ಭಾರತೀಯರ ಹೆಮ್ಮೆಯಾಗಿರುವ ಮಸಾಲ ದೋಸೆ ಅಂತರಾಷ್ಟ್ರೀಯ ಆಹಾರ ಮಾರ್ಗದರ್ಶಿ ‘ಟೇಸ್ಟ್ಅಟ್ಲಾಸ್’ನ ವಿಶ್ವದ 50 ಅತ್ಯುತ್ತಮ ಪ್ಯಾನ್ಕೇಕ್ಗಳ ಪಟ್ಟಿಯಲ್ಲಿ 6ನೇ ಸ್ಥಾನ ಪಡೆದುಕೊಂಡಿದೆ.
ದಕ್ಷಿಣ ಭಾರತದ ಈ ನೆಚ್ಚಿನ ಆಹಾರ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತೀಯ ಪಾಕಪದ್ಧತಿಯ ಖ್ಯಾತಿ ಹೆಚ್ಚಿಸಿದೆ. ಭಾರತೀಯ ಆಹಾರ ಪದ್ಧತಿಯ ವಿವಿಧ ಮೂಲೆಗಳ ಆಹಾರ ಪ್ರಿಯರು ಮತ್ತು ವಿಮರ್ಶಕರು ನೀಡಿರುವ ರೇಟಿಂಗ್ ಆಧಾರದ ಮೇಲೆ ಮಸಾಲ ದೋಸೆಗೆ 4.3 ಸ್ಟಾರ್ ರೇಟಿಂಗ್ ನೀಡಲಾಗಿದೆ.
ಮಸಾಲ ದೋಸೆಯ ಗರಿಗರಿಯಾದ ವಿನ್ಯಾಸ, ಒಳಗಿನ ಮಸಾಲೆಭರಿತ ಆಲೂಗಡ್ಡೆ ಪಲ್ಯ ಮತ್ತು ಚಟ್ನಿ-ಸಾಂಬಾರ್ ಜೊತೆಗೆ ಸವಿಯುವ ಶೈಲಿಯನ್ನು ಟೇಸ್ಟ್ ಅಟ್ಲಾಸ್ ವಿಶೇಷವಾಗಿ ಶ್ಲಾಘಿಸಿದೆ. ವಿದೇಶಗಳಲ್ಲಿ ಜನಪ್ರಿಯತೆಯಲ್ಲಿ ಮುಂಚೂಣಿಯಲ್ಲಿರುವ ಸಿಹಿಯಾದ ಪ್ಯಾನ್ ಕೇಕ್ ಅನ್ನು ಭಾರತದ ಈ ಖಾರವಾದ ಮತ್ತು ಸತ್ವಯುತವಾದ ಮಸಾಲ ದೋಸೆ ಹಿಂದಿಕ್ಕಿ ಜಾಗತಿಕ ಆಹಾರ ಪ್ರಿಯರ ಮೆಚ್ಚಿನ ಆಯ್ಕೆಯಾಗಿ ಹೊರಹೊಮ್ಮಿದೆ.
ಅಕ್ಕಿ ಮತ್ತು ಉದ್ದಿನ ಬೇಳೆಯ ಹಿಟ್ಟನ್ನು ಹುದುಗಿಸಿ ತಯಾರಿಸುವ ಈ ದೋಸೆ, ಆರೋಗ್ಯ ಮತ್ತು ರುಚಿಯಲ್ಲೂ ಉತ್ತಮ ಎನ್ನುವ ಹೆಗ್ಗಳಿಕೆ ಹೊಂದಿದೆ. ಜಾಗತಿಕವಾಗಿ ಮಸಾಲೆದೋಸೆಗೆ ಸಿಕ್ಕಿರುವ ಗೌರವಕ್ಕೆ ದೋಸೆ ಪ್ರಿಯರು ಸಾಮಾಜಿಕ ಜಾಲತಾಣಗಳಲ್ಲಿ ಸಂಭ್ರಮ ವ್ಯಕ್ತಪಡಿಸುತ್ತಿದ್ದಾರೆ. ಮಸಾಲ ದೋಸೆ ಕೇವಲ ಒಂದು ಆಹಾರವಲ್ಲ, ಒಂದು ಭಾವನೆ ಎಂದು ಬರೆದುಕೊಂಡಿದ್ದಾರೆ. ಅಟ್ಲಾಸ್ ಪಟ್ಟಿಯಲ್ಲಿ ಭಾರತದ ರೊಟ್ಟಿ, ನಾನ್ ಮತ್ತು ಸಮೋಸಾಗಳು ಈಗಾಗಲೇ ಸ್ಥಾನ ಪಡೆದಿದ್ದು, ಆ ಪಟ್ಟಿಗೆ ಮಸಾಲ ದೋಸೆಯೂ ಸೇರ್ಪಡೆಯಾಗಿದೆ.


