Menu

ಸಂಸದ್‌ ಚಲೊಗೆ ಮುಂದಾದ ಸಿಜೆಪಿ ಕಾರ್ಯಕರ್ತರ ಮೇಲೆ ಲಾಠಿ ಪ್ರಹಾರ

ಸಂಸತ್ತಿನ ಮುಂಗಾರು ಅಧಿವೇಶನ ಆರಂಭಗೊಂಡ ಮೊದಲ ದಿನ ನವದೆಹಲಿ ಪ್ರತಿಭಟನೆಯ ಕಾರಣಕ್ಕೆ ಉದ್ವಿಗ್ನಗೊಂಡಿದೆ. ಕಾಕ್ರೋಚ್‌ ಜನತಾ ಪಾರ್ಟಿ ನೇತೃತ್ವದಲ್ಲಿ ಸಂಸದ್‌ ಚಲೊ ಪ್ರಯತ್ನ ನಡೆದಿದ್ದು, ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಘರ್ಷಣೆ ನಡೆಯಿತು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿ, ಕೆಲವರನ್ನು ವಶಕ್ಕೆ ಪಡೆದರು.

ನೀಟ್‌ ಪರೀಕ್ಷೆಯಲ್ಲಿ ನಡೆದಿರುವ ಅಕ್ರಮಗಳನ್ನು ಖಂಡಿಸಿ, ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆಗೆ ಆಗ್ರಹಿಸಿ ಕಾಕ್ರೋಚ್‌ ಜನತಾ ಪಾರ್ಟಿ ಮತ್ತು ಬೆಂಬಲಿಗರು ಜಂತರ್‌ ಮಂತರ್‌ನಿಂದ ಸಂಸತ್‌ ಬವನಕ್ಕೆ ತೆರಳುತ್ತಿದ್ದಾಗ ಭದ್ರತಾ ಸಿಬ್ಬಂದಿ ತಡೆ ಹಿಡಿದಿದ್ದಾರೆ.

ಸಂಸತ್ ಅಧಿವೇಶನದ ಕಾರಣ ಭದ್ರೆ ಬಿಗಿಗೊಳಿಸಲಾಗಿದೆ. ನಿಗದಿತ ಪ್ರತಿಭಟನಾ ಸ್ಥಳಗಳನ್ನು ಹೊರತುಪಡಿಸಿ, ಐದಕ್ಕಿಂತ ಹೆಚ್ಚು ಜನರು ಗುಂಪುಗೂಡುವುದು, ಮೆರವಣಿಗೆ ನಡೆಸುವುದು ಹಾಗೂ ಸಂಸತ್ ಭವನದತ್ತ ಸಾಗುವುದನ್ನು ಸಂಪೂರ್ಣ ನಿಷೇಧಿಸಲಾಗಿತ್ತು. ಈ ನಿಷೇಧಾಜ್ಞೆಯನ್ನು ಉಲ್ಲಂಘಿಸಿ ಪ್ರತಿಭಟನಾಕಾರರು ಮುಂದೆ ಸಾಗಲು ಯತ್ನಿಸಿದಾಗ ಪೊಲೀಸರು ಅವರನ್ನು ತಡೆದು ಲಾಠಿಚಾರ್ಜ್‌ ಮಾಡಿದ್ದಾರೆ. ಈ ಬೆಳವಣಿಗೆ ಬಳಿಕ ದೆಹಲಿಯ ಕೆಲವು ಭಾಗಗಳಲ್ಲಿ ಮೊಬೈಲ್ ಇಂಟರ್ನೆಟ್ ಸ್ಥಗಿತಗೊಂಡಿದೆ.

ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಕಾಕ್ರೋಚ್‌ ಜನತಾ ಪಾರ್ಟಿ ಕಾರ್ಯಕರ್ತರು ಹಾಗೂ ವಿದ್ಯಾರ್ಥಿಗಳು ಜಂತರ್ ಮಂತರ್‌ನಲ್ಲಿ ಜಮಾಯಿಸಿ ಸಂಸತ್ತಿನತ್ತ ಹೋಗುವ ಪ್ರಯತ್ನ ನಡೆಸಿದ್ದಾರೆ. ಆದರೆ ಇದಕ್ಕೆ ಅಧಿಕೃತ ಅನುಮತಿ ನೀಡಿರಲಿಲ್ಲ ಮತ್ತು ಕಾನೂನು ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಮೊದಲೇ ಎಚ್ಚರಿಕೆ ನೀಡಿದ್ದರು.

ಸಂಸತ್ತಿನ ಮುಂಗಾರು ಅಧಿವೇಶನ ಆಗಸ್ಟ್ 13ರವರೆಗೆ ನಡೆಯಲಿದೆ, ಕೇಂದ್ರ ಸರ್ಕಾರ ಹಲವು ಮಹತ್ವದ ಮಸೂದೆಗಳನ್ನು ಮಂಡಿಸಲು ಸಜ್ಜಾಗಿದ್ದು, ರಾಷ್ಟ್ರೀಯ ಹಾಗೂ ರಾಜ್ಯ ಮಟ್ಟದ ವಿಚಾರಗಳನ್ನು ಮುಂದಿಟ್ಟುಕೊಂಡು ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಪ್ರತಿಪಕ್ಷಗಳು ಸಿದ್ಧತೆ ನಡೆಸಿವೆ.

Related Posts

Leave a Reply

Your email address will not be published. Required fields are marked *