Wednesday, November 11, 2026
Menu

ಗಾಬರಿ ಬೇಡ, ಎಲ್ಲ ರೈತರಿಗೂ 5,000 ರೂ. ಪರಿಹಾರ ಖಚಿತ ಎಂದ ಸಿಎಂ ಡಿ.ಕೆ. ಶಿವಕುಮಾರ್!

ಉದಯಕಾಲ ನ್ಯೂಸ್, ಬೆಂಗಳೂರು: ರಾಜ್ಯದಲ್ಲಿ ಬರ ಪರಿಹಾರದ ಹಣ ರೈತರ ಬ್ಯಾಂಕ್ ಖಾತೆಗಳಿಗೆ ಕಡಿಮೆ ಪ್ರಮಾಣದಲ್ಲಿ ಜಮೆ ಆಗಿರುವ ಬಗ್ಗೆ ವ್ಯಾಪಕ ಚರ್ಚೆ ಹಾಗೂ ಗೊಂದಲಗಳು ಸೃಷ್ಟಿಯಾಗಿದೆ. ಇದಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್  ಸ್ಪಷ್ಟನೆ ನೀಡಿದ್ದಾರೆ. ರಾಜ್ಯ ಸರ್ಕಾರದ ವತಿಯಿಂದ ಪ್ರತಿ ಅರ್ಹ ರೈತರಿಗೆ ನಿಗದಿಪಡಿಸಿರುವಂತೆ 5,000 ರೂ.ಗಳ ಪರಿಹಾರ ಧನವನ್ನು ಖಂಡಿತವಾಗಿ ನೀಡಲಾಗುವುದು ಎಂದು ಭರವಸೆ ನೀಡಿದ್ದು, ರೈತರು ಯಾವುದೇ ಕಾರಣಕ್ಕೂ ಆತಂಕಪಡುವ ಅಗತ್ಯವಿಲ್ಲ ಎಂದು ಅಭಯ ನೀಡಿದ್ದಾರೆ.

“ಯಾರೂ ಗಾಬರಿ ಪಡಬೇಡಿ, ಎಲ್ಲರಿಗೂ ಹಣ ಸಿಗಲಿದೆ”

ರಾಜ್ಯದ ವಿವಿಧ ಕಡೆಗಳಲ್ಲಿ ರೈತರ ಖಾತೆಗಳಿಗೆ ನಿರೀಕ್ಷೆಗಿಂತ ಕಡಿಮೆ ಬರ ಪರಿಹಾರದ ಹಣ ಜಮೆಯಾಗಿರುವ ಕುರಿತು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಿಎಂ ಡಿ.ಕೆ. ಶಿವಕುಮಾರ್ ಒಬ್ಬ ರೈತನಿಗೆ 5,000 ರೂ.  ಫಿಕ್ಸ್ ಮಾಡಲಾಗಿದೆ. ಕೆಲವರ ಖಾತೆಗಳಿಗೆ ಹಣ ಜಮೆಯಾಗುವಾಗ ದೋಷಗಳಾಗಿರಬಹುದು, ಅದೆನ್ನೆಲ್ಲವನ್ನೂ ನಾವು ಪರಿಶೀಲಿಸಿ ಸರಿಪಡಿಸುತ್ತೇವೆ ಎಂದು ತಿಳಿಸಿದರು.

ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಈ ಕುರಿತು ತಪ್ಪು ಸಂದೇಶಗಳನ್ನು ವೈರಲ್ ಮಾಡುತ್ತಿದ್ದು, ಇದಕ್ಕೆ ರೈತರು ಕಿವಿಗೊಡಬಾರದು ಎಂದರು. ಕೇಂದ್ರ ಸರ್ಕಾರದಿಂದ ಬರ ಪರಿಹಾರದ ಅನುದಾನ ತಡವಾದರೂ ಸಹ, ರಾಜ್ಯ ಸರ್ಕಾರವೇ ಸ್ವಂತ ಸಂಪನ್ಮೂಲದಿಂದ ಪ್ರತಿ ರೈತನಿಗೆ 5,000 ರೂ.ಗಳವರೆಗೆ ಪರಿಹಾರ ನೀಡಬೇಕು ಎಂದು ದೃಢವಾದ ತೀರ್ಮಾನ ಕೈಗೊಂಡಿದೆ. ಈಗಾಗಲೇ ಈ ಪ್ರಕ್ರಿಯೆ ಚಾಲನೆಯಲ್ಲಿದ್ದು, ಬಾಕಿ ಇರುವ ಎಲ್ಲಾ ರೈತರ ಖಾತೆಗಳಿಗೂ ಹಂತ ಹಂತವಾಗಿ ಹಣ ಜಮೆ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದರು.

ತಾಂತ್ರಿಕ ದೋಷ ಹಾಗೂ ಸಾಲದ ಖಾತೆಗಳ ಅಟ್ಯಾಚ್‌ಮೆಂಟ್ ಕಾರಣ: ಸಿಎಂ ಸ್ಪಷ್ಟನೆ

ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ರೀತಿ ಕಡಿಮೆ ಹಣ ಜಮೆಯಾಗಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, ಇದರಲ್ಲಿ ಅಧಿಕಾರಿಗಳ ಯಾವುದೇ ನಿರ್ಲಕ್ಷ್ಯವಿಲ್ಲ ಎಂದು ಸಮರ್ಥಿಸಿಕೊಂಡರು. ಬದಲಿಗೆ, ಕೆಲವು ರೈತರ ಬ್ಯಾಂಕ್ ಖಾತೆಗಳು ಸರಿಯಿಲ್ಲದಿರುವುದು ಅಥವಾ ಆಧಾರ್ ಲಿಂಕ್ ಆಗದಿರುವುದು ಪ್ರಮುಖ ಕಾರಣವಾಗಿದೆ ಎಂದರು.

ಅಲ್ಲದೆ, ಕೆಲವು ರೈತರ ಬ್ಯಾಂಕ್ ಖಾತೆಗಳು ಹಳೆಯ ಸಾಲಗಳಿಗೆ ಅಥವಾ ಓವರ್‌ಡ್ರಾಫ್ಟ್‌ಗೆ ಅಟ್ಯಾಚ್ ಆಗಿರುವ ಕುರಿತು ದಾಖಲೆಗಳಿವೆ. ಇಂತಹ ತಾಂತ್ರಿಕ ಹಾಗೂ ದಾಖಲೆಗಳ ದೋಷಗಳನ್ನು ಸರಿಪಡಿಸಲು ಅಧಿಕಾರಿಗಳು ಈಗ ಪರಿಶೀಲನೆ ನಡೆಸುತ್ತಿದ್ದಾರೆ. ಪರಿಶೀಲನೆ ಪೂರ್ಣಗೊಂಡ ತಕ್ಷಣ ಯಾವುದೇ ತೊಂದರೆಯಿಲ್ಲದೆ ಅರ್ಹ ರೈತರ ಕೈಗೆ ಸಂಪೂರ್ಣ ಪರಿಹಾರದ ಹಣ ತಲುಪಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸರ್ಕಾರದ ಈ ಸ್ಪಷ್ಟನೆಯಿಂದ ರೈತರಿಗೆ ದೊಡ್ಡ ಮಟ್ಟದ ಸಮಾಧಾನ ಸಿಕ್ಕಂತಾಗಿದೆ.

#DroughtRelief #CMDKShivakumar #KarnatakaFarmers #UdayakalaNews #GovtOfKarnataka #FarmerUpdates #NewsUpdate

Related Posts

Leave a Reply

Your email address will not be published. Required fields are marked *