Menu

ಹಿರಿಯೂರಿನ 14 ಕೆರೆಗಳಿಗೆ ನೀರು ತುಂಬಿಸಲು 244 ಕೋಟಿ ರೂ. ಯೋಜನೆ: ಸಿಎಂ ಡಿಕೆ ಶಿವಕುಮಾರ್‌

ಹಿರಿಯೂರಿನ  14 ಕೆರೆಗಳಿಗೆ ನೀರು ತುಂಬಿಸಬೇಕು ಎನ್ನುವುದು  ಮಾಜಿ ಸಚಿವ ದಿವಂಗತ ಡಿ. ಸುಧಾಕರ ಅವರ  ಕನಸಾಗಿತ್ತು. ಈ ಯೋಜನೆ ಮಾಡಲು ನನ್ನ ಬಳಿ ಅವರು ಕೊನೆಯದಾಗಿ ಮಾತು ತೆಗೆದುಕೊಂಡಿದ್ದರು. ಆ ಮಾತನ್ನು ಉಳಿಸಿಕೊಳ್ಳಲು  ಸಚಿವ ಸಂಪುಟದಲ್ಲಿ 244 ಕೋಟಿ ರೂ. ಮೊತ್ತದ ಯೋಜನೆಗೆ ಒಪ್ಪಿಗೆ ನೀಡಿದ್ದೇವೆ ಎಂದು ಎಂದು ಸಿಎಂ ಡಿ ಕೆ ಶಿವಕುಮಾರ್  ಹೇಳಿದ್ದಾರೆ.

ಚಿತ್ರದುರ್ಗದ ಹಿರಿಯೂರಿನ ನೆಹರೂ ಮೈದಾನದಲ್ಲಿ  ಸುಧಾಕರ್ ಅವರ ನುಡಿನಮನ ಕಾರ್ಯಕ್ರಮದಲ್ಲಿ ಸಿಎಂ ಮಾತನಾಡಿದರು. ರೈತರ ಸಂಕಷ್ಟಗಳಿಗೆ ಸದಾ ಸ್ಪಂದಿಸುತ್ತಿದ್ದ ಸುಧಾಕರ್ ಅವರ ಬಹುದೊಡ್ಡ ಕನಸಾಗಿದ್ದ 14 ಕೆರೆಗಳಿಗೆ ನೀರುಣಿಸುವ ಯೋಜನೆಗೆ ಅನುಮೋದನೆ ನೀಡಬೇಕೆಂದು ನಾನು ಜಲಸಂಪನ್ಮೂಲ ಸಚಿವನಾಗಿದ್ದಾಗ ಒತ್ತಾಯಿಸಿದ್ದರು. ಆ ಯೋಜನೆ ಜಾರಿಗೊಳಿಸಲು ನಾವು ಮುಂದಾಗಿದ್ದೇವೆ ಎಂದರು.

ಅಮ್ಮನ ನೆನಪು ಪ್ರೀತಿಯ ಮೂಲಕ, ದೇವರ ನೆನಪು ಭಕ್ತಿಯ ಮೂಲ, ಗುರುವಿನ ನೆನಪು ಜ್ಞಾನದ ಮೂಲ, ಈ ಮೂರರ ನೆನಪು ಮನುಷ್ಯತ್ವಕ್ಕೆ ಮೂಲ. ಸುಧಾಕರ್ ನೆನಪು ಮೋಕ್ಷಕ್ಕೆ ಮೂಲ. ಸುಧಾಕರ್ ಕೇವಲ ಮಂತ್ರಿಯಲ್ಲ, ನನ್ನ ಆತ್ಮೀಯ ಸ್ನೇಹಿತ, ಕುಟುಂಬದ ಸದಸ್ಯರಾದ ದಿವಂಗತ ಡಿ ಸುಧಾಕರ್ ಅವರಿಗೆ ನುಡಿ ನಮನ ಸಲ್ಲಿಸಲು ಬಯಸುತ್ತೇವೆ ಎಂದರು.

ನಾನು ಹಾಗೂ ಅವರ ಚಿಕ್ಕಪ್ಪನವರು ಬಂಗಾರಪ್ಪ ಅವರ ಕಾಲದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದೆವು. ನಾನು ಸಚಿವನಾಗಿದ್ದೆ, ಅವರು ಮುಖ್ಯ ಸಚೇತಕರಾಗಿದ್ದರು. ಸುಧಾಕರ್ ಜಾತಿ ಆಧಾರದ ಮೇಲೆ ರಾಜಕಾರಣ ಮಾಡದೇ ನೀತಿಯ ಮೇಲೆ ರಾಜಕಾರಣ ಮಾಡಿದವರು. ಮಾನವ ಧರ್ಮದವನ್ನು ನಂಬಿದ್ದರು. ಎಲ್ಲಾ ವರ್ಗದ ಜನರನ್ನು ಒಟ್ಟಿಗೆ ತೆಗೆದುಕೊಂಡು ಹೋಗಿ, ಈ ಜಿಲ್ಲೆಯನ್ನು ಶಾಂತಿಯ ತೋಟವಾಗಿ ನಿರ್ಮಿಸಿದ್ದರು ಎಂದು ಶ್ಲಾಘಿಸಿದರು.

ಜಿಲ್ಲೆಯಲ್ಲಿ ಎಲ್ಲರನ್ನು ಒಟ್ಟಿಗೆ ತೆಗೆದುಕೊಂಡು ಹೋಗಿ, ಹೇಗೆ ಅಭಿವೃದ್ಧಿ ಮಾಡಿದ್ದಾರೆ ಎಂದು ನೀವು ನೋಡಿದ್ದೀರಿ. ಅವರು ರಾಜಕಾರಣ ಮಾಡುವುದರ ಜೊತೆಗೆ ಸರಳತೆಗೆ ಹೆಸರಾಗಿದ್ದರು. ಕೊಡುಗೈ ದಾನಿಯಾಗಿದ್ದರು. ಬಹಳ ಸರಳತೆಯಿಂದ ಹಿರಿಯೂರು ಹಾಗೂ ಚಳ್ಳಕೆರೆ ಭಾಗದ ಜನರ ಬದುಕಿಗೆ ನೀರಾವರಿ ಬಲ ತುಂಬಲು ದಿಟ್ಟ ನಿರ್ಧಾರ ಮಾಡಿದ್ದರು ಎಂದು ಸ್ಮರಿಸಿದರು.

ನಾವು ಹೋರಾಟ ಮಾಡದಿದ್ದರೆ, ಪ್ರಗತಿ ಸಾಧಿಸಲು ಸಾಧ್ಯವಿಲ್ಲ. ರಾಹುಲ್ ಗಾಂಧಿ ಅವರು ಭಾರತ ಜೋಡೋ ಯಾತ್ರೆ ಮಾಡುವಾಗ ಈ ಚಿತ್ರದುರ್ಗದಲ್ಲಿ ಮಳೆ ಬಂದು ಸಮಸ್ಯೆ ಆದಾಗ ನಿಮ್ಮೆಲ್ಲರ ಸಹಕಾರದಿಂದ ಸುಧಾಕರ್ ಅವರು ಅದನ್ನು ಹೇಗೆ ನಿಭಾಯಿಸಿದರು ಎಂಬುದನ್ನು ನೋಡಿದ್ದೇವೆ. ಅವರು ನಮ್ಮನ್ನು ಅಗಲಿದ ಸುದ್ದಿ ತಿಳಿದ ತಕ್ಷಣ, ರಾಹುಲ್ ಗಾಂಧಿ ಅವರು ಸುಧಾಕರ್ ಅವರ ಬೆನ್ನಿಗೆ ನಿಲ್ಲಲಿದೆ ಎಂಬ ಸಂದೇಶ ರವಾನಿಸಿದರು ಎಂದರು.

ಮಾನವ ಜನ್ಮಕ್ಕಿಂತ ಮಾನವೀಯತೆ ದೊಡ್ಡದು ಎಂದು ಬಸವಣ್ಣನವರು ನಮಗೆ ಮಾರ್ಗದರ್ಶನ ನೀಡಿದ್ದಾರೆ. ಶಾಸಕರಾದ ವೀರೇಂದ್ರ ಪಪ್ಪಿ, ಆಂಜನೇಯ, ಚಂದ್ರಪ್ಪ, ಗೋಪಾಲಕೃಷ್ಣ ಅವರು ಸೇರಿ ಜಿಲ್ಲೆಯ ನಾಯಕರು ಕೈ ಬೆರಳುಗಳಂತೆ ಒಗ್ಗಟ್ಟಾಗಿ ಇದ್ದರು. ಸುಧಾಕರ್ ಅವರು ಈ ಜಿಲ್ಲೆಯಲ್ಲಿ ನೀರಾವರಿ ಯೋಜನೆಗಳಲ್ಲಿ ಸಾಕ್ಷಿ ಗುಡ್ಡೆ ಬಿಟ್ಟು ಹೋಗಿದ್ದಾರೆ. ಆ ಮೂಲಕ ನಿಮ್ಮ ಬದುಕಿನಲ್ಲಿ ಬದಲಾವಣೆ ತಂದಿದ್ದಾರೆ ಎಂದು ಹೇಳಿದರು.

ನಮ್ಮ ಸರ್ಕಾರ ನುಡಿದಂತೆ ನಡೆದಿದೆ. ಕೊಟ್ಟ ಮಾತಿನಂತೆ ನಡೆದಿದೆ. ಕಮಲ ಕೆರೆಯಲ್ಲಿದ್ದರೆ ಚೆಂದ, ತೆನೆ ಹೊಲದಲ್ಲಿದ್ದರೆ ಚೆಂದ, ದಾನಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಚೆಂದ. ಐದು ಬೆರಳು ಸೇರಿ ಕೈ ಮುಷ್ಠಿಯಾಯಿತು. ಐದು ಗ್ಯಾರಂಟಿಗಳಿಂದ ಕೈ ಗಟ್ಟಿಯಾಗಿದೆ. ಗ್ಯಾರಂಟಿಗಳಿಂದ ರಾಜ್ಯದ 1.60 ಕೋಟಿ ಕುಟುಂಬಗಳಿಗೆ 200 ಯೂನಿಟ್ ಉಚಿತ ವಿದ್ಯುತ್ ಸಿಕ್ಕಿದ್ದು, ಅವರ ಮನೆಗಳು ಬೆಳಗುತ್ತಿವೆ. ಗೃಹಲಕ್ಷ್ಮಿ ಯೋಜನೆ ಮೂಲಕ 1.21 ಕೋಟಿ ಮಹಿಳೆಯರ ಬ್ಯಾಂಕ್ ಖಾತೆಗೆ ನೇರವಾಗಿ 2000 ರೂ. ತಲುಪುತ್ತಿದೆ. ಬೆಲೆಗಳು ಏರುತ್ತಿದ್ದು, ಆದಾಯಗಳು ಕುಸಿಯುತ್ತಿರುವ ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅನ್ನಭಾಗ್ಯ ಯೋಜನೆ ಜನರ ತುತ್ತಿನ ಚೀಲವನ್ನು ತುಂಬಿದೆ ಎಂದರು.

ಮಧ್ಯಪ್ರದೇಶ, ಬಿಹಾರ ಸೇರಿದಂತೆ ದೇಶದ ಬೇರೆ ಯಾವುದೇ ರಾಜ್ಯಗಳಲ್ಲಿ ಚುನಾವಣೆ ನಡೆದರೂ ನಮ್ಮ ಗ್ಯಾರಂಟಿಗಳು ಪ್ರತಿಧ್ವನಿಸುತ್ತಿವೆ. ನಾವು ಗ್ಯಾರಂಟಿ ಯೋಜನೆ ನೀಡುವ ಮೂಲಕ ಬಡ ಜನರ ಬದುಕಿನಲ್ಲಿ ಬದಲಾವಣೆ ತಂದಿದ್ದೇವೆ ಎಂದು ಮುಖ್ಯಮಂತ್ರಿ ತಿಳಿಸಿದರು.

ಡಿ. ಸುಧಾಕರ್ ಅವರ ಆತ್ಮಕ್ಕೆ ಶಾಂತಿ ಕೋರಲು ನಾವೆಲ್ಲಾ ಸೇರಿದ್ದೇವೆ. ಅವರ ಆಚಾರ ವಿಚಾರಗಳಿಗೆ ಸ್ಪಂದಿಸಿ, ಜ್ಯೋತಿಯನ್ನು ಚಿರಂತನಗೊಳಿಸಬೇಕೆಂದು ಪ್ರಾರ್ಥಿಸುತ್ತೇನೆ. ರಾಜಕೀಯದಲ್ಲಿ ಸೇವೆ ಸಲ್ಲಿಸಲು ಎಲ್ಲರಿಗೂ ಆಸೆಯಿರುತ್ತದೆ. ಆದರೆ ಶಿಸ್ತು,ಪ್ರಾಮಾಣಿಕತೆ, ಸೇವಾಮನೋಭಾವವಿರುವ ಎಲ್ಲರಿಗೂ ರಾಜಕಾರಣದಲ್ಲಿ ಅವಕಾಶ ದೊರೆಯುತ್ತದೆ. ಪಕ್ಷದ ರಾಷ್ಟ್ರಾಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಜ್ಯಾಧ್ಯಕ್ಷರು ಹರಿಪ್ರಸಾದ್ ಅನೇಕ ತೀರ್ಮಾನಗಳನ್ನು ತೆಗೆದುಕೊಂಡಿದ್ದಾರೆ. ಹರಿಪ್ರಸಾದ್ ಅವರು ಪಕ್ಷದ ನಿಷ್ಠಾವಂತ ಹೋರಾಟಗಾರರು. ಕಾಂಗ್ರೆಸ್ ಪಕ್ಷದ ಸೋನಿಯಾಗಾಂಧಿ ಹಾಗೂ ರಾಹುಲ್ ಗಾಂಧಿಯವರು ರಾಜ್ಯದ ಚುಕ್ಕಾಣಿಯನ್ನು ಅವರಿಗೆ ನೀಡಿದ್ದಾರೆ ಎಂದರು.

ಚಿತ್ರದುರ್ಗ ಸುಧಾಕರ್  ಕ್ಷೇತ್ರವಲ್ಲ. ಸುಧಾಕರ್ ಪರವಾಗಿ ಪ್ರಜೆಗಳಿಗೆ ಸೇವೆ ಮಾಡುವ ಅವಕಾಶ ಎಂದು ಭಾವಿಸಿದ್ದೇನೆ. ಇದು ನನ್ನ ಹಾಗೂ ಸಿದ್ದರಾಮಯ್ಯನವರ ಕ್ಷೇತ್ರ ಎಂದು ಹೇಳಿದ ಮುಖ್ಯಮಂತ್ರಿಗಳು ಸುಧಾಕರ್ ಅವರ ಚಿಂತನೆ ಹಾಗೂ ಅಶೋತ್ತರಗಳಿಗೆ ಸ್ಪಂದಿಸುವ ಮೂಲಕ ಅವರ ಆತ್ಮಕ್ಕೆ ಶಾಂತಿ ಕೊಡುವ ಕೆಲಸ ಮಾಡಲಾಗುವುದು ಎಂದು ಭರವಸೆ ನೀಡಿದರು.

ಡಿ.ಸುಧಾಕರ್ ಅವರು ಚಿತ್ರದುರ್ಗಕ್ಕೆ ಬಿಟ್ಟುಹೋಗಿರುವ ಕೊಡುಗೆಗಳನ್ನು ಉಳಿಸಿಕೊಳ್ಳುವ ಅಗತ್ಯವಿದೆ. ಇಂದು ರಾಜ್ಯದ ಜನರು ಕಾಂಗ್ರೆಸ್ ಪಕ್ಷದ ಮೇಲೆ ವಿಶ್ವಾಸವನ್ನಿಟ್ಟಿದ್ದಾರೆ. ಬೇರು ಗಟ್ಟಿಯಾಗಿಲ್ಲದಿದ್ದರೆ ಮರ ಗಟ್ಟಿಯಾಗಿರಲು ಸಾಧ್ಯವಿಲ್ಲ. ಮನುಷ್ಯನಿಗೆ ನಂಬಿಕೆ ಬಹಳ ಮುಖ್ಯ. ನಾವು ಜಾತಿಯ ಮೇಲೆ ರಾಜಕಾರಣ ಮಾಡುವುದು ಬೇಡ. ನೀತಿಯ ಮೇಲೆ ರಾಜಕಾರಣ ಮಾಡಲು ಮುಂದಾಗೋಣ. ಚಿತ್ರದುರ್ಗ ಜನರ ಮತ್ತು ಸುಧಾಕರ್ ಅವಿನಾಭಾವ ಸಂಬಂಧದಿಂದಾಗಿ ಹಲವು ಬಾರಿ ಆಶೀರ್ವಾದ ಮಾಡುತ್ತಾ ಬಂದಿದ್ದಾರೆ. ಪಕ್ಷದಲ್ಲಿ ಎಲ್ಲರೂ ಸಮಾನರು.ಪಕ್ಷದಲ್ಲಿ ವ್ಯಕ್ತಿಗಳು ಮುಖ್ಯರಲ್ಲ. ಪಕ್ಷದ ಸಿದ್ಧಾಂತಗಳು ಮುಖ್ಯ ಎಂದರು.

ನೋವಿನ ಸಂದರ್ಭದಲ್ಲಿ ನನ್ನ ಸಹೋದರಿ ಹಾಗೂ ಆ ಕುಟುಂಬದ ಜೊತೆಗೆ ನಾವು ನಿಲ್ಲುತ್ತೇವೆ. ಸುಧಾಕರ್ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥನೆ ಮಾಡುತ್ತೇವೆ. ನಿಮ್ಮ ಶಕ್ತಿ ಅವರ ಜೊತೆಗೆ ಇರಲಿ. ನಾವು ನಿಮ್ಮ ಜೊತೆ ಇರುತ್ತೇವೆ. ಇದು ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಹಾಗೂ ಜಿಲ್ಲೆಯ ಐದೂ ಶಾಸಕರ ಕ್ಷೇತ್ರವಾಗಿದೆ. ನಾವೆಲ್ಲರೂ ಒಟ್ಟಾಗಿ ಈ ಕ್ಷೇತ್ರದ ಅಭಿವೃದ್ಧಿಗೆ ಕೆಲಸ ಮಾಡೋಣ ಎಂದು ತಿಳಿಸಿದರು.

Related Posts

Leave a Reply

Your email address will not be published. Required fields are marked *