Menu

ಕೆಲವೇ ತಿಂಗಳ ಹಿಂದೆ ಪ್ರೀತಿಸಿ ಮದುವೆ: ಬೆಂಗಳೂರಿನಲ್ಲಿ ಯುವತಿಯರಿಬ್ಬರ ಆತ್ಮಹತ್ಯೆ

ನೆಲಮಂಗಲದಲ್ಲಿ ಪ್ರೀತಿಸಿ ಇತ್ತೀಚೆಗೆ ಮದುವೆಯಾಗಿದ್ದ  ಯುವತಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದರೆ, ಬೆಂಗಳೂರಿನ ಸುಂಕದಕಟ್ಟೆಯಲ್ಲಿ  ಶಿಕ್ಷಕಿ ನಾಲ್ಕು ತಿಂಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದು, ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಗೌರಿಬಿದನೂರಿನ ಬೀರಮ್ಮನಹಳ್ಳಿಯ ತನುಜಾ (31) ನೆಲಮಂಗಲದ ಬಸವನಹಳ್ಳಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಯುವತಿ. ಯಲಹಂಕದ ಮಾಯಸಂದ್ರ ನಿವಾಸಿ ರವೀಂದ್ರ ಎಂಬಾತನ ಪ್ರೀತಿಸಿ ಇತ್ತೀಚೆಗೆ ಧರ್ಮಸ್ಥಳದಲ್ಲಿ ಮದುವೆಯಾಗಿದ್ದರು ಎನ್ನಲಾಗಿದೆ.

ರವೀಂದ್ರ ಹಾಗೂ ತನುಜಾ ಇಬ್ಬರೂ ಕೆಲಸಕ್ಕೆ ಹೋಗುವಾಗ ಪರಿಚಯವಾಗಿದ್ದರು. ಮದುವೆಯ ನಂತರ ಸ್ವಲ್ಪ ಸಮಯ ಕಳೆಯಲಿ, ಆಮೇಲೆ ನಮ್ಮ ಮನೆಯಲ್ಲಿ ವಿಷಯ ತಿಳಿಸುತ್ತೇನೆ ಎಂದು ಹೇಳಿದ್ದ ರವೀಂದ್ರ, ತನುಜಾಳನ್ನು ಯಲಹಂಕದ ಸಿಂಗಾಪುರದ ಬಾಡಿಗೆ ಮನೆಯೊಂದರಲ್ಲಿ ಇರಿಸಿದ್ದ.

ಭಾನುವಾರ ತನುಜಾ ಪತಿ ರವೀಂದ್ರನಿಗೆ ಫೋನ್ ಮಾಡಿ, ಮನೆಗೆ ಬರುವಂತೆ ಕರೆದಿದ್ದಳು. ಆದರೆ ರವೀಂದ್ರ ಈಗ ಬರಲು ಸಾಧ್ಯವಿಲ್ಲ, ನಾಳೆ ಬೆಳಗ್ಗೆ ಬರುತ್ತೇನೆ ಎಂದು ಹೇಳಿದ್ದ. ಇದರಿಂದ ಸಿಟ್ಟಿಗೆದ್ದ ತನುಜಾ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಳು. ರಾತ್ರಿ 10 ಗಂಟೆಗೆ ರವೀಂದ್ರನಿಗೆ, ನಾನು ನೆಲಮಂಗಲದ ಬಸವನಹಳ್ಳಿಯಲ್ಲಿ ಕುಳಿತು ವಿಷ ಕುಡಿದಿದ್ದೇನೆ ಎಂದು ಮೆಸೇಜ್ ಕಳುಹಿಸಿದ್ದಳು. ಗಾಬರಿಗೊಂಡ ರವೀಂದ್ರ ತಕ್ಷಣವೇ ಬಸವನಹಳ್ಳಿಗೆ ಬಂದಿದ್ದ. ಸ್ಥಳದಲ್ಲಿ ತನುಜಾ ಬಿದ್ದಿರುವುದನ್ನು ಕಂಡುನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದ. ಆದರೆ ಅಷ್ಟರಲ್ಲಾಗಲೇ ಆಕೆ ಮೃತಪಟ್ಟಿದ್ದಳು.

ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.  ಚಿಕ್ಕಮಗಳೂರಿನ ಶ್ವೇತಾ ಬೆಂಗಳೂರಿನ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಸುಂಕದಕಟ್ಟೆಯಲ್ಲಿ ವಾಸವಿದ್ದು, ಖಾಸಗಿ ಶಾಲೆಯಲ್ಲಿ ಶಿಕ್ಷಕಿ. ನಾಲ್ಕು ತಿಂಗಳ ಹಿಂದೆ ಪ್ರೀತಿಸಿ ಬೆಂಗಳೂರಿನ ಕಮಲನಗರದ ಶಕ್ತಿ ಗಣಪತಿ ದೇವಸ್ಥಾನದಲ್ಲಿ ಮದುವೆ ಆಗಿದ್ದರು.

ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಶ್ವೇತಾ ತಾಯಿಗೆ ಪತ್ರ ಬರೆದಿಟ್ಟಿದ್ದು, ನನ್ನ ಸಾವಿಗೆ ನನ್ನ ಗಂಡ ಮತ್ತು ಅವರ ಅಕ್ಕ ಕಾರಣ. ಅವರಿಂದ ನನಗೆ ಹಿಂಸೆ ಆಗುತ್ತಿತ್ತು. ಅವರನ್ನು ಸುಮ್ಮನೆ ಬಿಡಬೇಡ ಅಮ್ಮ. ನನ್ನಿಂದ ತಪ್ಪಾಗಿದೆ, ಕ್ಷಮಿಸು. ಇಂತಿ ನಿನ್ನ ಪ್ರೀತಿಯ ಮಗಳು ಶ್ವೇತಾ ಎಂದು ಬರೆದಿದ್ದಾರೆ.

ಸ್ಥಳಕ್ಕೆ ಕಾಮಾಕ್ಷಿಪಾಳ್ಯ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಡೆತ್‌ನೋಟ್ ವಶಕ್ಕೆ ಪಡೆದುಕೊಂಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Related Posts

Leave a Reply

Your email address will not be published. Required fields are marked *