ಹಾಸನದಲ್ಲಿ ಕಾಂಗ್ರೆಸ್ ನಾಯಕರು ಜನರ ತೆರಿಗೆ ಹಣದಲ್ಲಿ ಸಮಾವೇಶ ಮಾಡಿಕೊಂಡು ದೇವೆಗೌಡರ ಕುಟುಂಬವನ್ನು ನಿಂದಿಸಿದರು. ಅವರಿಗೆ ಸಮಾವೇಶ ಮಾಡಿ ಉತ್ತರ, ತಿರುಗೇಟು ಕೊಡಬೇಕು ಎಂದು ನಾನಾದರೂ ಭಾವಿಸುವುದಿಲ್ಲ ಎಂದು ನಿಖಿಲ್ ಕುಮಾರಸ್ವಾಮಿ ಅವರು ಮಾರ್ಮಿಕವಾಗಿ ಹೇಳಿದರು.
ಮಂಡ್ಯದಲ್ಲಿ ಅದ್ದೂರಿಯಾಗಿ ಕುಮಾರಸ್ವಾಮಿ ಅವರ ಜನ್ಮದಿನ ಆಚರಿಸಬೇಕು ಎಂದು ನಮ್ಮ ನಾಯಕರು ನಿರ್ಧಾರ ಮಾಡಿದ್ದರು. ಆದರೆ, ಮಂಡ್ಯ ಸಾಹಿತ್ಯ ಸಮ್ಮೇಳನ, ವಿಧಾನಸಭೆ ಮತ್ತು ಸಂಸತ್ ಅಧಿವೇಶನ ನಡೆಯುತ್ತಿದೆ. ಹಾಗೆಯೇ ಕೇಂದ್ರ ಸಚಿವರಿಗೂ ಸಾಕಷ್ಟು ಪೂರ್ವಾನಿಗದಿತ ಕಾರ್ಯಕ್ರಮಗಳು ಇವೆ. ಈ ಹಿನ್ನೆಲೆಯಲ್ಲಿ ಸ್ವತಃ ಕಾರ್ಯಕ್ರಮ ಬೇಡವೆಂದು ಸ್ವತಃ ಕುಮಾರಸ್ವಾಮಿ ಅವರೇ ಸೂಚಿಸಿದ್ದಾರೆ ಎಂದು ನಿಖಿಲ್ ಅವರು ಪ್ರಶ್ನೆಯೊಂದಕ್ಕೆ ಉತ್ತರ ಕೊಟ್ಟರು.
ದೆಹಲಿಯಲ್ಲಿ ಸೋಮವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗ ಸೋಲಿಗೆ ಕಾರಣ ಹುಡುಕುವುದಿಲ್ಲ. ರಾಜಕೀಯ ಜೀವನದಲ್ಲಿ ಅನಿರೀಕ್ಷಿತ ನಿರ್ಧಾರ ಮಾಡಿದೆ. ಎರಡು ಪಕ್ಷಗಳ ಕಾರ್ಯಕರ್ತರಿಗಾಗಿ ಸ್ಪರ್ಧೆ ಅನಿರ್ವಾಯವಾಗಿತ್ತು. ಚುನಾವಣೆಯ ಕೊನೆಯ ಹಂತದಲ್ಲಿ ಮೈತ್ರಿಗೆ ಕಪ್ಪುಚುಕ್ಕೆ ಬರದಂತೆ ಕುಮಾರಸ್ವಾಮಿ ನಿರ್ಧಾರ ಮಾಡಿದರು ಎಂದರು.
ಉಪ ಚುನಾವಣೆಯಲ್ಲಿ ಇಂಥ ಫಲಿತಾಂಶವನ್ನು ನಾನು ನಿರೀಕ್ಷೆ ಮಾಡಿರಲಿಲ್ಲ. ಸೋಲಿಗೆ ಸಾಕಷ್ಟು ಕಾರಣಗಳಿವೆ. ಚುನಾವಣೆ ಹಿಂದಿನ 48 ಗಂಟೆಗಳಲ್ಲಿ ಮಹಿಳೆಯರ ಖಾತೆಗೆ ಎರಡು ತಿಂಗಳ ಗೃಹಲಕ್ಷಿ ಹಣ ಒಟ್ಟಿಗೆ ಜಮೆ ಮಾಡಿದ್ದಾರೆ. ಅದನ್ನು ಪ್ರಶ್ನೆ ಮಾಡಬೇಕಿದೆ. ಸರ್ಕಾರ ಆಡಳಿತವನ್ನು ಎಷ್ಟರಮಟ್ಟಿಗೆ ದುರ್ಬಳಕೆ ಮಾಡಿಕೊಂಡಿದೆ ಎನ್ನುವುದಕ್ಕೆ ಇದೊಂದು ಉದಾಹರಣೆ ಅಷ್ಟೆ ಎಂದರು.
ಮೈತ್ರಿಕೂಟದ ಎಲ್ಲಾ ನಾಯಕರ ಅಣತಿಯಂತೆ ಕೊನೆ ಕ್ಷಣದಲ್ಲಿ ನಾನು ಸ್ಪರ್ಧೆ ಮಾಡಬೇಕಾಯಿತು. ಕೇವಲ 15 ದಿನಗಳು ಮಾತ್ರ ಚುನಾವಣೆ ನಡೆಸಲು ನಮ್ಮ ಬಳಿ ಸಮಯವಿತ್ತು.ಅವರಿಗೆ ಸಾಕಷ್ಟು ಸಮಯ ಸಿಕ್ಕಿತ್ತು, ನಮ್ಮ ಕಡೆ ಅಭ್ಯರ್ಥಿ ಆಯ್ಕೆಯಲ್ಲಿ ವಿಳಂಬವಾಯಿತು. ನಮಗೆ ಜಯ ಸಿಕ್ಕದೆ ಹೋದರೂ ಫಲ ಸಿಕ್ಕಿದೆ. ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.
ಒಂದು ಸಮುದಾಯಕ್ಕೆ ದೇವೇಗೌಡರು ಅನೇಕ ಕೊಡುಗೆಗಳನ್ನು ನೀಡಿದ್ದರು. ಅವರು ನಮ್ಮ ಕೈ ಹಿಡಿಯಲಿಲ್ಲ. ನಾಗಮಂಗಲದಲ್ಲಿ ಕೋಮು ಸಂಘರ್ಷ ಉಂಟಾಗಿತ್ತು. ಸಂಘರ್ಷದಲ್ಲಿ ಹಾನಿ ಉಂಟಾದ ಅಂಗಡಿ ಜನರಿಗೆ ಕುಮಾರಸ್ವಾಮಿ ಅವರು ಪರಿಹಾರ ನೀಡಿದ್ದಾರೆ. ಮುಸ್ಲಿಂ ಸಮುದಾಯಕ್ಕೂ ಪರಿಹಾರ ನೀಡಿದ್ದಾರೆ. ಚನ್ನಪಟ್ಟಣದ ಇತಿಹಾಸದಲ್ಲಿಯೇ 1200 ಕೋಟಿ ರೂ. ಅನುದಾನ ತಂದು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಆದರೂ ಸೋತಿದ್ದೇವೆ, ಇದೊಂದು ನಮಗೆ ಪಾಠ ಎಂದರು ಅವರು.