Menu

ಮಂತ್ರಾಲಯದಲ್ಲಿ ವೈಭವದ ರಾಯರ ಪೂರ್ವಾರಾಧನೆ

ಕಲಿಯುಗದ ಕಾಮಧೇನು, ಭಕ್ತರ ಪಾಲಿನ ಕಲ್ಪವೃಕ್ಷ ಎಂದು ಪ್ರಸಿದ್ಧರಾಗಿರುವ ಶ್ರೀ ರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಮಹೋತ್ಸವದ ಅಂಗವಾಗಿ ಮಂತ್ರಾಲಯದಲ್ಲಿ ಪೂರ್ವಾರಾಧನೆ ಮಹೋತ್ಸವ  ವೈಭವದಿಂದ ನಡೆಯಿತು.

ಆರಾಧನಾ ಮಹೋತ್ಸವದ ಮೂರನೇ ದಿನವಾದ ಶನಿವಾರ ಮೂಲ ಬೃಂದಾವನಕ್ಕೆ ವಿಶೇಷ ಪೂಜೆ ಹಾಗೂ ಅಭಿಷೇಕ ನೆರವೇರಿಸಲಾಯಿತು. ಪೂರ್ವಾರಾಧನೆ ನಿಮಿತ್ತ ರಾಯರಿಗೆ ವಿಶೇಷ ಅಲಂಕಾರ ಮಾಡಲಾಗಿದ್ದು, ಭಕ್ತರು ದರ್ಶನ ಪಡೆದು ಧನ್ಯತೆ ವ್ಯಕ್ತಪಡಿಸಿದರು.

ಇದೇ ವೇಳೆ ಶ್ರೀರಂಗಂ ದೇವಾಲಯದ ಅಧಿಕಾರಿಗಳು ಶ್ರೀ ರಂಗನಾಥ ಸ್ವಾಮಿಯ ಪವಿತ್ರ ಶೇಷವಸ್ತ್ರವನ್ನು ಮಂತ್ರಾಲಯಕ್ಕೆ ತಂದು ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿಯವರಿಗೆ ಸಮರ್ಪಿಸಿದರು. ಧಾರ್ಮಿಕ ವಿಧಿವಿಧಾನಗಳ ಬಳಿಕ ಶೇಷವಸ್ತ್ರವನ್ನು ಶ್ರೀ ರಾಘವೇಂದ್ರ ಸ್ವಾಮಿಗಳಿಗೆ ಸಮರ್ಪಿಸಲಾಯಿತು. ಶ್ರೀಮಠದ ವತಿಯಿಂದ ಶ್ರೀರಂಗಂ ದೇವಾಲಯದ ಅಧಿಕಾರಿಗಳಿಗೆ ಪ್ರಸಾದ ಹಾಗೂ ವಸ್ತ್ರ ನೀಡಿ ಗೌರವಿಸಲಾಯಿತು.

ಸಂಜೆ ಶ್ರೀಮಠದ ಮುಂಭಾಗದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರಿಗೆ ರಾಯರ ಅನುಗ್ರಹ ಪ್ರಶಸ್ತಿ ಪ್ರದಾನ ಮಾಡಲಾಯಿತು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

‘ಗಂಗಾ ಸ್ನಾನ ತುಂಗಾ ಪಾನ’ ಎಂಬ ನಂಬಿಕೆಯಿದ್ದರೂ ತುಂಗಭದ್ರಾ ನದಿಯಲ್ಲಿ ನೀರಿನ ಕೊರತೆಯಿಂದ ಭಕ್ತರಿಗೆ ಪುಣ್ಯಸ್ನಾನಕ್ಕೆ ನಿರಾಸೆಯಾಗಿದೆ. ಇದನ್ನು ಗಮನಿಸಿ ಶ್ರೀಮಠದ ವತಿಯಿಂದ ಭಕ್ತರಿಗಾಗಿ ಶವರ್ ಸ್ನಾನದ ವ್ಯವಸ್ಥೆ ಕಲ್ಪಿಸಲಾಗಿದೆ.

ಆರಾಧನಾ ಮಹೋತ್ಸವದ ಹಿನ್ನೆಲೆಯಲ್ಲಿ ದೇಶದ ವಿವಿಧೆಡೆಯಿಂದ ಭಕ್ತರು ಮಂತ್ರಾಲಯಕ್ಕೆ ಆಗಮಿಸುತ್ತಿದ್ದು, ಶ್ರೀಮಠವನ್ನು ವಿವಿಧ ಬಗೆಯ ಹೂವುಗಳಿಂದ ಅಲಂಕರಿಸಲಾಗಿದೆ. ಆ.30ರಂದು ರಾಯರ ಮಧ್ಯಾರಾಧನೆ ಹಾಗೂ ಆ.31ರಂದು ಉತ್ತರಾರಾಧನೆ ಮಹೋತ್ಸವ ನಡೆಯಲಿದೆ.

Related Posts

Leave a Reply

Your email address will not be published. Required fields are marked *