ಬೆಂಗಳೂರು: ವಿಶ್ವಮಟ್ಟದಲ್ಲಿ ಪ್ರಖ್ಯಾತಿ ಪಡೆದಿರುವ ಹಾಗೂ ದೇಶದ ಪ್ರಮುಖ ಕ್ಯಾನ್ಸರ್ ಚಿಕಿತ್ಸಾ ಕೇಂದ್ರ ಎನಿಸಿಕೊಂಡಿರುವ ಬೆಂಗಳೂರಿನ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯು 1 ಸಾವಿರ ರೊಬೊಟಿಕ್ ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿ ಪೂರೈಸುವ ಮೂಲಕ ಮತ್ತೊಂದು ಇತಿಹಾಸ ಸೃಷ್ಟಿಸಿದೆ.
ಮೊದಲ ಬಾರಿಗೆ ರೋಬೊಟಿಕ್ ಯಂತ್ರ ಅಳವಡಿಕೆ ಮಾಡಿಕೊಂಡ ಏಕೈಕ ಆಸ್ಪತ್ರೆ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಾಗಿದೆ. ಅತ್ಯಾಧುನಿಕ ಡಾ. ವಿನ್ಸಿ ರೋಬೊಟಿಕ್ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಇದುವರೆಗೆ ಒಂದು ಸಾವಿರ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ಪೂರೈಸುವ ಮೂಲಕ ವಿಶೇಷ ಮೈಲುಗಲ್ಲು ಸಾಧಿಸಿದೆ. ಸರಕಾರಿ ಸಂಸ್ಥೆಗಳ ಪೈಕಿ ಕಿದ್ವಾಯಿ ಸ್ಮಾರಕ ಗಂಥಿ ಆಸ್ಪತ್ರೆಯಲ್ಲಿ ಮಾತ್ರ ರೋಬೋಟಿಕ್ ಸರ್ಜರಿ ಸೌಕರ್ಯ ಇರುವುದು ಮತ್ತೊಂದು ಹೆಗ್ಗಳಿಕೆ.
ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯು ಹಲವು ಸಾಧನೆಗಳನ್ನು ಮಾಡುವಲ್ಲಿ ದಾಫುಗಾಲಿಡುತ್ತಿದೆ. ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿ ಹೆಚ್ಚು ಚಿಕಿತ್ಸೆ ನೀಡಿದ ಆಸ್ಪತ್ರೆಯಾಗಿ ಹೊರಹೊಮ್ಮಿದೆ. ಒಳರೋಗಿಗಳಿಗೆ ಹೆಚ್ಚು ಚಿಕಿತ್ಸೆ ನೀಡಿದ ಏಕೈಕ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಎಂಬ ಗೌರವಕ್ಕೂ ಕಿದ್ವಾಯಿ ಸಂಸ್ಥೆ ಪಾತ್ರವಾಗಿದೆ. ರಾಜ್ಯದಲ್ಲೇ ಏಕೈಕ ಬೋನ್ ಮ್ಯಾರೋ (ಅಸ್ತಿಮಜ್ಜೆ ಶಸ್ತ್ರಚಿಕಿತ್ಸಾ) ಘಟಕ ಕಿದ್ವಾಯಿಯಲ್ಲಿ ಇದ್ದು, ಅಲೋಜೆನಿಕ್, ಆಟೋಲೋಗಸ್ ಅಸ್ತಿಮಜ್ಜೆ ಕಸಿ ಚಿಕಿತ್ಸೆ ಯಶಸ್ವಿಗೊಳಿಸಲಾಗಿದೆ.
ಕಿದ್ವಾಯಿ ಸಂಸ್ಥೆಯಲ್ಲಿ ರೋಗಿಗಳಿಗೆ ಅನುಕೂಲವಾಗಲು ಕೆಸಿಡಿಎಫ್ ಔಷಧಿ ಮಳಿಗೆ 24ಗಂಟೆಯೂ ಔಷಧ ಮಳಿಗೆ ತೆರೆಯಲಾಗಿದೆ. ಕೆಎಸ್ಆರ್ ಟಿಸಿ ನೌಕರರಿಗೆ ಕ್ಯಾಷ್ ಲೆಸ್ ಚಿಕಿತ್ಸೆ ನೀಡಲೂ ತೀರ್ಮಾನಿಸಲಾಗಿದೆ. ಬಿಪಿಎಲ್ ಸೌಲಭ್ಯ ಇಲ್ಲದ ಕುಟುಂಬಗಳಿಗೆ ಹಾಗೂ ಹಣದ ಸಮಸ್ಯೆ ಇರುವವರಿಗೆ ಚಿಕಿತ್ಸಾ ವೆಚ್ಚ ಕಡಿಮೆ ಮಾಡಲು ಪ್ರತ್ಯೇಕ ಸಮಿತಿ ರಚಿಸಲಾಗಿದೆ.
ಏನಿದು ಡಾ ವಿಂಚಿ ಸರ್ಜಿಕಲ್ ಸಿಸ್ಟಮ್?
ಅಮೆರಿಕಾದ ಇನ್ಸಿಟ್ಯೂಟ್ ಸರ್ಜಿಕಲ್ ರೀಸರ್ಚ್ ಸಂಸ್ಥೆಯು ಡಾ.ವಿಂಚಿ ಸರ್ಜಿಕಲ್ ಸಿಸ್ಟಮ್ ರೋಬೊಟಿಕ್ ಯಂತ್ರವನ್ನು ಅಭಿವೃದ್ಧಿಪಡಿಸಿದೆ. ಡಾ.ವಿಂಚಿ ಎಕ್ಸ್ಐ ಎಂಬುದು ಸುಧಾರಿತ ಆವೃತ್ತಿಯಾಗಿದೆ. ಈ ಯಂತ್ರವನ್ನು ಕಿದ್ವಾಯಿ ಸಂಸ್ಥೆಯಲ್ಲಿ ಅಳವಡಿಸಲಾಗಿದೆ. ಈ ಯಂತ್ರದಲ್ಲಿ ಸರ್ಜನ್ ಕನ್ಸೋಲ್, ಪೇಷಂಟ್ ಕಾರ್ಟ್, ವಿಷನ್ ಕಾರ್ಟ್ ಎಂಬ ವಿಭಾಗಗಳಿವೆ. ಪೇಷೆಂಟ್ ಕಾರ್ಟ್ ಯಂತ್ರವನ್ನು ಬಳಸಿ ರೋಗಿಗಳಿಗೆ ಶಸ್ತ್ರ ಚಿಕಿತ್ಸೆ ಮಾಡಲಾಗುತ್ತದೆ. ಹೇಗೆ ಶಸ್ತ್ರ ಚಿಕಿತ್ಸೆ ಮಾಡಬೇಕೆಂಬ ಸೂಚನೆಗಳನ್ನು ಸರ್ಜನ್ ಕನ್ಸೋಲ್ ನಲ್ಲಿ ಕುಳಿತ ವೈದ್ಯರು ನೀಡುತ್ತಾರೆ. ವೈದ್ಯರ ಸೂಚನೆ ಮೇರೆಗೆ ಪೇಷಂಟ್ ಕಾರ್ಟ್ ಯಂತ್ರವು ಕಾರ್ಯ ನಿರ್ವಹಿಸುತ್ತದೆ. ಶಸ್ತ್ರ ಚಿಕಿತ್ಸೆಯ ಪ್ರತಿಯೊಂದು ಮಾಹಿತಿಯೂ ವಿಷನ್ ಕಾರ್ಟ್ ನಲ್ಲಿ ದಾಖಲಾಗುತ್ತದೆ. ಎಲ್ಇಡಿ ಪರದೆಯಲ್ಲಿ ಕಾಣಿಸುತ್ತದೆ. ಪೇಷಂಟ್ ಕಾರ್ಟ್ ಯಂತ್ರವನ್ನು ರೋಗಿಯ ದೇಹದ ನಿರ್ದಿಷ್ಟ ಭಾಗದಲ್ಲಿ ಇಡಲಾಗುತ್ತದೆ. ಈ ಯಂತ್ರದಲ್ಲಿರುವ ಕೈಗಳ ಸಹಾಯದಿಂದ ಸಣ್ಣ ರಂಧ್ರಗಳನ್ನು ಕೊರೆಯಲಾಗುತ್ತದೆ. ಈ ರಂಧ್ರಗಳ ಮೂಲಕ ದೇಹಕ್ಕೆ ಸ್ಟೀಲ್ ರಾಡ್ ಗಳನ್ನು ಅಳವಡಿಸಿ ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ.