Menu

ಹಂದಿಗಾಗಿ ಹಾಕಿದ್ದ ವಿದ್ಯುತ್‌ಬಲೆಗೆ ಸಿಲುಕಿ ವ್ಯಕ್ತಿ ಸಾವು: ಶವ ಗುಟ್ಟಾಗಿ ಹೂಳಿದ ಆರೋಪಿಗಳು

ಚಿಕ್ಕಮಗಳೂರಿನ ಕಡೂರು ತಾಲೂಕಿನಲ್ಲಿ ಕಾಡುಹಂದಿ ಬೇಟೆಗಾಗಿ ಅಕ್ರಮವಾಗಿ ಅಳವಡಿಸಿದ್ದ ವಿದ್ಯುತ್ ತಂತಿ ತಗುಲಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಬೇಟೆಗಾರರು ಶವವನ್ನು ಗುಟ್ಟಾಗಿ ಹೂತುಹಾಕಿರುವ ಘಟನೆ ಬೆಳಕಿಗೆ ಬಂದಿದೆ.

ಯಗಟಿ ಸಮೀಪದ ದೊಣ್ಣೆಕೋರನಹಳ್ಳಿ ಗ್ರಾಮದ ಕರಿಯಪ್ಪ (52) ವಿದ್ಯುತ್ ತಂತಿ ತಗುಲಿ ಮೃತಪಟ್ಟವರು.  ಜಮೀನಿನಲ್ಲಿ ಕಾಡುಹಂದಿಗಳ ಹಾವಳಿ ತಡೆಯಲು ಬೇಟೆಗಾರರು ವಿದ್ಯುತ್ ತಂತಿ ಅಳವಡಿಸಿದ್ದರು. ಈ ವಿದ್ಯುತ್ ಲೈನ್‌ಗೆ ಕರಿಯಪ್ಪ ಆಕಸ್ಮಿಕವಾಗಿ ಸಿಲುಕಿದ್ದು, ಸ್ಥಳದಲ್ಲೇ ಅಸು ನೀಗಿದ್ದಾರೆ. ವಿಷಯ ತಿಳಿದ ಬೇಟೆಗಾರರು ಯಾರಿಗೂ ತಿಳಿಯದಂತೆ ಶವವನ್ನು ಜಮೀನಿನಲ್ಲೇ ಹೂತುಹಾಕಿ ಸಾಕ್ಷ್ಯ ನಾಶಪಡಿಸಲು ಯತ್ನಿಸಿದ್ದಾರೆ.

ಕರಿಯಪ್ಪ ಎಷ್ಟು ಹೊತ್ತಾದರೂ ಮನೆಗೆ ಬಾರದಿದ್ದಾಗ ಆತಂಕಗೊಂಡ ಕುಟುಂಬಸ್ಥರು ಹುಡುಕಾಟ ನಡೆಸಿದ್ದಾರೆ. ಸಮೀಪದ ಜಮೀನಿನ ಬಳಿ ಇದ್ದ ಸಿಸಿ ಕ್ಯಾಮೆರಾವನ್ನು ಪರಿಶೀಲಿಸಿದಾಗ ಕರಿಯಪ್ಪ ಓಡಾಡುತ್ತಿರುವ ದೃಶ್ಯ ಪತ್ತೆಯಾಗಿದೆ. ಕೆಲವೇ ಗಂಟೆಗಳ ನಂತರ ಅದೇ ಮಾರ್ಗದಲ್ಲಿ ಮತ್ತೊಬ್ಬ ವ್ಯಕ್ತಿ ಸಂಶಯಾಸ್ಪದವಾಗಿ ಓಡಾಡುತ್ತಿರುವುದು ಪತ್ತೆಯಾಗಿದೆ. ಆ ವ್ಯಕ್ತಿಯನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದಾಗ ಪ್ರಕರಣ ಬಯಲಾಗಿದೆ.

ಯಗಟಿ ಪೊಲೀಸರು ಕಾರ್ಯಾಚರಣೆ ನಡೆಸಿ ಚಂದ್ರಪ್ಪ, ಕೆಂಚಪ್ಪ ಹಾಗೂ ಯದುಕುಮಾರ ಎಂಬ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಇವರು ಅಕ್ರಮ ವಿದ್ಯುತ್‌ ತಂತಿ ಹಾಕಿದ್ದ ಜಾಗದಲ್ಲೇ ಕರಿಯಪ್ಪ ಮೃತಪಟ್ಟಿದ್ದನ್ನು ಒಪ್ಪಿಕೊಂಡಿದ್ದಾರೆ. ಅಹಿತಕರ ಘಟನೆ ನಡೆಯದಂತೆ ಮತ್ತು ಸಾಕ್ಷ್ಯಗಳಿಗೆ ಧಕ್ಕೆಯಾಗದಂತೆ ಸ್ಥಳದಲ್ಲಿ ಪೊಲೀಸರು ಬಿಗಿ ಭದ್ರತೆ ನಿಯೋಜಿಸಿದ್ದಾರೆ. ಈ ಸಂಬಂಧ ಯಗಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.

Related Posts

Leave a Reply

Your email address will not be published. Required fields are marked *