ನವದೆಹಲಿ: ನವರಾತ್ರಿ ಮತ್ತು ದೀಪಾವಳಿಯಂತಹ ಪ್ರಮುಖ ಹಬ್ಬಗಳ ಸಂದರ್ಭದಲ್ಲಿ ಬೀದಿಬದಿ ವ್ಯಾಪಾರಿಗಳನ್ನು ಅನಗತ್ಯವಾಗಿ ತೆರವುಗೊಳಿಸದಂತೆ ದೇಶದ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (NHRC) ಕಟ್ಟುನಿಟ್ಟಿನ ಸೂಚನೆ ನೀಡಿದೆ. ಹಬ್ಬದ ಸಂಭ್ರಮದಲ್ಲಿ ಬದುಕುಕಟ್ಟಿಕೊಳ್ಳುವ ಸಣ್ಣ ವ್ಯಾಪಾರಿಗಳಿಗೆ ನೆರವಾಗುವಂತೆ ಈ ನಿರ್ದೇಶನ ಹೊರಡಿಸಲಾಗಿದೆ.ಹಬ್ಬದ ಈ ವಿಶೇಷ ದಿನಗಳಲ್ಲಿ ಸ್ಥಳೀಯ ಮಾರಾಟಗಾರರು, ಬೀದಿ ವ್ಯಾಪಾರಿಗಳು, ಕುಂಬಾರರು ಹಾಗೂ ಇನ್ನಿತರ ಸಣ್ಣ ಕೈಗಾರಿಕೆ ಮತ್ತು ವ್ಯಾಪಾರಿಗಳ ಹಕ್ಕುಗಳನ್ನು ಸಂಪೂರ್ಣವಾಗಿ ರಕ್ಷಿಸಬೇಕು ಎಂದು ಆಯೋಗವು ತನ್ನ ಆದೇಶದಲ್ಲಿ ತಿಳಿಸಿದೆ.
ವ್ಯಾಪಾರಕ್ಕೆ ಪರ್ಯಾಯ ಸ್ಥಳ ನೀಡಿ
ಅಗ್ನಿ ಸುರಕ್ಷತೆ ಅಥವಾ ಸಾರ್ವಜನಿಕ ಸುರಕ್ಷತೆಯ ದೃಷ್ಟಿಯಿಂದ ಒಂದು ವೇಳೆ ವ್ಯಾಪಾರಿಗಳನ್ನು ಸ್ಥಳಾಂತರಿಸುವುದು ಅನಿವಾರ್ಯವಾದರೆ, ಅಂತಹ ಸಂದರ್ಭಗಳಲ್ಲಿ ಆಡಳಿತ ಯಂತ್ರವು ಅವರಿಗೆ ತಕ್ಷಣವೇ ಪರ್ಯಾಯ ಮಾರಾಟ ಸ್ಥಳವನ್ನು ಕಲ್ಪಿಸಬೇಕು. ಯಾವುದೇ ಕಾರಣಕ್ಕೂ ವ್ಯಾಪಾರಿಗಳ ಸರಕುಗಳನ್ನು ಅನಿಯಮಿತವಾಗಿ ಮುಟ್ಟುಗೋಲು ಹಾಕಿಕೊಳ್ಳಬಾರದು ಎಂದು ಎನ್‌ಎಚ್‌ಆರ್ಸಿ ಸ್ಪಷ್ಟಪಡಿಸಿದೆ.
ಕಿರುಕುಳ ಮತ್ತು ಸುಲಿಗೆ ಮಾಡಿದ್ರೆ ಕಾನೂನು ಕ್ರಮ
ವ್ಯಾಪಾರಿಗಳಿಗೆ ಸ್ಥಳೀಯವಾಗಿ ಎದುರಾಗುವ ಕಿರುಕುಳ, ಸುಲಿಗೆ ಹಾಗೂ ಅನಗತ್ಯ ಹಸ್ತಕ್ಷೇಪದ ದೂರುಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ‘ಸ್ಥಳೀಯರಿಗೆ ಧ್ವನಿ’ (Vocal for Local) ಮನೋಭಾವಕ್ಕೆ ಅನುಗುಣವಾಗಿ ಸ್ಥಳೀಯ ವ್ಯಾಪಾರಗಳು ಮತ್ತು ಸಾಂಪ್ರದಾಯಿಕ ಉದ್ಯಮಗಳಿಗೆ ಉತ್ತೇಜನ ನೀಡುವಂತೆ ಆಯೋಗ ನಿರ್ದೇಶಿಸಿದೆ.
ಅಕ್ಟೋಬರ್ 18ರೊಳಗೆ ವರದಿ ಸಲ್ಲಿಕೆಗೆ ತಾಕೀತು
ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ನೀಡಿರುವ ಈ ಪ್ರಮುಖ ನಿರ್ದೇಶನಗಳನ್ನು ಎಲ್ಲಾ ಜಿಲ್ಲಾಧಿಕಾರಿಗಳು, ಪುರಸಭೆಗಳು ಹಾಗೂ ಪೊಲೀಸ್ ಅಧಿಕಾರಿಗಳಿಗೆ ತಲುಪಿಸಬೇಕು. ಅಲ್ಲದೆ, ಈ ವಿಚಾರವಾಗಿ ಕೈಗೊಂಡಿರುವ ಕ್ರಮಗಳ ಕುರಿತು ಪ್ರಗತಿ ವರದಿಯನ್ನು ಅಕ್ಟೋಬರ್ 18ರೊಳಗೆ ಕಳುಹಿಸಿಕೊಡುವಂತೆ ಎಲ್ಲಾ ರಾಜ್ಯ ಸರ್ಕಾರಗಳಿಗೆ NHRC ಸೂಚನೆ ನೀಡಿದೆ.
#NHRC #StreetVendors #FestiveSeason #Navratri #Diwali #UdayakalaNews #SmallBusinesses #LocalVendors #HumanRightsIndia #VocalForLocal


