Thursday, November 19, 2026
Menu

ಏರ್‌ಪೋರ್ಟ್‌ಗೆ ಹೆಬ್ಬಾಳ ಮಾದರಿ ಹೊಸ ಮೇಲ್ಸೇತುವೆ ನಿರ್ಮಿಸಲು ಚಿಂತನೆ: ಸಿಎಂ ಡಿ.ಕೆ. ಶಿವಕುಮಾರ್

ಉದಯಕಾಲ ನ್ಯೂಸ್‌,ಬೆಂಗಳೂರು: ನಗರದ ಉತ್ತರ ಭಾಗದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುವ ಹಾಗೂ ಉತ್ತರ ಬೆಂಗಳೂರಿನಿಂದ ನಗರದೊಳಗೆ ಬರುವ ವಾಹನ ಸವಾರರ ದೈನಂದಿನ ಸಂಚಾರ ದಟ್ಟಣೆ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ಹೆಬ್ಬಾಳ ಮಾದರಿಯಲ್ಲಿ ಹೊಸ ಮೇಲ್ಸೇತುವೆ ನಿರ್ಮಿಸುವ ಕುರಿತು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಬೆಂಗಳೂರು ನಗರದ ವಿವಿಧ ಕಡೆಗಳಲ್ಲಿ 522.23 ಕೋಟಿ ರೂಪಾಯಿ ವೆಚ್ಚದಲ್ಲಿ ಹಮ್ಮಿಕೊಂಡಿದ್ದ ಶಂಕುಸ್ಥಾಪನೆ ಹಾಗೂ ಉದ್ಘಾಟನಾ ಕಾರ್ಯಕ್ರಮಗಳನ್ನು ನೆರವೇರಿಸಿ ಅವರು ಮಾತನಾಡಿದರು. ಸಿಎಂ ಮೊದಲಿಗೆ ಬ್ಯಾಟರಾಯನಪುರದ ಜಕ್ಕೂರು ರೈಲ್ವೆ ಮೇಲ್ಸೇತುವೆಯನ್ನು ಉದ್ಘಾಟಿಸಿದರು. ನಂತರ ಕೆ.ಆರ್. ಪುರಂನ ಗೆದ್ದಲಹಳ್ಳಿ ರೈಲ್ವೆ ಹಳಿಗೆ ಅಡ್ಡಲಾಗಿ ನಿರ್ಮಿಸಿರುವ ಮಳೆನೀರು ಕಾಲುವೆ ಉದ್ಘಾಟಿಸಿದರು. ಇದಾದ ಬಳಿಕ ಮಾರುತಿ ಸೇವಾನಗರ ಮುಖ್ಯರಸ್ತೆ ಐಒಸಿ ಜಂಕ್ಷನ್ ಬಳಿ ರೋಟರಿ ಮೇಲ್ಸೇತುವೆಗೆ ಶಂಕುಸ್ಥಾಪನೆ ನೆರವೇರಿಸಿದರು ಮತ್ತು ಸರ್ವಜ್ಞ ನಗರ ವಿಧಾನಸಭಾ ಕ್ಷೇತ್ರದಲ್ಲಿ ನಿರ್ಮಾಣವಾಗುತ್ತಿರುವ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಭೇಟಿ ನೀಡಿ ಕಾಮಗಾರಿಯನ್ನು ಪರಿಶೀಲಿಸಿದರು.

ಹೊಸ ಫ್ಲೈಓವರ್, 1.50 ಲಕ್ಷ ಕೋಟಿ ರೂ. ಅಭಿವೃದ್ಧಿ ಯೋಜನೆ

ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಡಿ.ಕೆ. ಶಿವಕುಮಾರ್, ಏರ್‌ಪೋರ್ಟ್ ಕಡೆಗೆ ಹೋಗುವವರು ಹಾಗೂ ಉತ್ತರ ಬೆಂಗಳೂರಿನಿಂದ ನಗರದೊಳಗೆ ಬರುವವರು ಪ್ರತಿನಿತ್ಯ ಸಂಚಾರ ದಟ್ಟಣೆಯಿಂದ ತೊಂದರೆ ಅನುಭವಿಸುತ್ತಿದ್ದಾರೆ. ಸುಮಾರು 20 ಕಿ.ಮೀ. ವ್ಯಾಪ್ತಿಯಲ್ಲಿ ಈ ಸಮಸ್ಯೆ ಇದೆ. ವಿಮಾನ ನಿಲ್ದಾಣಕ್ಕೆ ತೆರಳಲು ಈಗಿರುವ ಮಾರ್ಗವನ್ನೇ ಎಲ್ಲರೂ ಅವಲಂಬಿಸಬೇಕಾಗಿದೆ. ಹೀಗಾಗಿ ಇಲ್ಲಿ ಹೊಸ ಫ್ಲೈಓವರ್ ನಿರ್ಮಿಸುವ ಅಗತ್ಯವಿದೆ ಎಂದು ಹೇಳಿದರು.

ಫ್ಲೈಓವರ್ ಅನ್ನು ಯಾವ ಮಾದರಿಯಲ್ಲಿ ನಿರ್ಮಿಸಬೇಕು ಅಥವಾ ಬೇರೆ ರೀತಿಯ ವ್ಯವಸ್ಥೆ ಮಾಡಬೇಕೇ ಎಂಬುದನ್ನು ತಾಂತ್ರಿಕವಾಗಿ ಪರಿಶೀಲಿಸಬೇಕಿದೆ. ಈ ಕುರಿತು ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ. ಅಧಿಕಾರಿಗಳು, ಸಚಿವರು ಹಾಗೂ ಶಾಸಕರೊಂದಿಗೆ ಚರ್ಚಿಸಿದ್ದು, ಯಾವ ಮಾರ್ಗದಲ್ಲಿ ಕಾಮಗಾರಿ ಕೈಗೊಳ್ಳಬೇಕು ಎಂಬುದನ್ನು ನಿರ್ಧರಿಸಲಾಗುವುದು ಎಂದು ವಿವರಿಸಿದರು.

ಮಾರುತಿ ಸೇವಾನಗರ ಐಒಸಿ ಜಂಕ್ಷನ್ ಬಳಿಯ ರೋಟರಿ ಮೇಲ್ಸೇತುವೆ ಕುರಿತು ಪ್ರಸ್ತಾಪಿಸಿದ ಅವರು, ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಬೆಂಗಳೂರಿನಲ್ಲಿ ಹೆಬ್ಬಾಳ ಫ್ಲೈಓವರ್ ನಿರ್ಮಾಣವಾಯಿತು. ಬಳಿಕ ಇದುವೇ ಅತ್ಯಂತ ಪ್ರಮುಖವಾದ ಮೂಲಸೌಕರ್ಯ ನಿರ್ಮಾಣವಾಗಿದೆ. ಈ ಮೇಲ್ಸೇತುವೆ ಮೂರು ಕ್ಷೇತ್ರಗಳನ್ನು ಜೋಡಿಸುತ್ತದೆ. ಬೆಂಗಳೂರಿನ ನಾಗರಿಕರ ಸಮಯವನ್ನು ಉಳಿಸಬೇಕೆಂಬ ಉದ್ದೇಶದಿಂದ ಹಲವಾರು ಮೂಲಸೌಕರ್ಯ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದ್ದೇವೆ. ಈ ರೋಟರಿ ಮೇಲ್ಸೇತುವೆ ಬೆಂಗಳೂರಿಗೆ ಕಿರೀಟವಾಗಲಿದೆ. ಆರು ಪಥಗಳ ಫ್ಲೈಓವರ್ ಕಾಮಗಾರಿ ತಾಂತ್ರಿಕವಾಗಿ ಕ್ಲಿಷ್ಟಕರವಾಗಿದ್ದರೂ, ಸಂಚಾರಕ್ಕೆ ತೊಂದರೆಯಾಗದಂತೆ ಆದ್ಯತೆ ಮೇರೆಗೆ ಪೂರ್ಣಗೊಳಿಸಲು ಕ್ರಮ ಕೈಗೊಂಡಿದ್ದೇವೆ ಎಂದರು.

ಇಡೀ ಬೆಂಗಳೂರು ನಗರದ ಸಮಗ್ರ ಅಭಿವೃದ್ಧಿಗೆ 1.50 ಲಕ್ಷ ಕೋಟಿ ರೂಪಾಯಿ ಮೊತ್ತದ ಯೋಜನೆಗಳನ್ನು ರೂಪಿಸಲಾಗಿದೆ ಎಂದ ಸಿಎಂ, ಇದರಲ್ಲಿ ಮೇಲ್ಸೇತುವೆಗಳು, ಮೆಟ್ರೋ, ಬೆಂಗಳೂರು ಬಿಸಿನೆಸ್ ಕಾರಿಡಾರ್, ಟನಲ್ ರಸ್ತೆ, ಸಬ್ ಅರ್ಬನ್ ರೈಲ್ವೆ ಹಾಗೂ ಕುಡಿಯುವ ನೀರು ಪೂರೈಕೆ ಕಾಮಗಾರಿಗಳು ಸೇರಿವೆ ಎಂದು ತಿಳಿಸಿದರು. ಜತೆಗೆ ಗೆದ್ದಲಹಳ್ಳಿ ರೈಲ್ವೆ ಹಳಿಗೆ ಅಡ್ಡಲಾಗಿ ಕೇವಲ 20 ಅಡಿ ಜಾಗದಲ್ಲಿ ನೀರು ಹರಿದುಹೋಗಬೇಕಿದ್ದ ತಾಂತ್ರಿಕ ಸವಾಲನ್ನು ಅಧಿಕಾರಿಗಳು ಯಶಸ್ವಿಯಾಗಿ ನಿವಾರಿಸಿ ಮಳೆನೀರು ಕಾಲುವೆ ಪೂರ್ಣಗೊಳಿಸಿರುವುದಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.

ಜಕ್ಕೂರು ಎದುರು ಪಾಲಿಕೆ ಕಚೇರಿ, ಮನೆ ಬಾಗಿಲಿಗೆ ‘ಭೂ ಗ್ಯಾರಂಟಿ’ ಖಾತೆ

ಉತ್ತರ ಬೆಂಗಳೂರಿನ ಆಡಳಿತಾತ್ಮಕ ಸೌಲಭ್ಯಗಳ ಕುರಿತು ಮಾತನಾಡಿದ ಡಿ.ಕೆ. ಶಿವಕುಮಾರ್, ಜಕ್ಕೂರು ವಿಮಾನ ನಿಲ್ದಾಣದ ಎದುರು ಪಾಲಿಕೆ ಕಚೇರಿ ನಿರ್ಮಾಣಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಕ್ಷೇತ್ರದ ಜನ ಬೆಂಗಳೂರು ಪಾಲಿಕೆಗೆ ಹೋಗಬೇಕಿಲ್ಲ. ನಿಮ್ಮದೇ ಪಾಲಿಕೆ ಕಚೇರಿ ನಿರ್ಮಾಣವಾಗಲಿದೆ. ಬೆಳೆಯುತ್ತಿರುವ ಬೆಂಗಳೂರಿನ ಅಗತ್ಯಗಳಿಗೆ ತಕ್ಕಂತೆ ವ್ಯವಸ್ಥೆಗಳನ್ನು ಕೈಗೊಳ್ಳಲಾಗುವುದು. ವಿಮಾನ ನಿಲ್ದಾಣ ನಿರ್ಮಾಣವಾದ ನಂತರ ಈ ಕ್ಷೇತ್ರದ ಆಸ್ತಿ ಬೆಲೆಯೂ ಹೆಚ್ಚಳವಾಗಿದೆ. ಹೊರ ರಾಜ್ಯಗಳ ಜನರೂ ಇಲ್ಲಿ ನೆಲೆಸಿದ್ದು ಅನೇಕರಿಗೆ ಅನುಕೂಲವಾಗಿದೆ. ಅದಕ್ಕೆ ಸೂಕ್ತ ಸೌಲಭ್ಯಗಳನ್ನು ಕಲ್ಪಿಸಲು ವ್ಯವಸ್ಥೆ ಕೈಗೊಳ್ಳಲಾಗುತ್ತಿದೆ ಎಂದರು.

ಹಿಂದೆ ತಾವು ನಗರಾಭಿವೃದ್ಧಿ ಸಚಿವರಾಗಿದ್ದಾಗ ಜಕ್ಕೂರು ಮತ್ತು ಹೆಬ್ಬಾಳದವರೆಗೆ ಮಾತ್ರ ಕಾರ್ಪೋರೇಷನ್ ವ್ಯಾಪ್ತಿ ಇತ್ತು ಎಂಬುದನ್ನು ಸ್ಮರಿಸಿದ ಅವರು, ಡಿಸಿಎಂ ಆಗಿದ್ದ ವೇಳೆ ಹೊಸದಾಗಿ ಸೇರ್ಪಡೆಯಾದ 110 ಹಳ್ಳಿಗಳಿಗೆ 5 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದ್ದು, ಕಾವೇರಿ ಆರನೇ ಹಂತಕ್ಕೂ ಸಿದ್ಧತೆ ನಡೆಯುತ್ತಿದೆ ಎಂದರು. ಬೆಂಗಳೂರಿನ ನಾಗರಿಕರ ಬದುಕಿನಲ್ಲಿ ಒಂದೇ ದಿನ ಬದಲಾವಣೆ ತರಲು ಸಾಧ್ಯವಿಲ್ಲವಾದರೂ, ತೆರಿಗೆ ಹೊರೆ ಹೆಚ್ಚಾಗದಂತೆ ಪಾಲಿಕೆಗಳಿಗೆ ಆರ್ಥಿಕ ಬಲ ತುಂಬಲಾಗುತ್ತಿದೆ ಎಂದು ಹೇಳಿದರು.

‘ಭೂಮಿ ಗ್ಯಾರಂಟಿ’ ಯೋಜನೆಯಡಿ ಸರಿಯಾದ ದಾಖಲೆಗಳಿದ್ದರೆ ಖಾತೆ ಸಿದ್ಧ ಮಾಡಿ ಮನೆ ಬಾಗಿಲಿಗೆ ನೀಡುವ ವ್ಯವಸ್ಥೆ ಜಾರಿಗೆ ತರಲಾಗಿದ್ದು, ಈಗಾಗಲೇ 26 ಲಕ್ಷ ಖಾತೆಗಳನ್ನು ಸಿದ್ಧಪಡಿಸಲಾಗಿದೆ ಎಂದು ಸಿಎಂ ತಿಳಿಸಿದರು. ಆನ್‌ಲೈನ್ ಮೂಲಕ ಖಾತೆ ಡೌನ್‌ಲೋಡ್ ಮಾಡಿಕೊಳ್ಳುವ ಜತೆಗೆ ‘ಬಿ’ ಖಾತೆಯಿಂದ ‘ಎ’ ಖಾತೆಗೆ ಪರಿವರ್ತಿಸುವ ಅವಕಾಶ ಕಲ್ಪಿಸಲಾಗಿದೆ. ಲಂಚವಿಲ್ಲದೆ ನೇರವಾಗಿ ಫಲಾನುಭವಿಗಳಿಗೆ ಸೇವೆ ಸಿಗುವಂತೆ ಈ ವ್ಯವಸ್ಥೆ ರೂಪಿಸಲಾಗಿದೆ ಎಂದರು.

ಬೀದಿ ಬದಿ ವ್ಯಾಪಾರಿಗಳನ್ನು ಹೊರಗೆ ತಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಮುಖ್ಯ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ತೊಂದರೆಯಾಗದಂತೆ ಶಿಸ್ತಿನಿಂದ ಒಂದೆಡೆ ವ್ಯಾಪಾರ ಮಾಡಬೇಕು ಎಂದರು. ಐದು ನಗರ ಪಾಲಿಕೆಗಳ ರಚನೆ ಹಾಗೂ ಪ್ರಜಾ ಸೇವೆ ಇಲಾಖೆಯ ಮೂಲಕ ಆಡಳಿತವನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಗುರಿಯೊಂದಿಗೆ ಬೆಂಗಳೂರನ್ನು ಎಲ್ಲ ರಂಗಗಳಲ್ಲೂ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.

#CMDKShivakumar #BengaluruInfrastructure #AirportFlyover #HebbalFlyover #RotaryFlyover #BhumiGuarantee #BengaluruTraffic #BengaluruDevelopment #Udayakala #KarnatakaNews

Related Posts

Leave a Reply

Your email address will not be published. Required fields are marked *