ಕೇಂದ್ರದ ಮಾಜಿ ಸಚಿವ ಸಿ ಕೆ ಜಾಫರ್ ಷರೀಫ್ ಅವರ ಅಳಿಯ, ಮಾಜಿ ಶಾಸಕ ಸಯ್ಯದ್ ಯಾಸಿನ್ (೭೦) ವಯೋ ಸಹಜ ಅನಾರೋಗ್ಯದಿಂದ ಭಾನುವಾರ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಯಾಸಿನ್ ಕಾಂಗ್ರೆಸ್ ಅಬ್ಯರ್ಥಿಯಾಗಿ ರಾಯಚೂರುನಗರ ವಿಧಾನಸಭಾ ಕ್ಷೇತ್ರದಿಂದ ಆರು ಬಾರಿ ಸ್ಪರ್ಧಿಸಿ 1999 ಮತ್ತು 2008ರಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದರು. 2008ರ ಚುನಾವಣೆಯಲ್ಲಿ ರಾಯಚೂರು ಜಿಲ್ಲೆಯಿಂದ ಕಾಂಗ್ರೆಸ್ ಪಕ್ಷದ ಏಕೈಕ ಮುಸ್ಲಿಂ ಅಭ್ಯರ್ಥಿಯಾಗಿ ಕಣದಲ್ಲಿದ್ದರು.
ಮಾಜಿ ಶಾಸಕ ಸಯ್ಯದ್ ಯಾಸಿನ್ಜನಪ್ರತಿನಿಧಿಯಾಗಿ ಪ್ರಗತಿಪರ ಕೆಲಸಗಳನ್ನು ಮಾಡಿದವರು. ಒಳ್ಳೆಯ ನಾಯಕರಾಗಿ ಸಮಾಜದ ಹಿತಚಿಂತಕರಾಗಿದ್ದರು. ಯಾಸಿನ್ ಅವರ ಮರಣ ಅತ್ಯಂತ ದುಃಖದ ವಿಚಾರ ಎಂದು ಸಿಎಂ ಡಿ ಕೆ ಶಿವಕುಮಾರ್ ಸಂತಾಪ ಸೂಚಿಸಿದ್ದಾರೆ.
ಬೆಂಗಳೂರಿನ ಪುಲಕೇಶಿನಗರದ ಕೋಲ್ಸ್ ಪಾರ್ಕ್ ನ ನಿವಾಸಕ್ಕೆ ತೆರಳಿ ಯಾಸಿನ್ ಅವರ ಪಾರ್ಥಿವ ಶರೀರಕ್ಕೆ ಸಿಎಂ ಅಂತಿಮ ನಮನ ಸಲ್ಲಿಸಿದರು. ಕಾಂಗ್ರೆಸ್ ಪಕ್ಷ ಅವರ ಕೊಡುಗೆಗಳನ್ನು ಗಮನಿಸಿ ಆರು ಬಾರಿ ಟಿಕೆಟ್ ನೀಡಿತ್ತು. ಅವರು ನನ್ನ ಜೊತೆ ಶಾಸಕರಾಗಿದ್ದವರು. ನಾವೆಲ್ಲ ಒಟ್ಟಿಗೆ ರಾಜಕಾರಣ ಮಾಡಿದ್ದೇವೆ. ಶಾಲಾ ವಿದ್ಯಾಭ್ಯಾಸದ ಕಾಲದಿಂದಲೂ ನನಗೆ ಪರಿಚಿತರು. ಎಲ್ಲಾ ವರ್ಗದ ಜನರ ಪರವಾಗಿ ಕೆಲಸ ಮಾಡಿದ್ದರು ಎಂದರು.
ಅವರಿಗೆ ಈ ಮಧ್ಯೆ ಸ್ವಲ್ಪ ಆರೋಗ್ಯ ಕೈಕೊಟ್ಟಿತು. ಅವರ ಆತ್ಮಕ್ಕೆ ಶಾಂತಿ ದೊರಕಲಿ. ಸಾಕಷ್ಟು ಅನುಯಾಯಿಗಳನ್ನು ಹೊಂದಿದ್ದವರು. ಜಾಫರ್ ಷರೀಫ್ ಅವರ ಕುಟುಂಬದ ಹಿರಿಯ ಸದಸ್ಯನಾಗಿ ಕಿರಿಯರಿಗೆ ಮಾರ್ಗದರ್ಶಕರಾಗಿದ್ದರು. ದೊಡ್ಡ ಪರಂಪರೆ ಹೊಂದಿರುವ ವಂಶ. ಸರ್ಕಾರಿ ಗೌರವಗಳೊಂದಿಗೆ ಅಂತಿಮ ವಿದಾಯ ಹೇಳಲಾಗುವುದು ಎಂದು ಹೇಳಿದರು.


