Menu

38 ಕಾಡಾನೆಗಳ ಹಿಂಡು ಮತ್ತೆ ಬೇಲೂರಿಗೆ ವಾಪಸ್ – ಅರಣ್ಯಾಧಿಕಾರಿಗಳ ನಡುವೆ ಫೈಟ್‌, ಜನರಲ್ಲಿ ಆತಂಕ!

ಉದಯಕಾಲ ನ್ಯೂಸ್, ಹಾಸನ / ಬೇಲೂರು: ಕಾಡಾನೆ ಹಾವಳಿ ಹಾಸನ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಜನರ ನಿದ್ದೆಗೆಡಿಸಿದೆ. ಕಳೆದ ಕೆಲವು ದಿನಗಳ ಹಿಂದೆ ಹಾಸನ ಜಿಲ್ಲೆಯಿಂದ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಹಾಗೂ ಭದ್ರಾ ಅಭಯಾರಣ್ಯದತ್ತ ಓಡಿಸಲಾಗಿದ್ದ ಬರೋಬ್ಬರಿ 38 ಕಾಡಾನೆಗಳ ಹಿಂಡನ್ನು ಇದೀಗ ಮತ್ತೆ ಹಾಸನ ಜಿಲ್ಲೆಯ ಬೇಲೂರು ತಾಲೂಕಿಗೆ ವಾಪಸ್ ಓಡಿಸಲಾಗಿದೆ. ಇದರಿಂದಾಗಿ ಬೇಲೂರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಮತ್ತೆ ಜೀವಭಯ ಮತ್ತು ತೀವ್ರ ಆತಂಕ ಮನೆಮಾಡಿದೆ.

ಕಳೆದ ರಾತ್ರಿ ಚಿಕ್ಕಮಗಳೂರು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (CCF) ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ (DFO) ನೇತೃತ್ವದ ತಂಡವು ಚಿಕ್ಕಮಗಳೂರು ಭಾಗದಲ್ಲಿದ್ದ 38 ಕಾಡಾನೆಗಳ ಹಿಂಡನ್ನು ಕಾರ್ಯಾಚರಣೆ ಮೂಲಕ ಬೇಲೂರು ಭಾಗಕ್ಕೆ ಅಟ್ಟಿದೆ. ಕಾಡಾನೆಗಳನ್ನು ತಮ್ಮ ಜಿಲ್ಲೆಯ ವ್ಯಾಪ್ತಿಗೆ ಓಡಿಸುತ್ತಿರುವುದನ್ನು ಗಮನಿಸಿದ ಹಾಸನ ಜಿಲ್ಲೆಯ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಆನೆ ಕಾರ್ಯಪಡೆ (ETF) ಸಿಬ್ಬಂದಿ ಸ್ಥಳದಲ್ಲಿ ತೀವ್ರ ವಿರೋಧ ವ್ಯಕ್ತಪಡಿಸಿ ಅಡ್ಡಿಪಡಿಸಿದ್ದಾರೆ. ಆದರೂ, ವಿರೋಧದ ನಡುವೆಯೇ ಚಿಕ್ಕಮಗಳೂರು ಅರಣ್ಯ ಇಲಾಖೆ ಅಧಿಕಾರಿಗಳು ಆನೆಗಳನ್ನು ಗಡಿ ದಾಟಿಸುವಲ್ಲಿ ಯಶಸ್ವಿಯಾಗಿದ್ದು, ಈ ಬೆಳವಣಿಗೆ ಎರಡು ಜಿಲ್ಲೆಗಳ ಅರಣ್ಯ ಇಲಾಖೆ ಅಧಿಕಾರಿಗಳ ನಡುವಿನ ಜಟಾಪಟಿಗೆ ಕಾರಣವಾಗಿದೆ.

ಬೇಲೂರಿನ ಅರಣ್ಯದಲ್ಲಿ ಬೀಡುಬಿಟ್ಟ 38 ಕಾಡಾನೆಗಳು

ಚಿಕ್ಕಮಗಳೂರು ಭಾಗದಿಂದ ವಾಪಸ್ ಬಂದಿರುವ 38 ಕಾಡಾನೆಗಳ ಹಿಂಡು ಸದ್ಯ ಬೇಲೂರು ತಾಲೂಕಿನ ಅರಮನೆ ಗುಡ್ಡ, ಪುಟ್ಟಮ್ಮನಗೊಳ್ಳ ಹಾಗೂ ಮಲ್ಲಾಪುರ ಕಾನಳ್ಳಿ ಅರಣ್ಯ ಪ್ರದೇಶದ ಬಳಿ ಬೀಡುಬಿಟ್ಟಿವೆ. ಹಗಲು ವೇಳೆಯಲ್ಲಿ ಅರಣ್ಯ ಹಾಗೂ ಕಾಫಿ ತೋಟಗಳಲ್ಲಿ ಬೀಡುಬಿಡುವ ಈ ಆನೆಗಳ ಹಿಂಡು, ರಾತ್ರಿಯಾಗುತ್ತಿದ್ದಂತೆಯೇ ಸಕ್ರಿಯವಾಗಿ ಜನವಸತಿ ಪ್ರದೇಶಗಳತ್ತ ಲಗ್ಗೆ ಇಡುವ ಭೀತಿ ಎದುರಾಗಿದೆ.

ಆಪರೇಷನ್ ಗಜ ವಿವಾದ ಮತ್ತು ಸ್ಥಳೀಯರ ಆಕ್ರೋಶ

ಹಾಸನ ಜಿಲ್ಲೆಯಲ್ಲಿ ಕಾಡಾನೆ ದಾಳಿಯಿಂದ ಇತ್ತೀಚೆಗೆ ಇಬ್ಬರು ಮೃತಪಟ್ಟ ಹಿನ್ನೆಲೆಯಲ್ಲಿ ಸಾರ್ವಜನಿಕರ ತೀವ್ರ ಪ್ರತಿಭಟನೆಗೆ ಮಣಿದ ಅರಣ್ಯ ಇಲಾಖೆ, ನವೆಂಬರ್ 21ರಿಂದ ‘ಆಪರೇಷನ್ ಗಜ’ ಹೆಸರಿನಲ್ಲಿ 38 ಕಾಡಾನೆಗಳನ್ನು ಬೇಲೂರಿನಿಂದ ಚಿಕ್ಕಮಗಳೂರಿನ ಭದ್ರಾ ಅಭಯಾರಣ್ಯದತ್ತ ಸ್ಥಳಾಂತರಿಸುವ ಕಾರ್ಯಾಚರಣೆ ಆರಂಭಿಸಿತ್ತು. ಆದರೆ, ಕಾಡಾನೆಗಳನ್ನು ತಮ್ಮ ಭಾಗಕ್ಕೆ ಓಡಿಸುವುದಕ್ಕೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಸೇರಿದಂತೆ ವಿವಿಧ ಭಾಗಗಳ ರೈತರು, ಕಾಫಿ ಬೆಳೆಗಾರರು ಹಾಗೂ ಜನಪ್ರತಿನಿಧಿಗಳು ತೀವ್ರ ವಿರೋಧ ವ್ಯಕ್ತಪಡಿಸಿ ಬಂದ್ ಹಾಗೂ ಪ್ರತಿಭಟನೆ ನಡೆಸಿದ್ದರು.

ಈ ರಾಜಕೀಯ ಮತ್ತು ಸಾರ್ವಜನಿಕ ಒತ್ತಡದ ನಡುವೆ ಕಾರ್ಯಾಚರಣೆ ಸ್ಥಗಿತಗೊಂಡಿತ್ತು. ಇದೀಗ ಆನೆಗಳ ಹಿಂಡು ಮತ್ತೆ ಬೇಲೂರಿಗೆ ಮರಳಿರುವುದರಿಂದ, ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನಡೆಸಿದ ವಾರದ ಕಾರ್ಯಾಚರಣೆ ನೀರಿನಲ್ಲಿ ಹೋಮ ಮಾಡಿದಂತಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪ್ರಸ್ತುತ ಮಲೆನಾಡಿನಲ್ಲಿ ಕಾಫಿ ಕೊಯ್ಲು ಆರಂಭವಾಗಿರುವುದರಿಂದ, ತೋಟಗಳಿಗೆ ಕೆಲಸಕ್ಕೆ ತೆರಳಲು ಕಾರ್ಮಿಕರು ಮತ್ತು ಬೆಳೆಗಾರರು ಹಿಂದೇಟು ಹಾಕುವಂತಾಗಿದೆ.

ಕಾಫಿನಾಡಲ್ಲಿ ಮುಂದುವರಿದ ಆಪರೇಷನ್ ಒಂಟಿ ಸಲಗ

ಇನ್ನೊಂದೆಡೆ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಆಪರೇಷನ್ ಒಂಟಿ ಸಲಗ ಕಾರ್ಯಾಚರಣೆ ಭರದಿಂದ ಮುಂದುವರಿದಿದೆ. ಈ ಹಿಂದೆ ಬೇಲೂರಿನಿಂದ ಬಂದಿದ್ದ 38 ಕಾಡಾನೆಗಳ ಹಿಂಡಿನಿಂದ ಬೇರ್ಪಟ್ಟಿರುವ ಬಲಿಷ್ಠ ಒಂಟಿ ಸಲಗವೊಂದು, ಚಿಕ್ಕಮಗಳೂರು ನಗರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಓಡಾಡುತ್ತಾ ಜನರಲ್ಲಿ ಭೀತಿ ಹುಟ್ಟಿಸಿದೆ.

ಈ ಒಂಟಿ ಸಲಗವನ್ನು ಸೆರೆಹಿಡಿದು ಸ್ಥಳಾಂತರಿಸಲು ಅರಣ್ಯ ಇಲಾಖೆ ಬೃಹತ್ ಕಾರ್ಯಾಚರಣೆ ಕೈಗೊಂಡಿದೆ. ಇದಕ್ಕಾಗಿ ರಾಜ್ಯದ ವಿವಿಧ ಆನೆ ಶಿಬಿರಗಳಿಂದ ಕರೆಸಲಾಗಿರುವ ಪಳಗಿದ ಕುಮ್ಕಿ ಆನೆಗಳಾದ ಸುಗ್ರೀವ, ಅಯ್ಯಪ್ಪ, ಮಾಣಿಕ್ಯಾ, ಸಾಗರ್, ಭೀಷ್ಮ ಹಾಗೂ ಜ್ಯೂನಿಯರ್ ಅರ್ಜುನ ನೇತೃತ್ವದಲ್ಲಿ ನುರಿತ ವೈದ್ಯರು ಮತ್ತು ಅರಣ್ಯ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಹೈ ಅಲರ್ಟ್ ಘೋಷಣೆ; ಗ್ರಾಮಸ್ಥರಿಗೆ ಎಚ್ಚರಿಕೆ

ಮತ್ತೆ ಬೇಲೂರು ತಾಲೂಕಿಗೆ ಮರಳಿರುವ 38 ಕಾಡಾನೆಗಳ ಚಲನವಲನಗಳ ಮೇಲೆ ಹಾಸನ ಅರಣ್ಯ ಇಲಾಖೆ ಮತ್ತು ಇಟಿಎಫ್ ಸಿಬ್ಬಂದಿ ಹದ್ದಿನ ಕಣ್ಣಿಟ್ಟಿದ್ದಾರೆ. ಆನೆಗಳ ಹಿಂಡು ಗ್ರಾಮಗಳತ್ತ ನುಗ್ಗದಂತೆ ತಡೆಯಲು ಪಟಾಕಿ ಸಿಡಿಸಿ ಎಚ್ಚರಿಕೆ ನೀಡಲಾಗುತ್ತಿದೆ. ಅರಮನೆ ಗುಡ್ಡ, ಪುಟ್ಟಮ್ಮನಗೊಳ್ಳ, ಮಲ್ಲಾಪುರ ಕಾನಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ರಾತ್ರಿ ವೇಳೆ ಮತ್ತು ಮುಂಜಾನೆ ಅನಗತ್ಯವಾಗಿ ಮನೆಯಿಂದ ಹೊರಬರದಂತೆ ಅರಣ್ಯ ಇಲಾಖೆ ಕಟ್ಟುನಿಟ್ಟಿನ ಎಚ್ಚರಿಕೆ ಸಂದೇಶ ರವಾನಿಸಿದೆ.
#WildElephants #HassanNews #Belur #Chikkamagaluru #OperationGaja #ElephantMenace #KarnatakaForestDepartment #HumanWildlifeConflict #Udayakala #KarnatakaNews

Related Posts

Leave a Reply

Your email address will not be published. Required fields are marked *