ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸುವವರು ದಂಡದ ಚಲನ್ ಪಾವತಿಸದಿದ್ದರೆ ಅವರ ವಿದ್ಯುತ್ ಬಿಲ್ ಜೊತೆ ಲಿಂಕ್ ಮಾಡುವಂತೆ ಸುಪ್ರೀಂ ಕೋರ್ಟ್ ಸೂಚಿಸಿದೆ.
ನ್ಯಾಯಮೂರ್ತಿಗಳಾದ ಜೆಬಿ ಪರ್ದಿವಾಲಾ ಮತ್ತು ಕೆವಿ ವಿಶ್ವನಾಥ್ ಅವರನ್ನೊಳಗೊಂಡ ಪೀಠವು ದಂಡದ ಮೊತ್ತ ಪಾವತಿಸದ ವಾಹನಗಳನ್ನು ಕಪ್ಪು ಪಟ್ಟಿಗೆ ಸೇರಿಸಲು ಮತ್ತು ಅವುಗಳ ಮಾಲೀಕತ್ವದ ವರ್ಗಾವಣೆ ತಡೆಯಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸಲಹೆ ನೀಡಿದೆ.
ಜನ ಸಂಚಾರ ನಿಯಮ ಉಲ್ಲಂಘನೆಯ ದಂಡ ಕಟ್ಟದಿದ್ದಲ್ಲಿ ಅವರ ವಿದ್ಯುತ್ ಬಿಲ್‌ಗೆ ಲಿಂಕ್ ಮಾಡಿದರೆ ವಿದ್ಯುತ್ ಸಂಪರ್ಕ ಬಿಲ್ ಕಡಿತದ ಭಯದಿಂದ ದಂಡ ಮೊತ್ತ ಪಾವತಿಸುತ್ತಾರೆ ಎಂದು ಕೋರ್ಟ್ ಹೇಳಿದೆ.
ಅಧಿಕಾರಿಗಳು ದಂಡದ ಇ-ಚಲನ್‌ಗಳನ್ನು ನೀಡಿದರೆ ಸಾಲದು, ವಿಧಿಸಲಾದ ದಂಡದ ಮೊತ್ತವನ್ನು ವಸೂಲಿ ಮಾಡುವುದು ಮುಖ್ಯ. ಜನರು ಸಂಚಾರ ನಿಯಮ ಉಲ್ಲಂಘನೆಯ ದಂಡವನ್ನು ಪಾವತಿಸದಿದ್ದರೆ ಆ ಮೊತ್ತವನ್ನು ವಿದ್ಯುತ್ ಬಿಲ್‌ನ ಬಾಕಿಗೆ ಸೇರಿಸಿ ವಿದ್ಯುತ್ ಬಿಲ್ ಪಾವತಿಸಲೇಬೇಕಾಗುತ್ತದೆ, ಹೀಗೆ ಯಾವುದಾದರೂ ಸೂಕ್ತ ಮಾರ್ಗವನ್ನು ಕಂಡುಕೊಂಡು ಪರಿಹಾರವೊಂದನ್ನು ಹುಡುಕಲೇಬೇಕು ಎಂದು ನ್ಯಾಯಾಲಯ ತಿಳಿಸಿದೆ.
ದೇಶಾದ್ಯಂತ ಒಟ್ಟು 45,000 ಕೋಟಿ ರೂ. ಮೌಲ್ಯದ ಇ-ಚಲನ್‌ಗಳಲ್ಲಿ ಇದುವರೆಗೆ 25,000 ಕೋಟಿ ರೂ. ಮಾತ್ರ ವಸೂಲಾಗಿದೆ. ಇನ್ನೂ 20,000 ಕೋಟಿ ದಂಡದ ಮೊತ್ತ ವಸೂಲಿ ಬಾಕಿ ಇದೆ.


