Wednesday, October 21, 2026
Menu

34 ವರ್ಷಗಳ ಬಳಿಕ ನಿವೃತ್ತ  ದಿನಗೂಲಿ ಟೈಪಿಸ್ಟ್‌ಗೆ ನ್ಯಾಯ: ಅರ್ಹ ಸೌಲಭ್ಯ ನೀಡಲು ಸರ್ಕಾರಕ್ಕೆ ಹೈಕೋರ್ಟ್‌ ಆದೇಶ!

ಉದಯಕಾಲ ನ್ಯೂಸ್, ಬೆಂಗಳೂರು: ಸರ್ಕಾರದ ಇಲಾಖೆಗಳು ಅಥವಾ ಸ್ಥಳೀಯ ಸಂಸ್ಥೆಗಳಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲ ಸುದೀರ್ಘ ಸೇವೆ ಸಲ್ಲಿಸಿದ ಬಳಿಕ, ನೌಕರರು ನಿವೃತ್ತರಾಗಿದ್ದಾರೆಂಬ ಕಾರಣ ನೀಡಿ ಅವರ ಸೇವೆಯನ್ನು ಖಾಯಂಗೊಳಿಸುವ ಕೋರಿಕೆಯನ್ನು ತಿರಸ್ಕರಿಸುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. 34 ವರ್ಷಗಳ ಕಾಲ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ ಮಹಿಳಾ ಬೆರಳಚ್ಚುಗಾರರ (ಟೈಪಿಸ್ಟ್) ಸೇವೆಯನ್ನು ಕ್ರಮಬದ್ಧಗೊಳಿಸಿ, ಎಲ್ಲಾ ನಿವೃತ್ತಿ ಸೌಲಭ್ಯಗಳನ್ನು ಕಲ್ಪಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.

ಯಾರು ಆ ಮಹಿಳೆ!

ದಾಂಡೇಲಿ ನಗರಸಭೆಯಲ್ಲಿ ಉದ್ಯೋಗ ವಿನಿಮಯ ಕೇಂದ್ರದ ಮೂಲಕ ಪರಿಶಿಷ್ಟ ಜಾತಿಗೆ ಮೀಸಲಾದ ಖಾಲಿ ಹುದ್ದೆಗೆ 1988ರ ಜೂನ್ 8ರಂದು ಗೀತಾ ರಾಮಪ್ಪ ತೇರದಾಳ ಅವರು ದಿನಗೂಲಿ ಆಧಾರದ ಮೇಲೆ ಬೆರಳಚ್ಚುಗಾರರಾಗಿ (ಟೈಪಿಸ್ಟ್) ಸೇವೆಗೆ ಸೇರಿದ್ದರು. ಸರ್ಕಾರದ ನಿಯಮಾನುಸಾರವೇ ನೇಮಕಗೊಂಡಿದ್ದ ಅವರು, ವಿವಿಧ ಹುದ್ದೆಗಳನ್ನು ನಿರ್ವಹಿಸುತ್ತಾ ಸುಮಾರು 34 ವರ್ಷಗಳ ಕಾಲ ನಿರಂತರ ಸೇವೆ ಸಲ್ಲಿಸಿ 2022ರ ಜೂನ್‌ನಲ್ಲಿ ನಿವೃತ್ತರಾದರು.

ಆದರೆ, ಅವರೊಂದಿಗೆ ನೇಮಕಗೊಂಡಿದ್ದ ಇತರ 12 ಮಂದಿ ದಿನಗೂಲಿ ನೌಕರರನ್ನು ಸರ್ಕಾರ ಖಾಯಂಗೊಳಿಸಿದ್ದರೂ, ಗೀತಾ ಅವರನ್ನು ಮಾತ್ರ ಖಾಯಂಗೊಳಿಸಿರಲಿಲ್ಲ. ಪುರಸಭೆಯಿಂದ ಹಲವು ಬಾರಿ ಶಿಫಾರಸುಗಳಿದ್ದರೂ ಪ್ರಯೋಜನವಾಗಿರಲಿಲ್ಲ. ಇದನ್ನು ಪ್ರಶ್ನಿಸಿ ಅವರು ಹೈಕೋರ್ಟ್ ಮೊರೆ ಹೋಗಿದ್ದರು. ಆರಂಭದಲ್ಲಿ ಏಕಸದಸ್ಯ ಪೀಠವು ಅವರು ಈಗಾಗಲೇ ನಿವೃತ್ತರಾಗಿದ್ದಾರೆಂಬ ಕಾರಣಕ್ಕೆ ಅರ್ಜಿಯನ್ನು ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಅವರು ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದರು.

ಹೈಕೋರ್ಟ್ ವಿಭಾಗೀಯ ಪೀಠದ ಚಾಟಿ, ಮಹತ್ವದ ಆದೇಶ

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಹಾಗೂ ನ್ಯಾಯಮೂರ್ತಿ ಹೇಮಾ ಕುಲಕರ್ಣಿ ಅವರಿದ್ದ ವಿಭಾಗೀಯ ಪೀಠವು ರಾಜ್ಯ ಸರ್ಕಾರದ ಧೋರಣೆಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತು.

ಶೋಷಣೆಗೆ ಸಮ
“ತಾತ್ಕಾಲಿಕ ಉದ್ಯೋಗದ ನೆಪದಲ್ಲಿ ಕಾರ್ಮಿಕರ ಶಾಶ್ವತ ಪ್ರಯೋಜನವನ್ನು ಪಡೆದುಕೊಂಡು, ಕೊನೆಗೆ ನಿವೃತ್ತಿಯ ಹೊಸ್ತಿಲಲ್ಲಿ ಖಾಯಂಗೊಳಿಸಲು ನಿರಾಕರಿಸುವುದು ಶೋಷಣೆಗೆ ಸಮನಾಗಿದೆ. ಇದು ಮಾದರಿ ಸರ್ಕಾರದ ಲಕ್ಷಣವಲ್ಲ” ಎಂದು ಪೀಠ ಕಠಿಣವಾಗಿ ನುಡಿಯಿತು.
ಅರ್ಜಿದಾರರು 10 ವರ್ಷಗಳ ಸೇವೆ ಪೂರ್ಣಗೊಳಿಸಿದ ದಿನಾಂಕದಿಂದ ಅನ್ವಯವಾಗುವಂತೆ ಅವರ ಸೇವೆಯನ್ನು ಕ್ರಮಬದ್ಧಗೊಳಿಸಬೇಕು. 34 ವರ್ಷಗಳ ಸಂಪೂರ್ಣ ಸೇವೆಯನ್ನು ಪರಿಗಣಿಸಿ ಪಿಂಚಣಿ, ಗ್ರಾಚ್ಯುಟಿ ಸೇರಿದಂತೆ ಇಳಿವಯಸ್ಸಿನ ಎಲ್ಲಾ ಸೌಲಭ್ಯಗಳನ್ನು ಮರುಪರಿಗಣಿಸಿ ಮುಂದಿನ 8 ವಾರಗಳೊಳಗೆ ಆದೇಶ ಹೊರಡಿಸಬೇಕು ಎಂದು ಪೀಠ ಸ್ಪಷ್ಟಪಡಿಸಿದೆ. ತಪ್ಪಿದಲ್ಲಿ ವೇತನದ ಬಾಕಿ ಮೊತ್ತಕ್ಕೆ ಶೇ.50ರಷ್ಟು ಬಡ್ಡಿ ಪಾವತಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.
#KarnatakaHighCourt #DailyWageEmployees #LegalNews #UdayakalaNews #GovernmentJobs #EmployeeRights

Related Posts

Leave a Reply

Your email address will not be published. Required fields are marked *