Tuesday, September 22, 2026
Menu

ದೇಶದ ಎಲ್ಲ ತಾಲೂಕುಗಳಲ್ಲಿ ಆರೋಗ್ಯ ಕೇಂದ್ರ: ಸದ್ಗುರು ಶ್ರೀ ಮಧುಸೂದನ ಸಾಯಿ

ದೇಶಾದ್ಯಂತ ಎಲ್ಲಾ 6,000 ತಾಲೂಕುಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ‘ಸಾಯಿ ಸ್ವಾಸ್ಥ್ಯ ಕೇಂದ್ರ’ವನ್ನು ಆರಂಭಿಸುವ ಉದ್ದೇಶ ಇದೆ ಎಂದು ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್ ಸಂಸ್ಥಾಪಕ ಸದ್ಗುರು ಶ್ರೀ ಮಧುಸೂದನ ಸಾಯಿ ಹೇಳಿದರು.

ಮಂಡ್ಯ ನಗರದಲ್ಲಿ  ನಡೆದ “ದಿವ್ಯ ಸಂಜೆ” ಸಂವಾದ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಕೆ.ಎನ್.ಚನ್ನೇಗೌಡ ಅವರ ಪ್ರಶ್ನೆಗಳಿಗೆ ಉತ್ತರಿಸಿದ ಸದ್ಗುರು, ಈಗಾಗಲೇ ದೇಶದ ನೂರಕ್ಕೂ ಹೆಚ್ಚು ತಾಲೂಕುಗಳಲ್ಲಿ ಆರೋಗ್ಯ ಕೇಂದ್ರವನ್ನು ಸ್ಥಾಪಿಸಿದ್ದೇವೆ ಎಂದರು.  ಮಂಡ್ಯ ಜಿಲ್ಲೆ ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕನಿಷ್ಠ 50 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ಸ್ಥಾಪಿಸಲಾಗುವುದು. ಮಂಡ್ಯದಲ್ಲಿರುವ ಶ್ರೀ ಶಾರದಾ ನಿಕೇತನ ಗುರುಕುಲದ ಬಳಿಯಲ್ಲಿ 20 ಹಾಸಿಗೆಗಳ ಆಸ್ಪತ್ರೆ ನಿರ್ಮಿಸುವ ಉದ್ದೇಶ ಇದೆ ಎಂದು ತಿಳಿಸಿದರು.

ಯುವಜನರಲ್ಲಿ ಹೃದಯಾಘಾತ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಸಮಸ್ಯೆ ಕಾಣಿಸಿಕೊಂಡ ನಂತರ ಪರಿಹಾರ ಹುಡುಕುವುದಕ್ಕಿಂತಲೂ ಸಮಸ್ಯೆ ಬಾರದಂತೆ ಮುನ್ನೆಚ್ಚರಿಕೆ ವಹಿಸುವುದು ಜಾಣತನ. ಆರೋಗ್ಯ ಶಿಕ್ಷಣವನ್ನು ಪ್ರಾಥಮಿಕ ಶಾಲಾ ಹಂತದಿಂದಲೇ ಪಠ್ಯಕ್ರಮದ ಭಾಗವಾಗಿಸಬೇಕು. ಅದು ಹಲವು ಆರೋಗ್ಯ ಸಂಬಂಧಿ ಸಮಸ್ಯೆಗಳಿಗೆ ಪರಿಣಾಮಕಾರಿ ಪರಿಹಾರ ಆಗಲಿದೆ ಎಂದರು.

ಆರೋಗ್ಯ ಕ್ಷೇತ್ರದಲ್ಲಿ ಸೂಕ್ತ ಮೂಲಸೌಕರ್ಯ ನಿರ್ಮಾಣ ಈ ಕ್ಷಣದ ತುರ್ತು. ಇದಕ್ಕೆ ನಾವು ಆದ್ಯತೆ ನೀಡಬೇಕಿದೆ. ವೈದ್ಯಕೀಯ ರಂಗದ ವಿಪರೀತ ವಾಣಿಜ್ಯೀಕರಣ ಸದಾ ಅಪಾಯಕಾರಿ. ವಾಣಿಜ್ಯದ ಹಿಡಿತದಿಂದ ಆರೋಗ್ಯ ಕ್ಷೇತ್ರವನ್ನು ಮುಕ್ತಗೊಳಿಸಬೇಕು ಎನ್ನುವ ಉದ್ದೇಶದಿಂದ ನಾವು ಉಚಿತ ವೈದ್ಯಕೀಯ ಶಿಕ್ಷಣ ಕಾಲೇಜು ಆರಂಭಿಸಿದೆವು ಎಂದು ವಿವರಿಸಿದರು.

ನಮ್ಮ ಶಿಕ್ಷಣ ಸಂಸ್ಥೆಗಳಲ್ಲಿ ಹೆಣ್ಣುಮಕ್ಕಳಿಗೆ ವಿಶೇಷ ಆದ್ಯತೆ ಕೊಡುತ್ತಿದ್ದೇವೆ. ಈಗಾಗಲೇ ಮೂರು ಕ್ಯಾಂಪಸ್‌ಗಳಿವೆ. ಇನ್ನಷ್ಟು ಹೆಚ್ಚಿನ ಶಾಲೆಗಳನ್ನು ಹೆಣ್ಣು ಮಕ್ಕಳಿಗಾಗಿ ಆರಂಭಿಸುವ ಉದ್ದೇಶ ಇದೆ ಎಂದರು. ಪದವಿಯ ನಂತರ ನಮ್ಮಲ್ಲಿ ಇಂಟರ್ನ್‌ಶಿಪ್ ಮಾಡುವ ಯುವತಿಯರಿಗೆ ಸ್ಟೇಫಂಡ್ ಕೂಡ ನೀಡುತ್ತಿದ್ದೇವೆ. ನಮ್ಮ ವಿಶ್ವವಿದ್ಯಾಲಯದಲ್ಲಿರುವ ಒಟ್ಟು ವಿದ್ಯಾರ್ಥಿಗಳ ಪೈಕಿ ಮಹಿಳೆಯರ ಪ್ರಮಾಣ ಶೇ 60 ಇದೆ ಎಂದು ಹೇಳಿದರು.

ಯಾವುದೇ ದೇಶದ ಜನಸಾಮಾನ್ಯರು ಯುದ್ಧ-ಸಂಘರ್ಷ ಬಯಸುತ್ತಿಲ್ಲ. ಜಾಗತಿಕ ಅಶಾಂತಿಗೆ ನಾಯಕರ ಸ್ವಾರ್ಥವೇ ಮುಖ್ಯ ಕಾರಣ. ಸರಿಯಾದ ನಾಯಕರನ್ನು ಆಯ್ಕೆ ಮಾಡದಿರುವುದೇ ಜನರು ಮಾಡುತ್ತಿರುವ ತಪ್ಪು. ಮತದಾರರು ಸರಿಯಾದರೆ ನಾಯಕರು ಸರಿಯಾಗುತ್ತದೆ ಎಂದು ಕಿವಿಮಾತು ಹೇಳಿದರು.

ಕರ್ನಾಟಕ ಸರ್ಕಾರದ ಗ್ಯಾರೆಂಟಿ ಯೋಜನೆಗಳು ಮತ್ತು ತಮ್ಮ ನೇತೃತ್ವದ ಸಂಸ್ಥೆಗಳಲ್ಲಿ ಸಿಗುತ್ತಿರುವ ಉಚಿತ ಸೌಲಭ್ಯಗಳ ಕುರಿತು ಕೇಳಿಬರುತ್ತಿರುವ ಆಕ್ಷೇಪಗಳ ಕುರಿತು ಪ್ರತಿಕ್ರಿಯಿಸಿದ ಸದ್ಗುರು, ಅರ್ಹರಿಗೆ ದಾನ ಕೊಡಬೇಕು. ಸರ್ಕಾರವು ಕಡುಬಡವರಿಗೆ ಅಗತ್ಯ ನೆರವು ಕೊಡುವುದರಲ್ಲಿ ಯಾವುದೇ ತಪ್ಪಿಲ್ಲ. ನಮ್ಮ ಸಂಸ್ಥೆಗಳಲ್ಲಿ ನಾವು ಯಾವುದೇ ತಾರತಮ್ಯ ಮಾಡದೇ ಎಲ್ಲರಿಗೂ ಆರೋಗ್ಯ ಸೇವೆ ಒದಗಿಸುತ್ತಿದ್ದೇವೆ. ಆದರೆ ನಮ್ಮ ಸೇವೆ ದುರುಪಯೋಗವಾಗದಂತೆ ಅಗತ್ಯ ಎಚ್ಚರಿಕೆ ವಹಿಸುತ್ತೇವೆ ಎಂದು ವಿವರಿಸಿದರು.

ಕರ್ನಾಟಕ ರಾಜ್ಯವನ್ನು ನಿಮ್ಮ ಸುಪರ್ದಿಗೆ 10 ವರ್ಷಗಳ ಅವಧಿಗೆ ಒಪ್ಪಿಸಿದರೆ ಏನು ಮಾಡುತ್ತೀರಿ ಎನ್ನುವ ಪ್ರಶ್ನೆಗೆ ಉತ್ತರಿಸಿದ ಸದ್ಗುರು, ಶಿಕ್ಷಕರ ಬಗ್ಗೆ ಹೆಚ್ಚು ಗಮನ ಕೊಡುತ್ತೇನೆ, ಅವರ ಸಂಬಳ-ಸೌಕರ್ಯ ಸುಧಾರಿಸಿ ಅವರ ಮೂಲಕ ಶಾಲೆಗಳನ್ನು ಉತ್ತಮಪಡಿಸುತ್ತೇನೆ. ಯೋಗ್ಯ ಶಿಕ್ಷಕರು-ಶಾಲೆಗಳೇ ದೇಶದ ಆಧಾರಸ್ತಂಭ ಎಂದು  ನಿಲುವು ಸ್ಪಷ್ಟಪಡಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರಶಾಂತಿ ಬಾಲಮಂದಿರ ಟ್ರಸ್ಟ್ ಅಧ್ಯಕ್ಷ ಡಾ ಬಿ.ಎನ್.ನರಸಿಂಹಮೂರ್ತಿ, ರಾಮಕೃಷ್ಣ ಪರಮಹಂಸರ ಸಂದೇಶಗಳನ್ನು ಸ್ವಾಮಿ ವಿವೇಕಾನಂದರು ಕಾರ್ಯರೂಪಕ್ಕೆ ತಂದಂತೆ ಇಂದು ಭಗವಾನ್ ಶ್ರೀ ಸತ್ಯಸಾಯಿ ಬಾಬಾರವರ ಸಂದೇಶಗಳನ್ನು ಸದ್ಗುರು ಶ್ರೀ ಮಧುಸೂದನ ಸಾಯಿ  ಕಾರ್ಯರೂಪಕ್ಕೆ ತರುತ್ತಿದ್ದಾರೆ ಎಂದು ವಿವರಿಸಿದರು.

ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಜನರು ವಾಸಿಸುತ್ತಿದ್ದರೂ ವೈದ್ಯಕೀಯ ಸೌಲಭ್ಯಗಳು ನಗರ ಪ್ರದೇಶಗಳಲ್ಲಿ ಕೇಂದ್ರೀಕೃತವಾಗಿವೆ. ವೈದ್ಯಕೀಯ ಶಿಕ್ಷಣಕ್ಕೆ ಹೆಚ್ಚಿನ ವೆಚ್ಚವಾಗುತ್ತಿರುವುದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ಸಲ್ಲಿಸಲು ವೈದ್ಯರ ಕೊರತೆ ಕಾಣಿಸಿಕೊಂಡಿದೆ. ಇದರ ನಿವಾರಣೆಗಾಗಿ ಸದ್ಗುರುಗಳು ಉಚಿತ ವೈದ್ಯಕೀಯ ಶಿಕ್ಷಣ ಸಂಸ್ಥೆಯನ್ನೇ ಆರಂಭಿಸಿದರು ಎಂದು ತಿಳಿಸಿದರು.

ಹಿರಿಯ ವಿದ್ಯಾರ್ಥಿ ಹಾಗೂ ಮಂಡ್ಯದ ಶ್ರೀ ಸತ್ಯಸಾಯಿ ಶಾರದಾ ನಿಕೇತನಂ ಕ್ಯಾಂಪಸ್‌ನ ಕಾರ್ಯನಿರ್ವಾಹಕ ಮಂಡಳಿ ಸದಸ್ಯರೂ ಆಗಿರುವ ವೈದ್ಯ ಡಾ ಎ.ವಿ.ಉಮೇಶ್‌  ಅನುಭವ ಹಂಚಿಕೊಂಡರು. ಸತ್ಯಸಾಯಿ ಸಂಸ್ಥೆಗಳಲ್ಲಿ ಮಂಡ್ಯ ಜಿಲ್ಲೆಯ ಮಕ್ಕಳಿಗೆ ಮೊದಲಿನಿಂದಲೂ ಆದ್ಯತೆ ಇದೆ. ಸದ್ಗುರು ಶ್ರೀ ಮಧುಸೂದನ ಸಾಯಿ ಮಂಡ್ಯ ಜಿಲ್ಲೆಯ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡುವ ಉದ್ದೇಶದಿಂದ ಕ್ಯಾಂಪಸ್ ಆರಂಭಿಸಿದ್ದಾರೆ. ಈ ಸೇವಾ ಚಟುವಟಿಕೆಗಳಲ್ಲಿ ಜಿಲ್ಲೆಯ ಜನರು ಸಕ್ರಿಯರಾಗಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.

ಶ್ರೀ ಸತ್ಯಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯದ ವಿದ್ಯಾರ್ಥಿ ಎಂ.ಮದನ್‌ ಗೌಡ ತಮ್ಮ ಬದುಕಿನ ಕಥನ ಹಂಚಿಕೊಂಡರು. ಮಾಂಡವ್ಯ ಸಮೂಹ ಸಂಸ್ಥೆಗಳ ಮುಖ್ಯಸ್ಥರು ಹಾಗೂ ಸಮಾಜ ಸೇವಕಿ ಮೀರಾ ಶಿವಲಿಂಗಯ್ಯ ಅವರಿಗೆ ಕರ್ನಾಟಕ ಪರಿವರ್ತಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕೊಮ್ಮೇರಹಳ್ಳಿಯಲ್ಲಿರುವ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಪುರುಷೋತ್ತಮಾನಂದ ನಾಥ ಸ್ವಾಮೀಜಿ, ಪಾಂಡವಪುರ ರಾಮ ಯೋಗೇಶ್ವರ ಮಠದ (ಬೇಬಿ ಮಠ) ಶಿವ ಬಸವ ಸ್ವಾಮೀಜಿ ಅವರಿಗೆ ಸದ್ಗುರು ಶ್ರೀ ಮಧುಸೂದನ ಸಾಯಿ ಗೌರವ ಸಮರ್ಪಣೆ ಮಾಡಿದರು.

ಸುಮಾ ರವಿ ಕನ್‌ವೆನ್ಷನ್ ಹಾಲ್‌ನ ರವಿ ಭೋಜೇಗೌಡ, ಮಾಜಿ ಶಾಸಕ ಸಿ.ಎಸ್.ಪುಟ್ಟರಾಜು ಹಾಗೂ ಚನ್ನಪಟ್ಟಣದ ಉದ್ಯಮಿ ಬಾಲಾಜಿ ಅವರನ್ನು ಅಭಿನಂದಿಸಲಾಯಿತು.  ಶಿಕ್ಷಣ ಕ್ಷೇತ್ರದಲ್ಲಿ ಅಸಾಮಾನ್ಯ ಸೇವೆ ಸಲ್ಲಿಸಿರುವ ಮೀರಾ ಶಿವಲಿಂಗಯ್ಯ ಅವರಿಗೆ ಸದ್ಗುರು ಶ್ರೀ ಮಧುಸೂದನ ಸಾಯಿ ‘ಕರ್ನಾಟಕ ಪರಿವರ್ತಕ’ ಪ್ರಶಸ್ತಿ ನೀಡಿ ಗೌರವಿಸಿದರು.

ಪ್ರಶಸ್ತಿ ಸ್ವೀಕರಿಸಿದ ಮಾತನಾಡಿದ ಮೀರಾ ಶಿವಲಿಂಗಯ್ಯ, ಭಾರತೀಯ ಸಮಾಜವನ್ನು ನಾನಾ ಸ್ತರದಲ್ಲಿ ಜಾಗೃತಗೊಳಿಸಲು ಸದ್ಗುರು ಶ್ರೀ ಮಧುಸೂದನ ಸಾಯಿ ಪ್ರಯತ್ನಿಸುತ್ತಿದ್ದಾರೆ. ಇವರ ಮೂಲಕ ಭಗವಾನ್ ಸತ್ಯ ಸಾಯಿ ಬಾಬಾ ಅವರ ಸಂದೇಶಗಳು ಕಾರ್ಯರೂಪಕ್ಕೆ ಬರುತ್ತಿವೆ. ಈ ಪ್ರಶಸ್ತಿಯು ನನಗೆ ಧನ್ಯತಾ ಭಾವನೆ ತಂದಿದೆ ಎಂದು ಹೇಳಿದರು.

ಮಂಡ್ಯ  ಮಾರೇನಹಳ್ಳಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ‘ಶ್ರೀ ಸತ್ಯಸಾಯಿ ಶಾರದಾನಿಕೇತನಂ ಗುರುಕುಲಂ’ ವಿದ್ಯಾಭ್ಯಾಸದ ಆಸೆ ಹೊತ್ತಿರುವ ಬಡಮಕ್ಕಳ ಪಾಲಿಗೆ ಆಶಾಕಿರಣವಾಗಿದೆ. ಇಲ್ಲಿ 6 ರಿಂದ 12 ನೇ ತರಗತಿಯವರೆಗೆ ಶಿಕ್ಷಣ ಪಡೆಯಲು ಅವಕಾಶವಿದೆ. ಪ್ರಸ್ತುತ 200 ಮಕ್ಕಳು ಕ್ಯಾಂಪಸ್‌ನಲ್ಲಿ ಓದುತ್ತಿದ್ದಾರೆ. ಈವರೆಗೆ 1,500ಕ್ಕೂ ಹೆಚ್ಚು ಮಕ್ಕಳು ಇಲ್ಲಿ ಶಿಕ್ಷಣ ಪಡೆದಿದ್ದಾರೆ. 45 ಎಕರೆ ವಿಸ್ತಾರದ ವಿಶಾಲ ಕ್ಯಾಂಪಸ್‌ನಲ್ಲಿ ದೇವಾಲಯ, ಆರೋಗ್ಯ ಕೇಂದ್ರ, ಗೋಶಾಲೆಗಳೂ ಇವೆ. ಸ್ಥಳೀಯರಿಗೆ ಇಲ್ಲಿ ಉಚಿತ ಆರೋಗ್ಯ ಸೇವೆ ಒದಗಿಸಲಾಗುತ್ತಿದೆ.

ಮಂಡ್ಯ ಜಿಲ್ಲೆಯಲ್ಲಿ ಸತ್ಯ ಸಾಯಿ ಅನ್ನಪೂರ್ಣ ಬೆಳಗಿನ ಪೋಷಣೆ ಕಾರ್ಯಕ್ರಮವೂ ಅನುಷ್ಠಾನಗೊಳ್ಳುತ್ತಿದೆ. ಇಲ್ಲಿನ 1,908 ಸರ್ಕಾರಿ ಶಾಲೆಗಳ 96,319 ಮಕ್ಕಳಿಗೆ ಪ್ರತಿದಿನ ಮುಂಜಾನೆ ‘ಸಾಯಿಶ್ಯೂರ್’ ಪೋಷಕಾಂಶ ಸಹಿತ ಹಾಲು ಸಿಗುತ್ತಿದೆ.

Related Posts

Leave a Reply

Your email address will not be published. Required fields are marked *