Wednesday, November 25, 2026
Menu

ಕಾಡಾನೆ ಜಟಾಪಟಿ: ರಾಜೀನಾಮೆ ನೀಡುವುದಿಲ್ಲವೆಂದ ಚಿಕ್ಕಮಗಳೂರಿನ ಮೂವರು ಶಾಸಕರು

ಉದಯಕಾಲ ನ್ಯೂಸ್, ಚಿಕ್ಕಮಗಳೂರು/ಬೆಂಗಳೂರು: ಹಾಸನ ಜಿಲ್ಲೆಯ ಬೇಲೂರು ಹಾಗೂ ಸಕಲೇಶಪುರ ಭಾಗದಿಂದ ಚಿಕ್ಕಮಗಳೂರಿನ ಮೂಡಿಗೆರೆ ಹಾಗೂ ಭದ್ರಾ ಅಭಯಾರಣ್ಯ ವ್ಯಾಪ್ತಿಗೆ ಕಾಡಾನೆಗಳನ್ನು ಅಟ್ಟುತ್ತಿರುವ ಅರಣ್ಯ ಇಲಾಖೆಯ ಕಾರ್ಯಾಚರಣೆಯನ್ನು ವಿರೋಧಿಸಿ ರಾಜೀನಾಮೆ ಅಸ್ತ್ರ ಪ್ರಯೋಗಿಸಿದ್ದ ಚಿಕ್ಕಮಗಳೂರಿನ ಮೂವರು ಕಾಂಗ್ರೆಸ್ ಶಾಸಕರು, ಇದೀಗ ತಮ್ಮ ನಿರ್ಧಾರದಿಂದ ಯೂಟರ್ನ್ ಹೊಡೆದಿದ್ದಾರೆ. ವಿಧಾನಸಭಾಧ್ಯಕ್ಷ ಜಿ.ಎಸ್. ಪಾಟೀಲ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಬೆನ್ನಲ್ಲೇ, ಶಾಸಕರಾದ ಹೆಚ್.ಡಿ. ತಮ್ಮಯ್ಯ, ನಯನಾ ಮೋಟಮ್ಮ ಹಾಗೂ ಟಿ.ಡಿ. ರಾಜೇಗೌಡ ಅವರು ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿದಿರುವುದಾಗಿ ಸ್ಪಷ್ಟಪಡಿಸಿದ್ದಾರೆ.

ಸ್ಪೀಕರ್ ಭೇಟಿ ಬಳಿಕ ಶಾಸಕರ ನಡೆ ಬದಲು; ಸಿಎಂ ಮನವೊಲಿಕೆ ಫಲ

ಬೇಲೂರಿನಿಂದ ಚಿಕ್ಕಮಗಳೂರು ಭಾಗಕ್ಕೆ ಕಾಡಾನೆಗಳನ್ನು ಸ್ಥಳಾಂತರಿಸುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಕಳೆದ ಎರಡು ದಿನಗಳಿಂದ ಮೂವರು ಶಾಸಕರು ತಮ್ಮದೇ ಸರ್ಕಾರ ಹಾಗೂ ಅರಣ್ಯ ಇಲಾಖೆಯ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದರು. ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ಅವರು ಸ್ಪೀಕರ್ ಕಚೇರಿಗೆ ತೆರಳಿ ರಾಜೀನಾಮೆ ಪತ್ರವನ್ನೂ ಸಲ್ಲಿಸಿದ್ದರು. ಇದರ ಬೆನ್ನಲ್ಲೇ ಚಿಕ್ಕಮಗಳೂರು ಶಾಸಕ ಹೆಚ್.ಡಿ. ತಮ್ಮಯ್ಯ, ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ಹಾಗೂ ಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡ ಅವರು ವಿಧಾನಸಭಾಧ್ಯಕ್ಷ ಜಿ.ಎಸ್. ಪಾಟೀಲ್ ಅವರನ್ನು ಖುದ್ದು ಭೇಟಿಯಾಗಿ ಸುದೀರ್ಘ ಚರ್ಚೆ ನಡೆಸಿದರು.

ಇದಕ್ಕೂ ಮುನ್ನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮೂವರು ಶಾಸಕರೊಂದಿಗೆ ದೂರವಾಣಿ ಮೂಲಕ ಮಾತನಾಡಿ ಮನವೊಲಿಕೆ ಮಾಡಿದ್ದರು. ಇದೀಗ ಸ್ಪೀಕರ್ ಜಿ.ಎಸ್. ಪಾಟೀಲ್ ಅವರ ಸಮ್ಮುಖದಲ್ಲಿ ನಡೆದ ಸಭೆಯ ಬಳಿಕ ಅರಣ್ಯ ಇಲಾಖೆ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಸೂಚನೆ ನೀಡಿರುವ ಹಿನ್ನೆಲೆಯಲ್ಲಿ, ಶಾಸಕರು ತಮ್ಮ ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ.

ನಾನು ರಾಜೀನಾಮೆ ಘೋಷಣೆಯನ್ನೇ ಮಾಡಿರಲಿಲ್ಲ: ಶಾಸಕ ಟಿ.ಡಿ. ರಾಜೇಗೌಡ

ಸ್ಪೀಕರ್ ಭೇಟಿಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಶೃಂಗೇರಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಟಿ.ಡಿ. ರಾಜೇಗೌಡ ಅವರು ಅಚ್ಚರಿಯ ಹೇಳಿಕೆ ನೀಡಿದ್ದಾರೆ. ನಾವು ರಾಜೀನಾಮೆ ಬಗ್ಗೆ ಸ್ಪೀಕರ್ ಜೊತೆ ಯಾವುದೇ ಚರ್ಚೆ ಮಾಡಲಿಲ್ಲ. ಅಷ್ಟಕ್ಕೂ ನಾನು ರಾಜೀನಾಮೆ ನೀಡುವುದಾಗಿ ಘೋಷಣೆಯನ್ನೇ ಮಾಡಿರಲಿಲ್ಲ. ಬೇಲೂರಿನಿಂದ ಭದ್ರಾ ಅಭಯಾರಣ್ಯಕ್ಕೆ 56 ಕಾಡಾನೆಗಳನ್ನು ಸ್ಥಳಾಂತರ ಮಾಡುತ್ತೇವೆ ಎಂದು ಅಧಿಕಾರಿಗಳು ಹೇಳಿದ್ದರು. ಆದರೆ, ನಮ್ಮ ಚಿಕ್ಕಮಗಳೂರು ಜಿಲ್ಲೆಯಲ್ಲೇ ಈಗಾಗಲೇ ಸುಮಾರು 400 ಕಾಡಾನೆಗಳಿವೆ. ನಮ್ಮಲ್ಲೂ ಆನೆ ದಾಳಿಯಿಂದ ಸಾಕಷ್ಟು ಸಾವು-ನೋವು ಸಂಭವಿಸಿದೆ. ಹೀಗಿರುವಾಗ ಹೊರಗಿನಿಂದ ಆನೆಗಳನ್ನು ತಂದು ಬಿಟ್ಟರೆ ಹೇಗೆ? ಬಲಾತ್ಕಾರವಾಗಿ ಮುತ್ತೋಡಿ ಅರಣ್ಯಕ್ಕೆ ಆನೆಗಳನ್ನು ಬಿಡುವುದು ಬೇಡ ಎಂದು ಸ್ಪೀಕರ್ ಮತ್ತು ಅಧಿಕಾರಿಗಳಿಗೆ ಸ್ಪಷ್ಟಪಡಿಸಿದ್ದೇವೆ ಎಂದರು.

ಸಭಾಧ್ಯಕ್ಷರು ತಕ್ಷಣವೇ ಅರಣ್ಯ ಅಧಿಕಾರಿಗಳನ್ನು ಕರೆಸಿ ಮಾತನಾಡಿದ್ದಾರೆ ಮತ್ತು ಆನೆ ಓಡಿಸುವ ಕಾರ್ಯಾಚರಣೆ ನಿಲ್ಲಿಸುವಂತೆ ಸೂಚನೆ ಕೊಟ್ಟಿದ್ದಾರೆ. ಸದ್ಯ ಮುಖ್ಯಮಂತ್ರಿಗಳು ರಾಜ್ಯದಲ್ಲಿ ಇಲ್ಲದ ಕಾರಣ, ಅವರು ವಾಪಸಾದ ಬಳಿಕ ಇದೇ ನವೆಂಬರ್ 30ರಂದು ಈ ಕುರಿತು ವಿಶೇಷ ಸಭೆ ನಡೆಯಲಿದೆ. ಅರಣ್ಯ ಸಚಿವರಿಗೂ ನಾವು ಮನವಿ ಮಾಡಿಕೊಂಡಿದ್ದೇವೆ ಎಂದು ರಾಜೇಗೌಡ ಮಾಹಿತಿ ನೀಡಿದ್ದಾರೆ.

ರಾಜೀನಾಮೆ ಪತ್ರ ಇನ್ನೂ ವಾಪಸ್ ಪಡೆದಿಲ್ಲ, ಆದರೆ ಸಮಸ್ಯೆ ಬಗೆಹರಿದಿದೆ: ನಯನಾ ಮೋಟಮ್ಮ

ಇದೇ ಸಂದರ್ಭದಲ್ಲಿ ಮಾತನಾಡಿದ ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ಅವರು, ಸದ್ಯಕ್ಕೆ ಕಾಡಾನೆ ಸ್ಥಳಾಂತರ ಕಾರ್ಯಾಚರಣೆ ಸ್ಥಗಿತಗೊಂಡಿದ್ದು, ತಾತ್ಕಾಲಿಕವಾಗಿ ಸಮಸ್ಯೆ ಬಗೆಹರಿದಿದೆ. ನಾವು ಸರ್ಕಾರದ ಮೇಲೆ ಒತ್ತಡ ಹೇರಲು ರಾಜೀನಾಮೆ ಘೋಷಣೆ ಮಾಡಿರಲಿಲ್ಲ. ನಮ್ಮ ರಾಜೀನಾಮೆ ಮುಖ್ಯನಾ ಅಥವಾ ಕ್ಷೇತ್ರದ ಜನರ ಸಮಸ್ಯೆಗೆ ಪರಿಹಾರ ಮುಖ್ಯನಾ? ಈಗ ಡ್ರೈವ್ ನಿಲ್ಲಿಸುವುದಾಗಿ ಭರವಸೆ ನೀಡಿದ್ದಾರೆ ಮತ್ತು ಈ ಬಗ್ಗೆ ಅರಣ್ಯ ಅಧಿಕಾರಿಗಳು ಅಧಿಕೃತ ಘೋಷಣೆ ಮಾಡಲಿದ್ದಾರೆ ಎಂದು ತಿಳಿಸಿದರು.

ತಮ್ಮ ರಾಜೀನಾಮೆ ಪತ್ರದ ಕುರಿತು ಸ್ಪಷ್ಟನೆ ನೀಡಿದ ಅವರು, ನಮ್ಮ ಹಾಗೂ ಸ್ಥಳೀಯ ಜನರ ಗಮನಕ್ಕೆ ಬಾರದೇ ಅಧಿಕಾರಿಗಳು ರಾತ್ರೋರಾತ್ರಿ ಕಾರ್ಯಾಚರಣೆ ಮಾಡಿದ್ದರು. ಅದು ಗೊತ್ತಾದ ಮೇಲೆ ಜನರ ಪರವಾಗಿ ರಾಜೀನಾಮೆ ಕೊಟ್ಟಿದ್ದು ನಿಜ. ಆದರೆ, ಅದು ನಿಗದಿತ ನಮೂನೆಯಲ್ಲಿ ಇರದ ಕಾರಣ ಸ್ವೀಕಾರ ಆಗಿರಲಿಲ್ಲ. ಜನರಲ್ಲಿ ಭಯ ಮತ್ತು ಆತಂಕ ಇದೆ. ಸ್ಪೀಕರ್ ಅವರು ಅಧಿಕಾರಿಗಳು ಹಾಗೂ ನಮ್ಮ ಜೊತೆ ಮಾತನಾಡಿದ್ದಾರೆ. ಮುಂದೆ ನನ್ನ ನಿರ್ಧಾರ ತಿಳಿಸುತ್ತೇನೆ. ನಾವೇನು ಡ್ರಾಮಾ ಮಾಡಿಲ್ಲ; ಡ್ರಾಮಾ, ಹೈಡ್ರಾಮಾ ಅಂತ ನೀವು ಅಂದುಕೊಂಡರೆ ಹಾಗೆಯೇ ಅಂದುಕೊಳ್ಳಿ. ರಾಜೀನಾಮೆ ಘೋಷಣೆ ಮಾಡಿದ್ದು ಹೌದು, ಅದನ್ನು ಇನ್ನೂ ವಾಪಸ್ ಪಡೆದಿಲ್ಲ. ಆದರೆ ಈಗ ರಾಜೀನಾಮೆ ಬಗ್ಗೆ ನಾನು ಮಾತನಾಡಲ್ಲ, ಜನರ ಸಮಸ್ಯೆ ಬಗೆಹರಿಯಬೇಕು ಅಷ್ಟೇ ಎಂದು ಹೇಳಿದ್ದಾರೆ.

ಒಟ್ಟಾರೆಯಾಗಿ, ಕಾಡಾನೆ ಸ್ಥಳಾಂತರ ವಿಚಾರದಲ್ಲಿ ರಾಜೀನಾಮೆ ಎಚ್ಚರಿಕೆ ನೀಡಿ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದ ಚಿಕ್ಕಮಗಳೂರಿನ ಮೂವರು ಶಾಸಕರು, ಸ್ಪೀಕರ್ ಭೇಟಿಯ ಬಳಿಕ ಮೆತ್ತಗಾಗಿರುವುದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

#Chikkamagaluru #NayanaMotamma #TDRajegowda #HDThammaiah #ElephantRelocation #OperationGaja #KarnatakaPolitics #CongressMLAs #Mudigere #Udayakala #KannadaNews

Related Posts

Leave a Reply

Your email address will not be published. Required fields are marked *