Menu

ಚಾಮರಾಜದಲ್ಲಿ ಬಿಜೆಪಿಗೆ ಬಿಜೆಪಿಯೇ ವಿರೋಧಿ: ಕಾರ್ಯಕರ್ತನಿಗೆ ಕೊಲೆ ಬೆದರಿಕೆ

ಉದಯಕಾಲ ನ್ಯೂಸ್, ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕಮಲ ಪಾಳಯದಲ್ಲಿ ಆಂತರಿಕ ಕಲಹ ಭುಗಿಲೆದ್ದಿದೆ. ಬಿಜೆಪಿ ಸಮಾವೇಶವೊಂದರಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ಅವರ ಹೆಸರನ್ನು ಸ್ವಾಗತ ಭಾಷಣದಲ್ಲಿ ಉಲ್ಲೇಖಿಸದ ವಿಚಾರವು ತೀವ್ರ ಸ್ವರೂಪದ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದ್ದು, ಈ ಸಂಬಂಧ ಗಲಾಟೆ ಮಾಡಿದ ಕಾರ್ಯಕರ್ತನಿಗೆ ಕೊಲೆ ಬೆದರಿಕೆ ಹಾಕಿರುವ ಗಂಭೀರ ಆರೋಪ ಕೇಳಿಬಂದಿದೆ.

ಸಮಾವೇಶದಲ್ಲಿ ಪ್ರತಾಪ್ ಸಿಂಹ ಹೆಸರು ಕೈಬಿಟ್ಟಿದ್ದೇ ಕಿಡಿ

ಡಿಸೆಂಬರ್ 6ರಂದು ಮೈಸೂರಿನ ನಗರದ ಟೌನ್ ಹಾಲ್ ಆವರಣದಲ್ಲಿ ‘ಪ್ರಜಾಪ್ರಭುತ್ವ ಉಳಿಸಿ, ಅರಾಜಕತೆ ಅಳಿಸಿ’ ಎಂಬ ಶೀರ್ಷಿಕೆಯಡಿ ಬಿಜೆಪಿ ವತಿಯಿಂದ ಬೃಹತ್ ಸಮಾವೇಶ ಹಾಗೂ ಪಾದಯಾತ್ರೆ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸೇರಿದಂತೆ ಹಲವು ಹಿರಿಯ ಮುಖಂಡರು ಭಾಗವಹಿಸಿದ್ದರು. ಆದರೆ, ಸಮಾವೇಶದಲ್ಲಿ ಸ್ವಾಗತ ಭಾಷಣ ಮಾಡಿದ ಬಿಜೆಪಿ ನಗರಾಧ್ಯಕ್ಷ ಹಾಗೂ ಮಾಜಿ ಶಾಸಕ ಎಲ್. ನಾಗೇಂದ್ರ ಅವರು ಪಕ್ಷದ ಅನೇಕ ನಾಯಕರ ಹೆಸರುಗಳನ್ನು ಪ್ರಸ್ತಾಪಿಸಿದರೂ, ಮಾಜಿ ಸಂಸದ ಪ್ರತಾಪ್ ಸಿಂಹ ಅವರ ಹೆಸರನ್ನು ಸಂಪೂರ್ಣವಾಗಿ ಕಡೆಗಣಿಸಿದ್ದರು. ಇದನ್ನು ಗಮನಿಸಿದ ಬಿಜೆಪಿ ಕಾರ್ಯಕರ್ತ ಡಿ.ಎಲ್. ರಾಜಚಾರಿ ವೇದಿಕೆಯ ಮುಂಭಾಗಕ್ಕೆ ತೆರಳಿ, ಪ್ರತಾಪ್ ಸಿಂಹ ಅವರ ಹೆಸರನ್ನೂ ಹೇಳುವಂತೆ ಬಹಿರಂಗವಾಗಿ ಒತ್ತಾಯಿಸಿ ಗಲಾಟೆ ಮಾಡಿದ್ದರು. ಕೂಡಲೇ ಎಚ್ಚೆತ್ತ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿ ರಾಜಚಾರಿಯನ್ನು ವೇದಿಕೆಯಿಂದ ಹೊರಗೆ ಕಳುಹಿಸಿದ್ದರು.

ಕಾರ್ಯಕರ್ತನಿಗೆ ಕೊಲೆ ಬೆದರಿಕೆ

ಸಮಾವೇಶದ ನಂತರವೂ ಈ ವಿವಾದ ತಣ್ಣಗಾಗಿಲ್ಲ. ಕಾರ್ಯಕ್ರಮ ಮುಗಿದ ಬಳಿಕ ಮೈಸೂರು ವಿಮಾನ ನಿಲ್ದಾಣದ ಬಳಿ ಡಿ.ಎಲ್. ರಾಜಚಾರಿ ಅವರನ್ನು ಅಡ್ಡಗಟ್ಟಿದ ಎಲ್. ನಾಗೇಂದ್ರ ಅವರ ಬೆಂಬಲಿಗರು ತೀವ್ರವಾಗಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೆ, ಕುಡಿದು 2,000 ರೂಪಾಯಿಗಾಗಿ ಗಲಾಟೆ ಮಾಡಿದ್ದಾಗಿ ಒಪ್ಪಿಕೊಂಡು ಹೇಳಿಕೆ ನೀಡುವಂತೆ ಬಲವಂತ ಮಾಡಿ, ಆ ವಿಡಿಯೋವನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡಿದ್ದಾರೆ ಎಂಬ ಗಂಭೀರ ಸಂಗತಿ ಬೆಳಕಿಗೆ ಬಂದಿದೆ.

ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲು

ಘಟನೆ ನಡೆದ ಎರಡು ದಿನಗಳ ಬಳಿಕ ಮಾಧ್ಯಮಗಳ ಮುಂದೆ ಸ್ಪಷ್ಟನೆ ನೀಡಿರುವ ಕಾರ್ಯಕರ್ತ ರಾಜಚಾರಿ, ತಮ್ಮ ಮೇಲಿನ ಆರೋಪಗಳನ್ನು ತಳ್ಳಿಹಾಕಿದ್ದಾರೆ. ನನಗೆ ಕುಡಿಯುವ ಅಭ್ಯಾಸವೇ ಇಲ್ಲ. ಆದರೆ ಎಲ್. ನಾಗೇಂದ್ರ ಅವರ ನಾಲ್ವರು ಬೆಂಬಲಿಗರು ನನ್ನನ್ನು ಹೆದರಿಸಿ, ಕೊಲೆ ಬೆದರಿಕೆ ಹಾಕಿ ಒತ್ತಡದ ಮೂಲಕ ಆ ವಿಡಿಯೋ ಮಾಡಿಸಿಕೊಂಡಿದ್ದಾರೆ. ಅವರ ಜೀವ ಬೆದರಿಕೆಯಿಂದಾಗಿಯೇ ನಾನು ವಿಡಿಯೋದಲ್ಲಿ ಆ ರೀತಿ ಹೇಳಬೇಕಾಯಿತು ಎಂದು ಅಳಲು ತೋಡಿಕೊಂಡಿದ್ದಾರೆ. ಈ ಸಂಬಂಧ ರಾಜಚಾರಿ ಅವರು ನಾಲ್ವರು ವ್ಯಕ್ತಿಗಳ ವಿರುದ್ಧ ಮೈಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಧಿಕೃತವಾಗಿ ಎಫ್‌ಐಆರ್ ದಾಖಲಿಸಿದ್ದು, ಪೊಲೀಸ್ ತನಿಖೆಯಿಂದ ಹೆಚ್ಚಿನ ಸತ್ಯಾಂಶ ಹೊರಬರಬೇಕಿದೆ.

#MysuruBJP #PratapSimha #LNagendra #BJPFriction #KarnatakaPolitics #UdayakalaNews

Related Posts

Leave a Reply

Your email address will not be published. Required fields are marked *