ಉದಯಕಾಲ ನ್ಯೂಸ್, ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅತ್ಯಂತ ರೋಮಾಂಚಕ ಹಾಗೂ ಶತಮಾನಗಳ ಇತಿಹಾಸವಿರುವ ಸಾಂಪ್ರದಾಯಿಕ ‘ವಜ್ರಮುಷ್ಠಿ ಕಾಳಗ’ ಈ ಬಾರಿ ಅಧಿಕೃತವಾಗಿ ರದ್ದುಗೊಂಡಿದೆ. ಮೈಸೂರು ದಸರಾ ಇತಿಹಾಸದಲ್ಲೇ ಈ ರೀತಿ ವಜ್ರಮುಷ್ಠಿ ಕಾಳಗ ರದ್ದಾಗಿರುವುದು ಇದೇ ಮೊದಲು ಎನ್ನಲಾಗಿದ್ದು, ರಾಜಪರಂಪರೆ ಹಾಗೂ ಆಡಳಿತ ವ್ಯವಸ್ಥೆಯ ನಡುವಿನ ಸಮನ್ವಯದ ಕೊರತೆ ಮತ್ತು ಕಟ್ಟುನಿಟ್ಟಿನ ನಿರ್ಬಂಧಗಳಿಂದಾಗಿ ಐತಿಹಾಸಿಕ ಆಚರಣೆಯೊಂದಕ್ಕೆ ಬ್ರೇಕ್ ಬಿದ್ದಿದೆ.
ಮುನಿಸಿಗೆ ಕಾರಣವೇನು?
ವಿಜಯದಶಮಿಯ ದಿನದಂದು ಮೈಸೂರು ಅರಮನೆಯ ಒಳಗಿರುವ ‘ಕರಿಗಲ್ಲು ತೊಟ್ಟಿ’ಯಲ್ಲಿ ರಾಜವಂಶಸ್ಥರ ಸಮ್ಮುಖದಲ್ಲಿ ಜಟ್ಟಿ ಸಮುದಾಯದವರಿಂದ ಈ ಸಾಹಸಮಯ ವಜ್ರಮುಷ್ಠಿ ಕಾಳಗ ಜರುಗುವುದು ವಾಡಿಕೆ. ಈ ಬಾರಿಯ ಕಾಳಗಕ್ಕಾಗಿ ಬೆಂಗಳೂರು, ಮೈಸೂರು, ಚನ್ನಪಟ್ಟಣ ಹಾಗೂ ಚಾಮರಾಜನಗರದ ಗರಡಿಗಳಿಂದ ಜಟ್ಟಿ ಪೈಲ್ವಾನರನ್ನು ಮುಂಚಿತವಾಗಿ ಆಯ್ಕೆ ಕೂಡ ಮಾಡಲಾಗಿತ್ತು.
ಆದರೆ, ವಿಜಯದಶಮಿ ದಿನದಂದು ನಿಗದಿತ ಮುಹೂರ್ತದೊಳಗೆ ಅರಮನೆ ಪ್ರವೇಶಿಸಲು ಮತ್ತು ಕಾಳಗಕ್ಕೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲು ಜಟ್ಟಿ ಪೈಲ್ವಾನರಿಗೆ ಹಾಗೂ ಅವರ ಉಸ್ತಾದ್ಗಳಿಗೆ ಪೊಲೀಸರ ಕಟ್ಟುನಿಟ್ಟಿನ ನಿರ್ಬಂಧ ಹಾಗೂ ಅಧಿಕಾರಿಗಳ ಕಡೆಯಿಂದ ಸೂಕ್ತ ಸ್ಪಂದನೆ ಸಿಗಲಿಲ್ಲ ಎಂಬ ಗಂಭೀರ ಆರೋಪ ಕೇಳಿಬಂದಿದೆ. ರಾಜವಂಶಸ್ಥರು ಪ್ರವೇಶ ಪಾಸ್ಗಳನ್ನು ನೀಡಿದ್ದರೂ ಸಹ, ಕರ್ತವ್ಯದಲ್ಲಿದ್ದ ಭದ್ರತಾ ಸಿಬ್ಬಂದಿ ಅರಮನೆಯೊಳಗೆ ಪ್ರವೇಶಿಸಲು ಅವಕಾಶ ಕಲ್ಪಿಸಿಲ್ಲ ಎನ್ನಲಾಗಿದೆ. ಇದರಿಂದ ತೀವ್ರ ಬೇಸರಗೊಂಡ ಜಟ್ಟಿಗಳು ಮತ್ತು ಉಸ್ತಾದ್ಗಳು ಕಾಳಗದಿಂದ ಹಿಂದೆ ಸರಿದರು.
ಕಾಳಗವಿಲ್ಲದೆಯೇ ವಿಜಯಯಾತ್ರೆ ಆರಂಭ
ಪರಿಣಾಮವಾಗಿ, ಅರಮನೆಯ ಸಂಪ್ರದಾಯದಂತೆ ವಜ್ರಮುಷ್ಠಿ ಕಾಳಗ ನಡೆಯದೆಯೇ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ವಿಜಯಯಾತ್ರೆಗೆ ತೆರಳಬೇಕಾಯಿತು. ಶತಮಾನಗಳಿಂದ ನಡೆದುಕೊಂಡು ಬಂದಿರುವ ರಾಜಪ್ರಭುತ್ವದ ಸಾಂಪ್ರದಾಯಿಕ ಕಲೆ ಹಾಗೂ ಜಟ್ಟಿಗಳ ಕುಸ್ತಿ ಕೇಕೆಗೆ ಈ ರೀತಿಯ ಅಡಚಣೆಂಟಾಗಿರುವುದು ದಸರಾ ಸಂಭ್ರಮದಲ್ಲಿದ್ದ ಸಾರ್ವಜನಿಕರು ಹಾಗೂ ಸಂಪ್ರದಾಯವಾದಿಗಳಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಸರ್ಕಾರದ ಆಡಳಿತ ಯಂತ್ರ ಹಾಗೂ ಅರಮನೆ ಮಂಡಳಿ ನಡುವಿನ ಸಮನ್ವಯದ ಕೊರತೆಯೇ ಈ ಐತಿಹಾಸಿಕ ಹಿನ್ನಡೆಗೆ ಕಾರಣ ಎಂಬ ಟೀಕೆಗಳು ವ್ಯಕ್ತವಾಗಿವೆ.
#MysuruDasara2026 #VajramushtiKalaga #MysuruPalace #UdayakalaNews #KarnatakaTradition #YaduveerWadiyar


