ಹೌದು, ಇಂದಿನ ಮೌಲ್ಯದಲ್ಲಿ ನನ್ನ ಬಳಿ 1,400 ಕೋಟಿ ರೂ. ಮೌಲ್ಯದ ಆಸ್ತಿ ಇದೆ. ನಾನು ಕಾನೂನು ಚೌಕಟ್ಟಿನಲ್ಲಿ ಆಸ್ತಿ ಸಂಪಾದಿಸಿದ್ದೇನೆ. ಕುಮಾರಸ್ವಾಮಿ ಅವರು ಹತಾಶಾರಾಗಿ ಈ ರೀತಿ ಮಾತನಾಡುತ್ತಿದ್ದಾರೆ ಎಂದು ಸಿಎಂ ಡಿಕೆ ಶಿವಕುಮಾರ್ ತಿರುಗೇಟು ನೀಡಿದರು.
ನವದೆಹಲಿಯಲ್ಲಿ ಕುಮಾರಸ್ವಾಮಿ ಅವರ ಆರೋಪಗಳಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಸಿಎಂ , ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯಲ್ಲಿ ಬಿರುಕು, ತಾ ಮುಂದು ನಾ ಮುಂದು ಎಂಬ ಪೈಪೋಟಿಯಲ್ಲಿ ಕುಮಾರಸ್ವಾಮಿ ಹತಾಶರಾಗಿದ್ದಾರೆ. ಅವರ ತಂದೆ ದೇವೇಗೌಡರೇ ಆ ಯೋಜನೆಗೆ ಸಹಿ ಹಾಕಿದ್ದರು. ಜೊತೆಗೆ ಇವರು ಸಹ ಮುಖ್ಯಮಂತ್ರಿಯಾಗಿದ್ದರು. ಗಾಂಧಿ ಎನ್ನುವವರೊಬ್ಬರಿಗೆ ಇವರೇ ಪ್ರಯತ್ನಿಸಿ ಟೆಂಡರ್ ಕೊಡಿಸಿದರು. ಈ ವಿಚಾರವಾಗಿ ನ್ಯಾಯಾಲಯವು ಛೀಮಾರಿ ಹಾಕಿತ್ತು. ಬೇನಾಮಿ ಹೆಸರಿನಲ್ಲಿ ಅಲ್ಲಲ್ಲಿ ಸಾಕಷ್ಟು ವ್ಯವಹಾರಗಳು ನಡೆದವು. ಅವರಂತೆ ನಾನು ಹೆಸರುಗಳನ್ನು ತೆಗೆದುಕೊಳ್ಳಲು ಹೋಗುವುದಿಲ್ಲ ಎಂದು ತಿಳಿಸಿದರು.
ನನ್ನ ಆಸ್ತಿ ವಿಚಾರವಾಗಿ ಮಾತನಾಡಿದ್ದಾರೆ. ಉದ್ಯಮಿಯಾದ ನನಗೆ ಆಸ್ತಿ ಇರಬಾರದೇ, ನನ್ನ ಮಕ್ಕಳು ಆಸ್ತಿ ಕೊಂಡುಕೊಳ್ಳಬಾರದೇ, ಕಾನೂನಾತ್ಮಕ ಇರುವ ಅವಕಾಶದಲ್ಲೇ ನಾನು ಆಸ್ತಿ ಮಾಡಿದ್ದೇನೆ. ತಪ್ಪೇನಿದೆ, ಕುಮಾರಸ್ವಾಮಿ ಆದಾಯ ತೆರಿಗೆ ಅಧಿಕಾರಿಯೇ? ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡಲಿ ಎಂದು ಸವಾಲು ಹಾಕಿದರು. ಇವರು ಯಾವುದೋ ಊರಿಂದ ಬಂದು ಇಲ್ಲೆಲ್ಲಾ ಆಸ್ತಿಗಳನ್ನ ತೆಗೆದುಕೊಳ್ಳಬಹುದಾ. ಬಿಎಂಐಸಿಎಪಿಎ , ನೈಸ್ ರಸ್ತೆ ಯೋಜನೆಯೊಳಗೆ ಇವರ ಆಸ್ತಿ ಇಲ್ಲವೇ? ಯಾಕೆ ಇವರ ಆಸ್ತಿಗಳೆಲ್ಲಾ ವ್ಯಾಪ್ತಿಯಲ್ಲಿ, ಬಿಡದಿ ಟೌನ್ ಶಿಪ್ ಯೋಜನೆಯೊಳಗೆ ಹೇಗೆ ಆಸ್ತಿ ಬಂದಿತು ಎಂದು ಪ್ರಶ್ನಿಸಿದರು.
ಕುಮಾರಸ್ವಾಮಿ ಏನಾದರೂ ಮಾಡಿಕೊಳ್ಳಲಿ. ನಾನು ತಲೆಕೆಡಿಸಿಕೊಳ್ಳೋದಿಲ್ಲ. ನನಗೆ ಆಸ್ತಿ ಇದೆ. ನನ್ನ ಮಕ್ಕಳಿಗೆ ಇನ್ನೂ ತೆಗೆದುಕೊಳ್ಳುವ ಶಕ್ತಿ ಇದ್ದರೆ ತೆಗೆದುಕೊಳ್ಳುತ್ತಾರೆ. ಕಾನೂನಲ್ಲಿ ಅವಕಾಶ ಇದೆ, ಖರೀದಿ ಮಾಡುವ ಸಾಮರ್ಥ್ಯವಿದೆ, ಬದುಕುತ್ತಾರೆ ಎಂದು ಸ್ಪಷ್ಟಪಡಿಸಿದರು.
ಶೋಭಾ ಡೆವಲಪರ್ಸ್ ಜೊತೆ 5 ಕೋಟಿ ಹೂಡಿಕೆ ಮಾಡಿ ಈಗ 2,000 ಕೋಟಿ ಮಾಡಿದ್ದಾರೆ ಎನ್ನುವ ಆರೋಪದ ಬಗ್ಗೆ ಕೇಳಿದಾಗ, ಹೌದು, ನಾವು ಎಷ್ಟಾದರೂ ಮಾಡುತ್ತೇವೆ. ನನಗೆ ಮಾಜಿ ಸಿಎಂ ದಿವಂಗತ ಬಂಗಾರಪ್ಪ 1 ಲಕ್ಷ ರೂಪಾಯಿಗೆ ಆಗ ಒಂದು ನಿವೇಶನ ನೀಡಿದ್ದರು. ಇಂದು ಅದರ ಬೆಲೆ 20 ಕೋಟಿ ಇದೆ. ಇದರಲ್ಲಿ ಏನಾದರೂ ತಪ್ಪಿದೆಯೇ? ನಾನು ಲಂಚ ಹೊಡೆದಿದ್ದೇನೆಯೇ? ಇಲ್ಲ ಯಾವುದಾದರೂ ಹಗರಣದಲ್ಲಿ ಸಿಕ್ಕಿಹಾಕಿಕೊಂಡಿದ್ದೆನೆಯೇ? ಯಾವುದೂ ಇಲ್ವವಲ್ಲಾ ಎಂದು ವ್ಯಂಗ್ಯವಾಡಿದರು.
ನನಗೆ ಉದ್ದಿಮೆ ಮಾಡಲು ಎಲ್ಲಾ ರೀತಿಯ ಹಕ್ಕು, ಅವಕಾಶವಿದೆ. ನನ್ನ ಮಕ್ಕಳಿಗೂ ಸಾಮರ್ಥ್ಯವಿದೆ. ಇನ್ನೂ ಖರೀದಿ ಮಾಡುವ ಸಾಮರ್ಥ್ಯವಿದೆ. ನನ್ನ ಆಸ್ತಿ ಈಗಾಗಲೇ ಘೋಷಣೆ ಮಾಡಿಕೊಂಡಿದ್ದೇನೆ. ಕುಮಾರಸ್ವಾಮಿ ಅವರದ್ದು ಏನೇನಿದೆ ಅಂತ ನಾನು ಈಗ ಮಾತನಾಡಲು ಹೋಗುವುದಿಲ್ಲ. ನನಗೆ ಈ ವಿಚಾರಗಳನ್ನು ಯಾರೋ ಹೇಳಿದರು. ಕುಮಾರಸ್ವಾಮಿ ಅವರು ಎಲ್ಲಾ ಎತ್ತಿಕೊಂಡು ಹೋಗಿ ಸಂಸ್ಥೆಗಳಿಗೆಲ್ಲಾ ಈಗಾಗಲೇ ಕೊಟ್ಟಿದ್ದಾರಲ್ಲಾ? ಇನ್ನೆಷ್ಟು ಬಾರಿ ಕೊಡುತ್ತಾರೆ. ಅವರಿಗೆ ಲಾರಿ ಬೇಕಾದರೆ ಕಳುಹಿಸಿಕೊಡೋಣ ಎಂದು ಲೇವಡಿ ಮಾಡಿದರು.
ಕುಮಾರಸ್ವಾಮಿ ಅವರು ವಿಧಾನಸೌಧದ ಮೆಟ್ಟಿಲುಗಳ ಮೇಲೆ ಚರ್ಚೆಗೆ ಸವಾಲು ಹಾಕಿರುವ ಬಗ್ಗೆ ಕೇಳಿದಾಗ, ವಿಧಾನಸೌಧದ ಮೆಟ್ಟಿಲುಗಳ ಮೇಲೆ ಯಾಕೆ, ಧೈರ್ಯವಿದ್ದರೆ ಯಾರನ್ನಾದರೂ ಕೌನ್ಸಿಲ್ ಅಥವಾ ಅಸೆಂಬ್ಲಿ ಸದಸ್ಯತ್ವಕ್ಕೆ ರಾಜೀನಾಮೆ ಕೊಡಿಸಿ, ಅಸೆಂಬ್ಲಿ ಒಳಗಡೆ ಬಂದು ಚರ್ಚೆ ಮಾಡಲಿ. ವಿಧಾನಸೌಧದ ಮೆಟ್ಟಿಲುಗಳ ಮೇಲೆ ಚರ್ಚೆ ಮಾಡುವ ಬದಲು ಫ್ರೀಡಂ ಪಾರ್ಕ್ ಇದೆ, ಅಲ್ಲಿಗೆ ಹೋಗಿ ಚರ್ಚೆ ಮಾಡಿಕೊಳ್ಳಲಿ ಎಂದು ಹೇಳಿದರು.
ನೈಸ್ ಯೋಜನೆ ಜಾರಿಗೆ ತಮಗೆ ಬೆಂಬಲ ಇರಲಿಲ್ಲ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಹೇಳಿಕೆ ಬಗ್ಗೆ ಮಾತನಾಡಿ,2007 ರಲ್ಲಿ ಅವರಿಗೆ ಅಧಿಕಾರವಿತ್ತಲ್ಲ. ಇವರೇ ಹರಾಜಿನಲ್ಲಿ ನಿಖಿಲ್ ಗಾಂಧಿಗೆ ಕೊಟ್ಟಿದ್ದರಲ್ಲ. ಅಧಿಕಾರದಲ್ಲಿದ್ದಾಗ ಟೋಲ್ ರದ್ದು ಮಾಡದವರು ಈಗ ದೇಶಾದ್ಯಂತ ಟೋಲ್ ಬಂದ್ ಮಾಡಿಸಲು ಪ್ರಧಾನಿ ಮೋದಿಯವರಿಗೆ ಹೇಳಲಿ. ಈ ಗೊಡ್ಡು ಬೆದರಿಕೆಗೆಲ್ಲಾ ಶಿವಕುಮಾರ್ ಹೆದರುವುದಿಲ್ಲ. ಮಾಡುವ ಕೆಲಸ ಮಾಡೋಣ. ನಮ್ಮ ಸರ್ಕಾರದ ಜನಪ್ರಿಯತೆಯನ್ನು ಅವರಿಗೆ ತಡೆದುಕೊಳ್ಳಲಾಗುತ್ತಿಲ್ಲ. ಅಸೂಯೆಗೆ ಮದ್ದಿಲ್ಲ ಎಂದು ಹಿಂದೆಯೂ ಹೇಳಿದ್ದೇನೆ, ಈಗಲೂ ಹೇಳುತ್ತಿದ್ದೇನೆ, ನಾಳೆಯೂ ಹೇಳುತ್ತೇನೆ ಎಂದರು.
ಕುಮಾರಸ್ವಾಮಿ ಅವರು ಇದು ಭಾಗ 1 ಎಂದು ಹೇಳಿದ್ದಾರೆ ಎಂದು ಕೇಳಿದಾಗ, ಪಾರ್ಟ್ 1, 2, 3,4 ಸ್ಟಿಂಗ್, ಆರ್ಟಿಫಿಷಿಯಲ್ ಇಂಟೆಲಿಜೆನ್ಸ್, ಅವರ ಹತ್ರ ಇರೋದೆಲ್ಲಾ ಗೊತ್ತಿದೆ. ಚೆನ್ನಿಗಪ್ಪನ ಕಾಲದಿಂದಲೂ ಗೊತ್ತಿದೆ. ಬಾಲ ಗಂಗಾಧರನಾಥ ಸ್ವಾಮೀಜಿ, ನಿರ್ಮಲಾನಂದನಾಥ ಸ್ವಾಮೀಜಿ ಫೋನ್ ನನ್ನೇ ಟ್ಯಾಪ್ ಮಾಡಿಸಿದವರು, ಅವರನ್ನೇ ಬಿಟ್ಟಿಲ್ಲಾ, ನನ್ನನ್ನು ಬಿಡುತ್ತಾರೆಯೇ? ಹಾಗೆಂದು ಭಾವಿಸಿದರೆ ನಮ್ಮಂಥ ಮುಠ್ಠಾಳರು ಯಾರೂ ಇಲ್ಲ. ಅವರು ಮುಖ್ಯಮಂತ್ರಿಯಾಗಿದ್ದಾಗ ನಾನು ಹೆದರಲಿಲ್ಲ, ಈಗ ಹೆದರುತ್ತೇನೆಯೇ? ನನ್ನನ್ನು ದೊಡ್ಡ ಬೆದರಿಕೆ ಹಾಕಿ ಹೆದರಿಸುವ ಅಥವಾ ಬ್ಲ್ಯಾಕ್ಮೇಲ್ ಮಾಡುವ ಜಾಯಮಾನ ನನ್ನದಲ್ಲ ಎಂದರು.
ಸ್ವಂತ ಅಪ್ಪನನ್ನೇ, ಅಣ್ಣ-ತಮ್ಮಂದಿರನ್ನೇ ಜೀರ್ಣಿಸಿಕೊಳ್ಳಲಾಗದವರು ನಮ್ಮನ್ನು ಬಿಡುತ್ತಾರೆಯೇ, ನಮ್ಮ ಸರ್ಕಾರದ ಜನಪ್ರಿಯತೆಯನ್ನು ತಡೆದುಕೊಳ್ಳಲು ಆಗದೆ ‘ಅಸೂಯೆ’ಯಿಂದ ಹೀಗೆ ಮಾಡುತ್ತಿದ್ದಾರೆ. ಅವರಿಗೆ ಸಂಸ್ಕಾರವೂ ಇಲ್ಲ, ಸಂಸ್ಕೃತಿಯೂ ಇಲ್ಲ ಎಂದು ವಾಗ್ದಾಳಿ ನಡೆಸಿದರು. ಇದಕ್ಕೆ ತಾರ್ತಿಕ ಅಂತ್ಯವಿಲ್ಲವೇ ಎಂದು ಕೇಳಿದಾಗ, ನನಗೆ ಅವರ ಮೇಲೆ ಆರೋಪ ಮಾಡಲು ಇಷ್ಟವಿಲ್ಲ. ಅದಕ್ಕೆಲ್ಲ ನನ್ನ ಬಳಿ ಸಮಯವೂ ಇಲ್ಲ. ನೀವು ಹೇಳಿದ್ದಕ್ಕೆ ನಾನು ಉತ್ತರ ಕೊಡುತ್ತಿದ್ದೇನೆ ಅಷ್ಟೇ. ಉತ್ತರ ಕೊಡಲೂ ನನಗೆ ಇಷ್ಟವಿಲ್ಲ ಎಂದು ಉತ್ತರಿಸಿದರು.
ಲಾರಿ ಇಟ್ಟುಕೊಂಡು ಕಸ ಹೊಡೆದು ಸಂಪಾದಿಸಿದ ಹಣ ನನ್ನ ಬಳಿ ಇಲ್ಲ. ನನ್ನದೇ ವೃತ್ತಿ, ವ್ಯವಹಾರ ಬದುಕಿದೆ. ಪ್ರತಿ ವರ್ಷವೂ ಆಸ್ತಿ ಘೋಷಿಸಿದ್ದೇನೆ. ಚುನಾವಣಾ ಆಯೋಗ, ಇಡಿ ಎಲ್ಲಾ ನೋಡಿ ಆಗಿದೆ. ಇನ್ನು ಯಾವುದಾದರೂ ದೊಡ್ಡ ಏಜೆನ್ಸಿಯನ್ನು ಹಾಕಿ ನೋಡಲಿ. ಯಾರು ಬೇಡ ಹೇಳುತ್ತಾರೆ ಎಂದು ಪ್ರತಿಕ್ರಿಯಿಸಿದರು.
ಶಾಸಕ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿರುವ ಬಗ್ಗೆ ಕೇಳಿದಾಗ, ಅವರು ಮಂತ್ರಿಯಾಗಿ ಅಥವಾ ಹುದ್ದೆಗೆ ಬಂದು ಇನ್ನಷ್ಟೇ ಕೆಲವು ತಿಂಗಳುಗಳಾಗಿವೆ, ಅಷ್ಟರಲ್ಲೇ 444 ಕೋಟಿ ಅಕ್ರಮ ಮಾಡಲು ಸಾಧ್ಯವೇ? ಅದೆಲ್ಲವೂ ಸಂಪೂರ್ಣ ಸುಳ್ಳು ಮತ್ತು ಆಧಾರರಹಿತ ಎಂದು ತಳ್ಳಿಹಾಕಿದರು.
ದೆಹಲಿ ಪ್ರವಾಸದ ಕುರಿತು ವಿವರಣೆ ನೀಡಿದ ಸಿಎಂ, ದೆಹಲಿಯಲ್ಲಿ ದಕ್ಷಿಣ ಭಾರತದ ರಾಜ್ಯಗಳ ಶಿಕ್ಷಣ ನೀತಿ (Education Policy) ಹಾಗೂ ಪರೀಕ್ಷಾ ಅಕ್ರಮಗಳನ್ನು ತಡೆಯುವ ಬಗ್ಗೆ ಮಹತ್ವದ ಸಭೆ ನಡೆಸಿದ್ದೇವೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಕೆ.ಸಿ. ವೇಣುಗೋಪಾಲ್ ಹಾಗೂ ತಮಿಳುನಾಡು, ತೆಲಂಗಾಣ, ಕೇರಳ, ಹಿಮಾಚಲ ಪ್ರದೇಶದ ಸಚಿವರು ಮತ್ತು ಸಿಎಂಗಳು ಭಾಗವಹಿಸಿದ್ದರು. ಕೆಪಿಎಸ್ಸಿ ಸೇರಿದಂತೆ ಎಲ್ಲಾ ಪರೀಕ್ಷೆಗಳಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವುದು ಹಾಗೂ ಪೇಪರ್ ಲೀಕ್ ತಡೆಯುವ ಕುರಿತು ಹೈಕಮಾಂಡ್ ನಾಯಕರು ಮಾರ್ಗದರ್ಶನ ನೀಡಿದ್ದಾರೆ. ನಾವು ಸಚಿವ ಯು ಟಿ ಖಾದರ್ ಅವರ ನೇತೃತ್ವದ ಸಚಿವ ಸಂಪುಟ ಉಪಸಮಿತಿಯ ಮೂಲಕ ಶಿಕ್ಷಣ ರಂಗದಲ್ಲಿ ಸುಧಾರಣೆ ತರಲು ಬದ್ಧರಾಗಿದ್ದೇವೆ ಎಂದರು.
ಗುತ್ತಿಗೆದಾರರ ಸಂಘವು ₹38,000 ಕೋಟಿ ಬಾಕಿ ಹಣ ಬಿಡುಗಡೆಗೆ ಬರೆದಿರುವ ಪತ್ರದ ಕುರಿತು ಮಾತನಾಡಿ, ಹಿಂದಿನ ಯಡಿಯೂರಪ್ಪನವರ ಸರ್ಕಾರ ಅಷ್ಟೊಂದು ಜಾಸ್ತಿ ಕೆಲಸಗಳನ್ನು ಕೊಟ್ಟು ಆರ್ಥಿಕ ಹೊರೆ ಹಾಕಿ ಹೊರಟುಹೋದರು. ಪತ್ರಿಕಾಗೋಷ್ಠಿ ನಡೆಸುತ್ತಿರುವವರಿಗೆ ಇದಕ್ಕೆ ಪರಿಹಾರ ಸೂಚಿಸಲು ಹೇಳಿ ಎಂದು ವ್ಯಂಗ್ಯವಾಡಿದರು. ಪರಿಸ್ಥಿತಿ ಕಷ್ಟವಿದೆ, ಆದರೂ ಅದರ ಪರಿಹಾರಕ್ಕೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.


