್ರಮಂದಿರದಲ್ಲಿದ್ದೇನೆ, ನಂತರ ಕರೆ ಮಾಡುವುದಾಗಿ ಹೇಳಿದರೂ ಆತ ಬಿಡದೆ ಬೈಯುತ್ತಾ ಫೋನ್ ಕಟ್ ಮಾಡಿದ” ಎಂದು ತಿಳಿಸಿದರು.
ಅದಾದ ಬಳಿಕ ಅದೇ ರಾತ್ರಿ 10:49ರ ಸುಮಾರಿಗೆ ಮತ್ತೊಬ್ಬ ವ್ಯಕ್ತಿ 9723658527 ನಂಬರಿನಿಂದ ಕರೆ ಮಾಡಿ, “ನೀವು ಜಮೀರ್ ಅಹಮದ್ ಅವರ ಬಗ್ಗೆ ಏನೇನು ಮಾತನಾಡಿದ್ದೀರಿ, ನಾನು ನಿಮಗೆ ದಾಖಲೆ ಕೊಡುತ್ತೇನೆ” ಎಂದು ಬೆದರಿಕೆ ಹಾಕುವ ಧಾಟಿಯಲ್ಲಿ ಮಾತನಾಡಿದ್ದಾನೆ. ಈ ಇಬ್ಬರು ವ್ಯಕ್ತಿಗಳು ಉದ್ದೇಶಪೂರ್ವಕವಾಗಿ ತಮ್ಮ ಮೇಲಿನ ದ್ವೇಷದಿಂದ ಅವಾಚ್ಯವಾಗಿ ನಿಂದಿಸಿ, ಜೀವ ಬೆದರಿಕೆ ಹಾಕಿದ್ದಾರೆ ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ರಿಜ್ವಾನ್ ಬೇಗ್ ಹಾಗೂ ಫರಾನ್ ರಶೀದ್ ವಿರುದ್ಧ ದೂರು
ಮಾಜಿ ಡಿಸಿಎಂ ಅವರಿಗೆ ಬೆದರಿಕೆ ಹಾಕಿರುವ ವ್ಯಕ್ತಿಗಳನ್ನು ರಿಜ್ವಾನ್ ಬೇಗ್ ಹಾಗೂ ಫರಾನ್ ರಶೀದ್ ಎಂದು ಗುರುತಿಸಲಾಗಿದ್ದು, ಈ ಇಬ್ಬರ ವಿರುದ್ಧ ರಾಷ್ಟ್ರಭಕ್ತ ಬಳಗದ ಪ್ರಮುಖರೊಂದಿಗೆ ತೆರಳಿ ಎಸ್ಪಿಗೆ ಲಿಖಿತ ದೂರು ಸಲ್ಲಿಸಲಾಗಿದೆ. ತಮಗೆ ಹಾಗೂ ತಮ್ಮ ಕುಟುಂಬಕ್ಕೆ ಈ ದುಷ್ಕರ್ಮಿಗಳಿಂದ ಪ್ರಾಣಾಪಾಯವಿದ್ದು, ಕೂಡಲೇ ಪೊಲೀಸರು ಇವರನ್ನು ಪತ್ತೆ ಹಚ್ಚಿ ಬಂಧಿಸಬೇಕು ಎಂದು ಈಶ್ವರಪ್ಪ ಒತ್ತಾಯಿಸಿದ್ದಾರೆ.
“ಈ ಹಿಂದೆಯೂ ಬೆದರಿಕೆ ಬಂದಿದೆ, ಭದ್ರತೆ ಕೇಳುವುದಿಲ್ಲ”
ಈ ಹಿಂದೆ ಕೂಡ ತಮಗೆ ಹಲವು ಬಾರಿ ಜೀವ ಬೆದರಿಕೆಗಳು ಬಂದಿರುವುದಾಗಿ ತಿಳಿಸಿದ ಅವರು, ಆಗಲೂ ಪೊಲೀಸರಿಗೆ ದೂರು ನೀಡಲಾಗಿತ್ತು ಆದರೆ ಇದುವರೆಗೆ ಆರೋಪಿಗಳನ್ನು ಬಂಧಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಸರ್ಕಾರದಿಂದ ನಿಮಗೆ ಮತ್ತೆ ಹೆಚ್ಚುವರಿ ಭದ್ರತೆ ಕೋರುವಿರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, “ನಾನು ಪದೇ ಪದೇ ಭದ್ರತೆ ಕೇಳುವುದಿಲ್ಲ, ಹಿಂದೆ ಕೇಳಿದ್ದೆ ಅಷ್ಟೇ” ಎಂದು ಸ್ಪಷ್ಟಪಡಿಸಿದರು. ದೂರು ಸ್ವೀಕರಿಸಿರುವ ಎಸ್ಪಿ ನಿಖಿಲ್ ಅವರು ಕೂಡಲೇ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುವುದು ಎಂದು ಭರವಸೆ ನೀಡಿದ್ದಾರೆ. ಹಿರಿಯ ರಾಜಕಾರಣಿಗೆ ಬೆದರಿಕೆ ಬಂದಿರುವ ಈ ಘಟನೆ ಶಿವಮೊಗ್ಗದಲ್ಲಿ ತೀವ್ರ ಸಂಚಲನ ಮೂಡಿಸಿದೆ.
#KSEshwarappa #ShivamoggaNews #DeathThreat #KarnatakaPolice #FormerDCM #CrimeNewsKarnataka #UdayakalaNews #ShivamoggaSP #PoliticalNews

