ಕರ್ನಾಟಕದ ನಾಗರಿಕರು ಇನ್ನು ಮುಂದೆ ಕೆಎಸ್ಸಾರ್ಟಿಸಿ ಟಿಕೆಟ್ಗಳನ್ನು ನೇರವಾಗಿ ವಾಟ್ಸಾಪ್ ಮೂಲಕ ಬುಕ್ ಮಾಡುವ ಅತ್ಯಾಧುನಿಕ ಡಿಜಿಟಲ್ ಸೌಲಭ್ಯಕ್ಕೆ ಚಾಲನೆ ನೀಡಲಾಗಿದೆ.
ರಾಜ್ಯ ಸರ್ಕಾರವು ‘ಒನ್ ಕರ್ನಾಟಕ ಮೊಬಿಲಿಟಿ ಆ್ಯಪ್’ ಬಿಡುಗಡೆ ಮಾಡಿದ್ದು, ರಾಜ್ಯದ ನಾಲ್ಕು ರಸ್ತೆ ಸಾರಿಗೆ ನಿಗಮಗಳ ಸೇವೆಗಳನ್ನು ಒಂದೇ ಡಿಜಿಟಲ್ ವೇದಿಕೆಯಡಿ ತಂದಿದೆ. ಕೆಎಸ್ಆರ್ಟಿಸಿ, ಎನ್ಡಬ್ಲ್ಯುಕೆಆರ್ಟಿಸಿ ಹಾಗೂ ಕೆಕೆಆರ್ಟಿಸಿ ಬಸ್ಗಳಿಗೆ ವಾಟ್ಸ್ಆ್ಯಪ್ ಮೂಲಕ ಟಿಕೆಟ್ ಕಾಯ್ದಿರಿಸಬಹುದಾಗಿದೆ.
ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನವೀಕರಿಸಿದ ಕೆಎಸ್ಆರ್ಟಿಸಿ ಅವತಾರ್ 2.0 ಮೊಬೈಲ್ ಆ್ಯಪ್ ಹಾಗೂ ವಾಟ್ಸ್ಆ್ಯಪ್ ಟಿಕೆಟ್ ಸೇವೆಗೆ ಚಾಲನೆ ನೀಡಿದ್ದಾರೆ. ಮೊಬಿಲಿಟಿ ಆ್ಯಪ್ನಲ್ಲಿ ಸುರಕ್ಷಿತ ಬಳಕೆದಾರರ ಪ್ರವೇಶ ವ್ಯವಸ್ಥೆ ಇರಲಿದ್ದು, ಪ್ರಯಾಣಿಕರು ಹಿಂದಿನ ಟಿಕೆಟ್ ಕಾಯ್ದಿರಿಸುವಿಕೆಗಳ ವಿವರ ವೀಕ್ಷಿಸುವುದರ ಜೊತೆಗೆ ವಹಿವಾಟು ನಿರ್ವಹಿಸಬಹುದು. ನಾಲ್ಕೂ ರಸ್ತೆ ಸಾರಿಗೆ ನಿಗಮಗಳಿಗೆ ಸಂಬಂಧಿಸಿದ ದೂರುಗಳನ್ನು ಒಂದೇ ವೇದಿಕೆಯಲ್ಲಿ ದಾಖಲಿಸಲು, ದೂರುಗಳ ಸ್ಥಿತಿ ಪರಿಶೀಲಿಸಲು, ಅಗತ್ಯವಿದ್ದರೆ ಮೇಲ್ಮನವಿ ಸಲ್ಲಿಸಲು ಹಾಗೂ ಪರಿಹಾರದ ಪ್ರಗತಿಯನ್ನು ಗಮನಿಸಲು ಈ ಆ್ಯಪ್ ಅವಕಾಶ ನೀಡಲಿದೆ. ಡಿಜಿಟಲ್ ಮಾಸಿಕ ಪಾಸ್ ಸೌಲಭ್ಯವನ್ನು ಹಂತ ಹಂತವಾಗಿ ಪರಿಚಯಿಸಲಾಗುವುದು. ಕ್ಯೂಆರ್ ಕೋಡ್ ಆಧಾರಿತ ಡಿಜಿಟಲ್ ಪರಿಶೀಲನಾ ವ್ಯವಸ್ಥೆಯನ್ನೂ ಒದಗಿಸಲಾಗುತ್ತದೆ.
ಪ್ರಯಾಣಿಕರು ಕೆಎಸ್ಆರ್ಟಿಸಿ, ಎನ್ಡಬ್ಲ್ಯುಕೆಆರ್ಟಿಸಿ ಹಾಗೂ ಕೆಕೆಆರ್ಟಿಸಿ ಬಸ್ಗಳ ಟಿಕೆಟ್ಗಳನ್ನು +91 6364940880 ಸಂಖ್ಯೆಗೆ ಸಂದೇಶ ಕಳುಹಿಸುವ ಮೂಲಕ ವಾಟ್ಸಾಪ್ನಲ್ಲಿ ಕಾಯ್ದಿರಿಸಬಹುದು. ಅದೇ ಸಂಖ್ಯೆಯ ಮೂಲಕ ರದ್ದುಗೊಳಿಸುವ ಸೌಲಭ್ಯವೂ ಇದೆ. ಇದಕ್ಕಾಗಿ ಪ್ರಯಾಣಿಕರು ‘ಟಿಕೆಟ್ ರದ್ದತಿ’ ಆಯ್ಕೆಯನ್ನು ಆರಿಸಿ, ಕಾಯ್ದಿರಿಸುವ ವೇಳೆ ಸ್ವೀಕರಿಸಿದ ಪಿಎನ್ಆರ್ ಸಂಖ್ಯೆ, ಮೊಬೈಲ್ ಸಂಖ್ಯೆ ಹಾಗೂ ವಹಿವಾಟಿನ ಪಾಸ್ವರ್ಡ್ ನಮೂದಿಸಬೇಕು.


