Thursday, November 19, 2026
Menu

ಕರ್ನಾಟಕ ಒನ್, ಬೆಂಗಳೂರು ಒನ್ ಇನ್ಮುಂದೆ ‘ಪ್ರಜಾಸೇವಾ ಕೇಂದ್ರ’

ಉದಯಕಾಲ ನ್ಯೂಸ್‌, ಬೆಂಗಳೂರು: ಬೆಂಗಳೂರು ಒನ್ ಹಾಗೂ ಕರ್ನಾಟಕ ಒನ್ ಸೇರಿದಂತೆ ರಾಜ್ಯದ ವಿವಿಧ ಕಡೆಗಳಲ್ಲಿ ಬೇರೆ ಬೇರೆ ಹೆಸರುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ನಾಗರಿಕ ಸೇವಾ ಕೇಂದ್ರಗಳನ್ನು ‘ಪ್ರಜಾಸೇವಾ ಕೇಂದ್ರ’ ಎಂದು ಮರುನಾಮಕರಣ ಮಾಡಿ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ನಾಗರಿಕ ಸೇವೆಗಳ ನಿರ್ವಹಣೆಯಲ್ಲಿ ಏಕರೂಪತೆ ತರುವ ಹಾಗೂ ಆಡಳಿತ ವ್ಯವಸ್ಥೆಯನ್ನು ಮತ್ತಷ್ಟು ಜನಸ್ನೇಹಿಯಾಗಿಸುವ ಉದ್ದೇಶದಿಂದ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

ವಿದ್ಯುನ್ಮಾನ ನಾಗರಿಕ ಸೇವಾ ವಿತರಣಾ ನಿರ್ದೇಶನಾಲಯದಡಿ ಕಾರ್ಯನಿರ್ವಹಿಸುತ್ತಿರುವ ನಾಗರಿಕ ಸೇವಾ ಕೇಂದ್ರಗಳ ಮೂಲಕ ಸರ್ಕಾರ ಹಲವಾರು ಸೇವೆಗಳನ್ನು ಜನರಿಗೆ ತಲುಪಿಸುತ್ತಿದೆ. ಪ್ರಸ್ತುತ ಬೆಂಗಳೂರು ನಗರದಲ್ಲಿ ‘ಬೆಂಗಳೂರು ಒನ್’, ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ‘ಕರ್ನಾಟಕ ಒನ್’ ಮತ್ತು ಗ್ರಾಮೀಣ ಭಾಗಗಳಲ್ಲಿ ‘ಗ್ರಾಮ ಒನ್’ ಎಂಬ ಹೆಸರುಗಳಲ್ಲಿ ಈ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಭವಿಷ್ಯದಲ್ಲಿ ಇವುಗಳಿಗೆ ಏಕರೂಪದ ಹೆಸರಾಗಿ ‘ಪ್ರಜಾಸೇವಾ ಕೇಂದ್ರ’ ಎಂದು ಕರೆಯಲಾಗುತ್ತದೆ.

ನಾಮಫಲಕ, ಪೋರ್ಟಲ್‌ಗಳಲ್ಲಿ ಏಕರೂಪದ ಬಳಕೆಗೆ ಸೂಚನೆ

ಹೊಸ ಆದೇಶದನ್ವಯ ರಾಜ್ಯದ ಎಲ್ಲಾ ನಾಗರಿಕ ಸೇವಾ ಕೇಂದ್ರಗಳಲ್ಲಿ ಅಧಿಕೃತ ಪತ್ರ ವ್ಯವಹಾರಗಳು, ನಾಮಫಲಕಗಳು, ವೆಬ್ ಪೋರ್ಟಲ್‌ಗಳು, ತಂತ್ರಾಂಶಗಳು ಹಾಗೂ ಸ್ವೀಕೃತಿ ಪತ್ರಗಳಲ್ಲಿ ಕಡ್ಡಾಯವಾಗಿ ‘ಪ್ರಜಾಸೇವಾ ಕೇಂದ್ರ’ ಎಂದೇ ಉಲ್ಲೇಖಿಸಬೇಕು ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಸಾರ್ವಜನಿಕರಿಗೆ ಸೇವೆ ಪಡೆಯುವಾಗ ಗೊಂದಲ ಉಂಟಾಗದಂತೆ ಹಾಗೂ ಆಡಳಿತಾತ್ಮಕ ಪ್ರಕ್ರಿಯೆಗಳಲ್ಲಿ ಸ್ಪಷ್ಟತೆ ಕಾಪಾಡುವ ನಿಟ್ಟಿನಲ್ಲಿ ಈ ಬದಲಾವಣೆ ಜಾರಿಗೆ ತರಲಾಗಿದೆ.

ನಾಗರಿಕ ಕೇಂದ್ರಗಳ ಮೂಲಕ ಬಿಲ್ ಪಾವತಿ, ವಿವಿಧ ಪ್ರಮಾಣಪತ್ರಗಳ ಅರ್ಜಿ, ಸರ್ಕಾರಿ ಯೋಜನೆಗಳ ಸೇವೆಗಳು ಸೇರಿದಂತೆ ಹಲವಾರು ಸೌಲಭ್ಯಗಳನ್ನು ಜನರು ಪಡೆಯುತ್ತಿದ್ದಾರೆ. ಇದೀಗ ಪ್ರಜಾಸೇವಾ ಇಲಾಖೆಯ ಆಶಯಕ್ಕೆ ಪೂರಕವಾಗಿ ಈ ಕೇಂದ್ರಗಳ ಮರುನಾಮಕರಣ ನಡೆದಿರುವುದು ಗಮನಾರ್ಹವಾಗಿದೆ.

ಮನೆಬಾಗಿಲಿಗೆ ಆಡಳಿತ: 224 ಕ್ಷೇತ್ರಗಳಲ್ಲಿ ‘ಪ್ರಜಾಸೇವಾ’ ವ್ಯವಸ್ಥೆ

ಸಾರ್ವಜನಿಕರ ಕುಂದುಕೊರತೆಗಳನ್ನು ತ್ವರಿತವಾಗಿ ಪರಿಹರಿಸುವ ಹಾಗೂ ಸರ್ಕಾರದ ಸೇವೆಗಳನ್ನು ನೇರವಾಗಿ ಜನರ ಮನೆಬಾಗಿಲಿಗೆ ತಲುಪಿಸುವ ಉದ್ದೇಶದಿಂದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ರಾಜ್ಯ ಸರ್ಕಾರ ಪ್ರಜಾಸೇವಾ ಇಲಾಖೆಯನ್ನು ಸ್ಥಾಪಿಸಿದೆ. ಕಳೆದ ಸೆಪ್ಟೆಂಬರ್ 5ರ ಶಿಕ್ಷಕರ ದಿನಾಚರಣೆಯಂದು ಬೆಂಗಳೂರಿನ ವಿಜಯನಗರದಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಅವರು ಈ ಇಲಾಖೆಗೆ ಚಾಲನೆ ನೀಡಿದ್ದರು.

ಸರ್ಕಾರಿ ಕಚೇರಿಗಳು ಹಾಗೂ ಅಧಿಕಾರಿಗಳ ಬಳಿ ಸಣ್ಣಪುಟ್ಟ ಕೆಲಸಗಳಿಗೂ ಜನರು ಅಲೆಯುವ ಪರಿಸ್ಥಿತಿಯನ್ನು ತಪ್ಪಿಸಿ, ಆಡಳಿತವನ್ನು ಜನರ ಬಳಿಗೇ ಕೊಂಡೊಯ್ಯುವುದು ಈ ಯೋಜನೆಯ ಪ್ರಮುಖ ಗುರಿಯಾಗಿದೆ. ವಿಧಾನಸೌಧ, ಜಿಲ್ಲಾಧಿಕಾರಿ ಕಚೇರಿ ಅಥವಾ ತಾಲೂಕು ಕಚೇರಿಗಳಲ್ಲಿ ಕುಳಿತು ಜನರಿಂದ ದೂರವಿದ್ದು ಆಡಳಿತ ನಡೆಸುವುದು ಸರಿಯಲ್ಲ ಎಂಬ ನಿಲುವು ವ್ಯಕ್ತಪಡಿಸಿದ್ದ ಸಿಎಂ, ಪ್ರತಿಯೊಬ್ಬರಿಗೂ ಸಚಿವರು, ಶಾಸಕರು ಅಥವಾ ಹಿರಿಯ ಅಧಿಕಾರಿಗಳನ್ನು ನೇರವಾಗಿ ಭೇಟಿ ಮಾಡಲು ಸಾಧ್ಯವಾಗುವುದಿಲ್ಲವಾದ್ದರಿಂದ ಅಧಿಕಾರಿಗಳೇ ಜನರ ಬಳಿಗೆ ತೆರಳಿ ಸಮಸ್ಯೆ ಆಲಿಸಿ, ಸ್ಥಳದಲ್ಲೇ ಸಾಧ್ಯವಾದಷ್ಟು ಪರಿಹಾರ ನೀಡಬೇಕು ಎಂದು ಹೇಳಿದ್ದರು.

ರಾಜ್ಯದ ಎಲ್ಲಾ 224 ವಿಧಾನಸಭಾ ಕ್ಷೇತ್ರಗಳಲ್ಲೂ ಪ್ರಜಾಸೇವಾ ವ್ಯವಸ್ಥೆ ಜಾರಿಯಾಗಲಿದ್ದು, ಪ್ರತಿ ತಿಂಗಳ ಮೊದಲ ಮತ್ತು ಮೂರನೇ ಶನಿವಾರ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಜನರ ಮಧ್ಯೆ ಇದ್ದು ಕಾರ್ಯನಿರ್ವಹಿಸುವಂತೆ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಈ ಕಾರ್ಯಕ್ರಮದಡಿ ಸಚಿವರು ತಾಲೂಕು ಹಾಗೂ ಹೋಬಳಿ ಮಟ್ಟದಲ್ಲಿ ಮತ್ತು ಶಾಸಕರು ಪಂಚಾಯತ್ ಮಟ್ಟದಲ್ಲಿ ಜನರ ಸಮಸ್ಯೆಗಳ ಪರಿಹಾರಕ್ಕೆ ಮುಂದಾಗಲಿದ್ದಾರೆ. ನಾಗರಿಕ ಸೇವಾ ಕೇಂದ್ರಗಳ ಮರುನಾಮಕರಣವು ಈ ಜನಮುಖಿ ಆಡಳಿತ ವ್ಯವಸ್ಥೆಯ ಮುಂದುವರಿದ ಭಾಗವಾಗಿದೆ.

#PrajaSevaKendra #KarnatakaOne #BengaluruOne #GramaOne #CMDKShivakumar #KarnatakaGovernment #CitizenServices #GoodGovernance #Udayakala #KarnatakaNews

Related Posts

Leave a Reply

Your email address will not be published. Required fields are marked *