ಉದಯಕಾಲ ನ್ಯೂಸ್, ಬೆಂಗಳೂರು: ಕ್ಯಾನ್ಸರ್ ಔಷಧಗಳ ಅಧಿಕ ಬೆಲೆ ಹಾಗೂ ಔಷಧ ಕಂಪನಿಗಳ ವಿಪರೀತ ಲಾಭಾಂಶದ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕ ಆರೋಗ್ಯ ಇಲಾಖೆ ನೀಡಿದ್ದ ವರದಿ ದೊಡ್ಡ ಮಟ್ಟದ ಪರಿಣಾಮ ಬೀರಿದೆ. ಔಷಧಗಳ ಉತ್ಪಾದನಾ ವೆಚ್ಚಕ್ಕೂ ಮಾರಾಟ ದರಕ್ಕೂ ಇರುವ ಬೃಹತ್ ವ್ಯತ್ಯಾಸದ ಬಗ್ಗೆ ರಾಜ್ಯ ಸರ್ಕಾರ ದೊಡ್ಡ ಪ್ರಮಾಣದಲ್ಲಿ ಧ್ವನಿಯೆತ್ತಿತ್ತು.ಈ ಬೆನ್ನಲ್ಲೇ, ಎಚ್ಚೆತ್ತ ಕೇಂದ್ರ ಸರ್ಕಾರವು ನಾನ್-ಶೆಡ್ಯೂಲ್ಡ್ (ಪರಿಪಟ್ಟಿ ಹೊರತಾದ) ಕ್ಯಾನ್ಸರ್ ಔಷಧಗಳ ಮೇಲಿನ ವ್ಯಾಪಾರ ಲಾಭಾಂಶವನ್ನು ಗರಿಷ್ಠ ಶೇ. 30ಕ್ಕೆ ಮಿತಿಗೊಳಿಸಿ ಐತಿಹಾಸಿಕ ಆದೇಶ ಹೊರಡಿಸಿದೆ.
ಗಟ್ಟಿಧ್ವನಿಯೊಂದಿಗೆ ಕರ್ನಾಟಕ ಸರ್ಕಾರದ ವರದಿ
ರಾಜ್ಯದ ಆರೋಗ್ಯ ಸಚಿವ ಯು.ಟಿ.ಖಾದರ್ ಹಾಗೂ ಪ್ರಮುಖ ನಾಯಕರು ಔಷಧಗಳ ಬೆಲೆಯಲ್ಲಿರುವ ಅಗಾಧ ವ್ಯತ್ಯಾಸದ ಬಗ್ಗೆ ಕೇಂದ್ರ ಸರ್ಕಾರದ ಗಮನ ಸೆಳೆದಿದ್ದರು. ಕಡಿಮೆ ವೆಚ್ಚದ ಔಷಧಗಳನ್ನು ಅತ್ಯಂತ ದುಬಾರಿ ಬೆಲೆಗೆ ಮಾರಾಟ ಮಾಡುವ ಮೂಲಕ ಕ್ಯಾನ್ಸರ್ ರೋಗಿಗಳನ್ನು ಹಿಂಡಿ ಹಿಪ್ಪೆ ಮಾಡಲಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದರು.ಬೆಲೆ ವ್ಯತ್ಯಾಸದ ಸ್ಪಷ್ಟ ಉದಾಹರಣೆಗಳನ್ನು ಕೇಂದ್ರದಕ ಗಮನಕ್ಕೆ ತಂದಿದ್ದರು.
ಕೆಲ ಔಷಧಗಳ ಉತ್ಪಾದನಾ ಅಥವಾ ಖರೀದಿ ವೆಚ್ಚಕ್ಕೂ ಮತ್ತು ಅವುಗಳ ಗರಿಷ್ಠ ಚಿಲ್ಲರೆ ದರಕ್ಕೂ (MRP) ಇರುವ ವ್ಯತ್ಯಾಸಗಳು ಭಾರೀ ಚರ್ಚೆಗೆ ಗ್ರಾಸವಾಗಿದ್ದವು. 86 ರೂ. ಇದ್ದ ಔಷಧವನ್ನು 4,528 ರೂ.ಗೆ, 160 ರೂ. ಇದ್ದ ಔಷಧವನ್ನು 7,110 ರೂ. ಹಾಗೂ 118 ರೂ. ಇದ್ದ ಔಷಧವನ್ನು 4,416 ರೂ.ವರೆಗೆ ಮಾರಾಟ ಮಾಡುತ್ತಿರುವ ನಿದರ್ಶನಗಳನ್ನು ಮುನ್ನೆಲೆಗೆ ತರಲಾಗಿತ್ತು.
ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರ
ರಾಜ್ಯಗಳ ವರದಿಗಳು ಹಾಗೂ ಸಾರ್ವಜನಿಕ ವಲಯದ ಬೇಡಿಕೆಗೆ ಸ್ಪಂದಿಸಿರುವ ಕೇಂದ್ರ ಸರ್ಕಾರ, ಕ್ಯಾನ್ಸರ್ ಚಿಕಿತ್ಸೆಯನ್ನು ಜನಸಾಮಾನ್ಯರಿಗೆ ಕೈಗೆಟುಕುವಂತೆ ಮಾಡಲು ನಾನ್-ಶೆಡ್ಯೂಲ್ಡ್ ಕ್ಯಾನ್ಸರ್ ಔಷಧಗಳ ಟ್ರೇಡ್ ಮಾರ್ಜಿನ್ ಅನ್ನು ಎಂಆರ್ಪಿಯ (MRP) ಶೇ. 30ರಷ್ಟು ಮಿತಿಗೆ ಒಳಪಡಿಸಿದೆ.
ಸರ್ಕಾರದ ಈ ಹೊಸ ಕ್ರಮದಿಂದಾಗಿ ಕ್ಯಾನ್ಸರ್ ಔಷಧಗಳ ಬೆಲೆಯಲ್ಲಿ ಶೇ. 70ರವರೆಗೆ ಇಳಿಕೆಯಾಗುವ ನಿರೀಕ್ಷೆಯಿದೆ. ಅಲ್ಲದೆ, ದೇಶದ ರೋಗಿಗಳಿಗೆ ವಾರ್ಷಿಕ ಸುಮಾರು 2,500 ಕೋಟಿ ರೂ.ಗಳಷ್ಟು ಆರ್ಥಿಕ ಉಳಿತಾಯವಾಗಲಿದೆ ಎಂದು ಅಂದಾಜಿಸಲಾಗಿದೆ.
ರಾಷ್ಟ್ರೀಯ ಔಷಧ ಬೆಲೆ ನಿಗದಿ ಪ್ರಾಧಿಕಾರ (NPPA) ಮತ್ತು ಆರೋಗ್ಯ ಸಚಿವಾಲಯದ ಈ ದಿಟ್ಟ ಹೆಜ್ಜೆಯಿಂದ ಕ್ಯಾನ್ಸರ್ ರೋಗಿಗಳು ಹಾಗೂ ಅವರ ಕುಟುಂಬದ ಮೇಲಿನ ತೀವ್ರ ಆರ್ಥಿಕ ಹೊರೆ ಗಣನೀಯವಾಗಿ ತಗ್ಗಲಿದೆ.
#CancerMedicinePrice #KarnatakaHealthDepartment #UTKhader #CentralGovernment #NPPA #CancerPatientsRelief #UdayakalaNews #MedicalNewsKarnataka #HealthNews


