ತೆಲಂಗಾಣದ ಅಣ್ಣಾಸಾಗರ ಗ್ರಾಮದ ಹೊರವಲಯದಲ್ಲಿ ಹೆಸರಿಗೆ ಮಾತ್ರ ಕೋಳಿ ಫಾರಂ, ಆದರೆ ಒಳಗೆ ನಡೆಯುತ್ತಿದ್ದುದು ಅಪಾಯಕಾರಿ ಮಾದಕ ದ್ರವ್ಯಗಳ ತಯಾರಿಕೆ. ಇಂಥದ್ದೊಂದು ಅಕ್ರಮ ಜಾಲವನ್ನು ಬಯಲಿಗೆಳೆಯುವಲ್ಲಿ ಆ ರಾಜ್ಯದ ವಿಶೇಷ ಮಾದಕ ದ್ರವ್ಯ ನಿಗ್ರಹ ದಳ ಯಶಸ್ವಿಯಾಗಿದೆ.
ಅಣ್ಣಾಸಾಗರ ಗ್ರಾಮದ ಹೊರವಲಯದಲ್ಲಿರುವ ಲಕ್ಷ್ಮೀ ನರಸಿಂಹ ಪೌಲ್ಟ್ರಿ ಫಾರಂ ಮೇಲೆ ದಾಳಿ ನಡೆಸಿದ ಈಗಲ್ ದಳದ ಅಧಿಕಾರಿಗಳು, ಅಲ್ಲಿ ಅಡಗಿಸಿಟ್ಟಿದ್ದ ಮಾದಕ ದ್ರವ್ಯ ತಯಾರಿಕಾ ಘಟಕವನ್ನು ಪತ್ತೆ ಹಚ್ಚಿದ್ದಾರೆ. ದಾಳಿಯ ವೇಳೆ 20 ಲಕ್ಷ ರೂಪಾಯಿ ಮೌಲ್ಯದ ಒಂದು ಕೆಜಿಗೂ ಅಧಿಕ ಆಲ್ಪ್ರಜೋಲಮ್ (Alprazolam) ಎಂಬ ಪ್ರಬಲ ನಿದ್ರಾಜನಕ ಔಷಧಿಯನ್ನು ವಶಕ್ಕೆ ಪಡೆಯಲಾಗಿದೆ. ಅಕ್ರಮ ತಯಾರಿಕೆಗೆ ಬಳಸಲಾಗುತ್ತಿದ್ದ ಭಾರಿ ಪ್ರಮಾಣದ
ರಾಸಾಯನಿಕಗಳು ಮತ್ತು ಯಂತ್ರೋಪಕರಣಗಳನ್ನು ಜಪ್ತಿ ಮಾಡಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದ್ದು, ಈ ದಂಧೆಯ ಪ್ರಮುಖ ಸೂತ್ರಧಾರ 39 ವರ್ಷದ ಜಯಪ್ರಕಾಶ್ ಗೌಡ್ ಎಂದು ಗುರುತಿಸಲಾಗಿದೆ. ಈತ ಈಗಾಗಲೇ ಕಳೆದ ವರ್ಷ ಶಾಲೆ ಒಂದರೊಳಗೆ ಇದೇ ರೀತಿಯ ಮಾದಕ ದ್ರವ್ಯ ತಯಾರಿಕಾ ಘಟಕ ನಡೆಸುತ್ತಿದ್ದ ಆರೋಪದ ಮೇಲೆ ಜೈಲು ಸೇರಿದ್ದವನು. ಜಾಮೀನಿನ ಮೇಲೆ ಬಿಡುಗಡೆಯಾದ ಕೆಲವೇ ತಿಂಗಳಲ್ಲಿ ಪೆರೋಲ್ ನಿಯಮ ಉಲ್ಲಂಘಿಸಿ, ತಲೆಮರೆಸಿಕೊಂಡು ಈ ಹೊಸ ಅಡ್ಡೆಯನ್ನು ಸೃಷ್ಟಿಸಿ ಅಕ್ರಮ ಮಾದಕ ದ್ರವ್ಯ ದಂಧೆಯಲ್ಲಿ ನಿರತನಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ತನಿಖೆಯಲ್ಲಿ ಬಯಲಾದ ಮತ್ತೊಂದು ಆಘಾತಕಾರಿ ವಿಷಯವೆಂದರೆ, ಈ ಅಕ್ರಮಕ್ಕೆ 58 ವರ್ಷದ ಬೋಯಾ ನರಸಿಂಹಲು ಎಂಬ ರೇಷನ್ ಡೀಲರ್ ಸಾಥ್ ನೀಡಿ, ತನ್ನ ಕೋಳಿ ಫಾರಂನಲ್ಲಿ ಈ ಅಕ್ರಮ ದಂಧೆಗೆ ಆಶ್ರಯ ಕೊಟ್ಟಿರುವುದಾಗಿ ತಿಳಿದು ಬಂದಿದೆ.
ಇಲ್ಲಿ ತಯಾರಿಸಿದ ಈ ಪ್ರಬಲ ಡ್ರಗ್ಸ್ ಅನ್ನು ಸ್ಥಳೀಯ ವ್ಯಾಪಾರಿಗಳಿಗೆ ಸರಬರಾಜು ಮಾಡಲಾಗುತ್ತಿತ್ತು. ಸ್ಥಳೀಯ ಪಾನೀಯವಾದ ತಾಡಿಯಲ್ಲಿ ಬೆರೆಸಿ ಮಾರಾಟ ಮಾಡುತ್ತಿದ್ದದ್ದು ತನಿಖೆಯಿಂದ ತಿಳಿದುಬಂದಿದೆ. ಈ
ಔಷಧಿಯನ್ನು ಪಾನೀಯಗಳಲ್ಲಿ ಬೆರೆಸಿ ಸೇವಿಸುವುದರಿಂದ ಸಾರ್ವಜನಿಕರ ಆರೋಗ್ಯಕ್ಕೆ ಮಾರಣಾಂತಿಕ ಹಾನಿ ಉಂಟಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ.
ಈ ಜಾಲದ ಹಿಂದಿರುವ ಹಣಕಾಸಿನ ಮೂಲಗಳು, ರಾಸಾಯನಿಕ ಪೂರೈಕೆದಾರರು ಮತ್ತು ಸಂಪರ್ಕ ಹೊಂದಿರುವ ಇತರ ಸ್ಥಳೀಯ ವ್ಯಾಪಾರಿಗಳ ಪತ್ತೆಗೆ ಈಗಲ್ ತಂಡದ ಅಧಿಕಾರಿಗಳು ತೀವ್ರ ತನಿಖೆ ಮುಂದುವರಿಸಿದ್ದಾರೆ.


