Menu

ಕೇಂದ್ರ ಸಚಿವರು, ಅಧಿಕಾರಿಗಳು ಸಾರ್ವಜನಿಕ ಸಾರಿಗೆ ಬಳಸಲಿ, ಬಿಜೆಪಿಯಿಂದ ತ್ಯಾಗ ಶುರುವಾಗಲಿ

“ಚಿನ್ನ ಖರೀದಿ ಮಾಡಬೇಡಿ, ಇಂಧನ ಬಳಕೆ ಕಡಿಮೆ ಮಾಡಿ ಎಂದು ಸಲಹೆ ನೀಡುತ್ತಿರುವ ಪ್ರಧಾನ ಮಂತ್ರಿಗಳು, ಇವುಗಳ ಬೆಲೆ ಏರಿಕೆಯಾಗಿದ್ದು ಯಾಕೆ? ಯಾರಿಂದ ಬೆಲೆ ಏರಿಕೆಯಾಗಿದೆ ಎಂಬುದನ್ನು ವಿವರಿಸಬೇಕು” ಎಂದು ಡಿಸಿಎಂ ಡಿಕೆ ಶಿವಕುಮಾರ್ ಆಗ್ರಹಿಸಿದ್ದಾರೆ.

ಬೆಂಗಳೂರಿನ ಸರ್ಕಾರಿ ನಿವಾಸ ಕುಮಾರಪಾರ್ಕ್ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್‌ ಪ್ರತಿಕ್ರಿಯೆ ನೀಡಿದರು.  ಪ್ರಧಾನಿ ನರೇಂದ್ರ ಮೋದಿ ದೇಶದ ಜನರಿಗೆ ಕೊಟ್ಟಿರುವ ಸಲಹೆ ಬಗ್ಗೆ ಕೇಳಿದಾಗ, “ಮದುವೆ, ಮುಂಜಿ ಮಾಡುವವರು ಚಿನ್ನ ತೆಗೆದುಕೊಳ್ಳಬೇಡಿ ಎಂದು ಹೇಳಲು ಸಾಧ್ಯವೇ? ಅವರು ಸಲಹೆಗಳನ್ನು ನೀಡುತ್ತಾರೆ. ಹಿಂದೆ ಕೋವಿಡ್ ಬಂದಾಗ ದೀಪ ಹಚ್ಚಿಸಿ, ಚಪ್ಪಾಳೆ ತಟ್ಟಿಸಿದರು. ಅದರಿಂದ ಸಮಸ್ಯೆ ನಿಂತು ಹೋಯಿತಾ? ಮದುವೆಯಾದ ಮಹಿಳೆ ಚಿನ್ನದ ತಾಳಿ, ಸರ ಹಾಕಿಕೊಳ್ಳುವುದುನ್ನು ಬೇಡ ಎನ್ನಲು ಸಾಧ್ಯವೇ? ಅವರ ಬದುಕಿನಲ್ಲಿ ಕಷ್ಟವೋ ಸುಖವೋ, ಸಾಲ ಮಾಡಿ ಚಿನ್ನ ಖರೀದಿ ಮಾಡುತ್ತಾರೆ ಎಂದರು.

ಎಲ್ಲರನ್ನು ಸಾರ್ವಜನಿಕ ಸಾರಿಗೆಯಲ್ಲೇ ಓಡಾಡಿ ಎನ್ನುವುದಾದರೆ, ಪ್ರಧಾನ ಮಂತ್ರಿಗಳು ಕೇಂದ್ರ ಸರ್ಕಾರದ ಅಧಿಕಾರಿಗಳು ಸಾರ್ವಜನಿಕ ಸಾರಿಗೆಯಲ್ಲಿ ಓಡಾಡುವಂತೆ ಸೂಚಿಸಲಿ. ಅವರ ಕೇಂದ್ರ ಸಚಿವರಿಗೆ ತಾಕೀತು ಮಾಡಲಿ. ನಾವು ಮೊದಲು ನಡೆದುಕೊಂಡು ನಂತರ ಸಾಮಾನ್ಯ ಜನಕ್ಕೆ ಸಂದೇಶ ನೀಡಬೇಕು” ಎಂದು ಕುಟುಕಿದರು.

ಜಗತ್ತಿನ ಪರಿಸ್ಥಿತಿ ಸರಿಯಿಲ್ಲ ಕೆಲವೊಮ್ಮೆ ತ್ಯಾಗಕ್ಕೂ ಸಿದ್ಧವಾಗಿರಬೇಕು ಎಂಬ ಕಾರಣಕ್ಕೆ ಸಂದೇಶ ನೀಡಿದ್ದಾರೆ ಎಂದಾಗ, “ಮೊದಲು ತ್ಯಾಗವನ್ನು ಮಂತ್ರಿಗಳು, ಕೇಂದ್ರ ಸರ್ಕಾರದ ಸಚಿವರು, ಅಧಿಕಾರಿಗಳು, ಬಿಜೆಪಿ ಆಡಳಿತ ರಾಜ್ಯಗಳಲ್ಲಿರುವ ಅಧಿಕಾರಿಗಳಿಂದ, ಅವರ ಪಕ್ಷದ ಶಾಸಕರು, ನಾಯಕರು ಹಾಗೂ ಕಾರ್ಯಕರ್ತರಿಂದ ತ್ಯಾಗ ಆರಂಭವಾಗಲಿ. ನಂತರ ಬೇರೆಯವರಿಗೆ ತ್ಯಾಗದ ಸಲಹೆ ನೀಡಲಿ” ಎಂದು ತಿರುಗೇಟು ನೀಡಿದರು.

ನಿನ್ನೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ ಅವರೊಂದಿಗೆ ಜಿಬಿಎ ಸಭೆ ಮಾಡಿದ್ದೀರಿ ಎಂದು ಕೇಳಿದಾಗ, “ಸುರ್ಜೆವಾಲ ಅವರ ಜೊತೆ ರಾಜಕೀಯವಾಗಿ ಸಭೆ ಮಾಡಿದ್ದೇವೆ. ಅಧಿಕಾರಿಗಳನ್ನು ಕರೆದು ಕೆಲವು ಸೂಚನೆ ನೀಡಿದ್ದು, ಬೆಂಗಳೂರು ನಗರಕ್ಕೆ ದೊಡ್ಡ ಗ್ಯಾರಂಟಿಗಳನ್ನು ನೀಡುತ್ತಿದ್ದೇವೆ ಎಂದರು.

Related Posts

Leave a Reply

Your email address will not be published. Required fields are marked *