Menu

ಬಿಜೆಪಿ ಹೋರಾಟದಿಂದ ನಾಗೇಂದ್ರ ರಾಜೀನಾಮೆ, ದಲಿತರಿಗೆ ಸಂದ ಜಯ: ಆರ್‌ ಅಶೋಕ

ಸದನದ ಒಳಗೆ ಹಾಗೂ ಹೊರಗೆ ಬಿಜೆಪಿ-ಜೆಡಿಎಸ್‌ ನಡೆಸಿದ ನಿರಂತರ ಹೋರಾಟ ಮತ್ತು ದಾಖಲೆ ಸಮೇತ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದರಿಂದ ಬಿ.ನಾಗೇಂದ್ರ ರಾಜೀನಾಮೆ ನೀಡಿದ್ದಾರೆ. ಇದು ಕೇವಲ ಬಿಜೆಪಿಗೆ ಸಿಕ್ಕಿರುವ ಜಯವಲ್ಲ, ಇದು ಇಡೀ ದಲಿತ ಸಮುದಾಯಕ್ಕೆ ಸಂದಿರುವ ಜಯ ಎಂದು ಪ್ರತಿಪಕ್ಷ ನಾಯಕ ಆರ್‌ ಅಶೋಕ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧಿವೇಶನ ಆರಂಭವಾದಾಗಿನಿಂದ ಎಂಟು ದಿನಗಳ ಕಾಲ ನಿರಂತರವಾಗಿ ನಾವು ಹೋರಾಟ ಮಾಡಿದ್ದೇವೆ. ದಲಿತರ ಹಣ ನುಂಗಿದರೆ ಉಳಿಗಾಲವಿಲ್ಲ ಎಂಬ ಪಾಠವನ್ನು ಕಾಂಗ್ರೆಸ್‌ಗೆ ಕಲಿಸಿದ್ದೇವೆ. ಬಿಜೆಪಿ-ಜೆಡಿಎಸ್‌ ಒಗ್ಗಟ್ಟಿನಿಂದ ಹೋರಾಟ ಮಾಡಿ ನಾಗೇಂದ್ರ ಅವರ ರಾಜೀನಾಮೆ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ದಿವೆ. ಇದೇ ಮೊದಲ ಬಾರಿಗೆ ಇಂತಹ ಅಪರೂಪದ ಘಟನೆ ನಡೆದಿದೆ. ನಮ್ಮ ಹೋರಾಟ ಹಾಗೂ ಗುರಿ ಸ್ಪಷ್ಟವಾಗಿತ್ತು ಎಂದು ವಿಶ್ಲೇಷಿಸಿದರು.

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ನಾನು ವಿಧಾನಸಭೆಯಲ್ಲಿ ನಿಲುವಳಿ ಸೂಚನೆ ಮಂಡಿಸಿ, ನಂತರ ನಿಯಮ 69ರ ಅಡಿ ಎರಡೂವರೆ ಗಂಟೆಗಳ ಕಾಲ ಈ ಬಗ್ಗೆ ಮಾತಾಡಿದ್ದೆ. ಆ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿ ಮಾತನಾಡಿದ್ದ ಸಿದ್ದರಾಮಯ್ಯನವರು 89 ಕೋಟಿ ರೂ. ಹಗರಣ ನಡೆದಿದೆ ಎಂದು ಒಪ್ಪಿಕೊಂಡಿದ್ದರು ಎಂದು ಸ್ಪಷ್ಟಪಡಿಸಿದ್ದರು.

ಆ ನಂತರ ನಾಗೇಂದ್ರ ರಾಜೀನಾಮೆ ನೀಡಿದ್ದರು. ಈಗ ನಾಗೇಂದ್ರ ಅವರೇ ಪತ್ರಿಕಾಗೋಷ್ಠಿ ನಡೆಸಿ ಪಕ್ಷದ ಶಿಸ್ತಿನ ಸಿಪಾಯಿ, ಪಕ್ಷ ಮುಖ್ಯ ಎಂಬ ಕಾರಣಕ್ಕಾಗಿ ರಾಜೀನಾಮೆ ನೀಡಿದ್ದೇನೆ ಎಂದಿದ್ದಾರೆ. ಪಕ್ಷ ಮುಖ್ಯ ಎಂದ ಮೇಲೆ ದಲಿತರ ಹಣವನ್ನು ಹೇಗೆ ಲೂಟಿ ಮಾಡಿದರು? ದಲಿತರ ಹಣ ಲೂಟಿ ಮಾಡಿ ಎಂದು ಪಕ್ಷದಿಂದಲೇ ಸೂಚನೆ ಬಂದಿತ್ತೇ? ದಲಿತರ ಹಣ ತಿಂದ ನಂತರ ಅದು ಖಂಡಿತ ಮುಜುಗರ ಆಗಲೇಬೇಕು ಎಂದು ವ್ಯಂಗ್ಯವಾಡಿದರು.

ಲೂಟಿ ಮಾಡಿದ 187 ಕೋಟಿ ರೂ. ತೆಲಂಗಾಣಕ್ಕೆ ಹೋಗಿತ್ತು. ಸಿಬಿಐ ಹಾಗೂ ಜಾರಿ ನಿರ್ದೇಶನಾಲಯದ ಚಾರ್ಜ್‌ಶೀಟ್‌ನಲ್ಲಿ ಈ ಬಗ್ಗೆ ನಿಖರವಾದ ಮಾಹಿತಿ ಇದೆ. ಸಿಎಂ ಡಿಕೆ ಶಿವಕುಮಾರ್‌ ಪ್ರಕಾರ ನಾಗೇಂದ್ರ ಅಮಾಯಕರಾಗಿದ್ದರೆ, ಎಲ್ಲ ಚಾರ್ಜ್‌ಶೀಟ್‌ಗಳಲ್ಲೂ ಅವರು ಆರೋಪಿಯಾಗುತ್ತಿರಲಿಲ್ಲ. ಜೊತೆಗೆ ಇವರ ಬಲಗೈ ನೆಕ್ಕಂಟಿ ನಾಗರಾಜ್‌ ಮೇಲೆ ಕೂಡ ಆರೋಪ ಇದೆ.  ನಾಗೇಂದ್ರ ಹೆಸರಲ್ಲಿ ನಾವು ಟಾರ್ಗೆಟ್‌ ಮಾಡುತ್ತಿದ್ದೇವೆ ಅನ್ನುತ್ತಿದ್ದಾರೆ, ಆತ್ಮಹತ್ಯೆ ಮಾಡಿಕೊಂಡ ಪಿ.ಚಂದ್ರಶೇಖರನ್‌ ಕೂಡ ದಲಿತರೇ ಆಗಿದ್ದರು ಎಂಬುದನ್ನು ಮರೆಯಬಾರದು. ಆ ದಲಿತ ಅಧಿಕಾರಿಗೆ ನ್ಯಾಯವಿಲ್ಲ, ಅವರ ಕುಟುಂಬದವರಿಗೆ ನ್ಯಾಯ ಸಿಕ್ಕಿಲ್ಲ.  ಪ್ರಕರಣದಲ್ಲಿ ಹಣದ ದುರ್ಬಳಕೆ ನಡೆದು ಬೇನಾಮಿ ಟೆಂಡರ್‌ ನೀಡಲಾಗಿತ್ತು. ಈ ಅಕ್ರಮಕ್ಕಾಗಿ ಒಬ್ಬ ದಲಿತ ಅಧಿಕಾರಿ ಸಾಯಬಹುದು. ಆದರೆ ಸಚಿವರ ರಾಜೀನಾಮೆ ಪಡೆಯಬಾರದು ಎಂಬುದು ಕಾಂಗ್ರೆಸ್‌ ನಿಲುವು ಎಂದು ಹರಿಹಾಯ್ದರು.

ಅಧಿಕಾರಿಗೆ ಅನ್ಯಾಯವಾದರೆ ನ್ಯಾಯ ಕೊಡಬೇಡಿ, ಸಚಿವನಿಗೆ ಅನ್ಯಾಯ ಎನ್ನಿಸಿದರೆ ನ್ಯಾಯ ಕೊಡಿ ಎಂದು ಬಾಬಾ ಸಾಹೇಬ್‌ ಅಂಬೇಡ್ಕರ್‌ ಹೇಳಿದ್ದಾರೆಯೇ? ಇದು ಯಾವ ರೀತಿಯ ದಲಿತ ನ್ಯಾಯ ಎಂದು ಪ್ರಶ್ನಿಸಿದರು.

ಪಿ.ಚಂದ್ರಶೇಖರನ್‌ ಕುಟುಂಬಕ್ಕೆ ಪಿಂಚಣಿ ಹಾಗೂ ಇತರೆ ಸೌಲಭ್ಯಗಳನ್ನು ಇನ್ನೂ ನೀಡಿಲ್ಲ. ಅವರ ಮಗನಿಗೆ ಉದ್ಯೋಗ ಕೊಡುತ್ತೇನೆಂದು ಘೋಷಣೆ ಮಾಡಿ, ಅದನ್ನೂ ಮಾಡಿಲ್ಲ.  ಕರ್ನಾಟಕದಲ್ಲಿ ನಾಗೇಂದ್ರ ಒಬ್ಬರೇ ದಲಿತರಾ? ದಲಿತರ 187 ಕೋಟಿ ರೂ. ದಲಿತರ ಪ್ರದೇಶಾಭಿವೃದ್ಧಿಗೆ, ಅವರ ಮಕ್ಕಳ ಶಾಲೆಗೆ, ಉದ್ಯೋಗ ಯೋಜನೆಗಳಿಗೆ ಬಳಕೆಯಾಗಬೇಕಿತ್ತು. ನಾವು ಇದಕ್ಕಾಗಿ ಹೋರಾಟ ಮಾಡುತ್ತಿದ್ದೇವೆ ಎಂದ ಮೇಲೆ ಇದು ಹೇಗೆ ದಲಿತರ ವಿರೋಧಿ ನಿಲುವಾಗುತ್ತದೆ? ನಾನು ಅಧಿವೇಶನದಲ್ಲಿ ಸರಿಯಾದ ದಾಖಲೆಗಳನ್ನು ನೀಡಿದ್ದೇನೆ.  ಅಧಿಕಾರಿ ಆತ್ಮಹತ್ಯೆ ಪತ್ರದಲ್ಲಿ ಹಣದ ಮೊತ್ತ ನಮೂದಿಸಿರುವ ಬಗ್ಗೆ ನಾನು ದಾಖಲೆಗಳನ್ನು ನೀಡಿದ್ದೇನೆ. ಸಿಬಿಐ ಪ್ರಕಟಿಸಿದ್ದ ಅಂಶಗಳನ್ನು ಕೂಡ ದಾಖಲೆಯಾಗಿ ಸದನಕ್ಕೆ ನೀಡಿದ್ದೇನೆ. ಸಿಬಿಐ ಪ್ರಕಟಣೆಯಲ್ಲೇ ನಾಗೇಂದ್ರ ಅವರನ್ನು ʼಕಿಂಗ್‌ಪಿನ್‌ʼ ಎಂದು ಉಲ್ಲೇಖಿಸಲಾಗಿದೆ. ಇದು ತಪ್ಪಾಗಿದ್ದರೆ ಸಿಬಿಐ ಹಾಗೂ ಇಡಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಬೇಕಿತ್ತು ಎಂದು ಸವಾಲು ಹಾಕಿದರು.

5 ಕೋಟಿ ರೂ. ಗಿಂತ ಹೆಚ್ಚಿನ ಟೆಂಡರ್‌ ಅಥವಾ ವರ್ಗಾವಣೆಗೆ ಸಚಿವ ಸಂಪುಟದ ಅನಮೋದನೆ ಬೇಕಾಗುತ್ತದೆ. 50-60 ಕೋಟಿ ರೂ. ವರ್ಗಾವಣೆ ಮಾಡಿದ್ದು ಹೇಗೆ? ಸುಮಾರು 600 ಖಾತೆಗಳಿಗೆ ಒಬ್ಬ ಅಕೌಂಟೆಂಟ್‌ ಹಣ ವರ್ಗಾವಣೆ ಮಾಡಲು ಸಾಧ್ಯವೇ ಇಲ್ಲ. ಇದನ್ನು ಮಾಡಿದ್ದು ಸಚಿವರ ಮೌಖಿಕ ಸೂಚನೆ ಮೇರೆಗೆ ಎಂದು ಆತ್ಮಹತ್ಯೆ ಪತ್ರದಲ್ಲಿ ಬರೆಯಲಾಗಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದಿಂದ ಬ್ಯಾಂಕ್‌ಗಳಿಗೆ ಅಧಿಕೃತವಾಗಿ ಪತ್ರ ಬರೆಯಲಾಗಿದೆ. ಯೂನಿಯನ್‌ ಬ್ಯಾಂಕ್‌ನ ಎಂ.ಜಿ. ರಸ್ತೆ ಶಾಖೆಯಲ್ಲಿ ಹಣ ಠೇವಣಿ ಇಟ್ಟು, ಅದಕ್ಕೆ ಸಾಲ ನೀಡಿ ಎಂದು ಕೇಳಲಾಗಿದೆ. ಹಣ ಇರುವಾಗ ಸಾಲ ಯಾಕೆ ಪಡೆಯಬೇಕು? ಈ ಎಲ್ಲ ವಿಷಯಗಳ ಕುರಿತು 37 ದಾಖಲೆಗಳನ್ನು ನಾನು ಬಿಡುಗಡೆಗೊಳಿಸಿದ್ದೇನೆ. ವಿಧಿವಿಜ್ಞಾನ ಪರೀಕ್ಷೆಯ ಮೊಬೈಲ್ ಚಾಟ್ ವಿವರವನ್ನೂ ಸದನದಲ್ಲಿ ತೋರಿಸಿದ್ದೇನೆ ಎಂದರು.

ಎಸ್‌ಐಟಿ ಮಾಡಿರುವ ಎಫ್‌ಎಸ್‌ಎಲ್‌ ವರದಿಯಲ್ಲೂ ನಾಗೇಂದ್ರ ಹಾಗೂ ಇತರರ ಚಾಟ್ ಮಾತುಕತೆ ವಿವರವಿದೆ. ನಾಗೇಂದ್ರ ಅಮಾಯಕರಾಗಿದ್ದರೆ ಅವರ ವಿರುದ್ಧ ಒಂದು ಕೇಸು ಇರಬೇಕಿತ್ತು. ಆದರೆ ಲೋಕಾಯುಕ್ತದಲ್ಲಿ ಅವರ ವಿರುದ್ಧ 12 ಸೇರಿದಂತೆ ಒಟ್ಟು 35 ಪ್ರಕರಣಗಳಿವೆ. ನಾನು ಅಧಿಕೃತ ದಾಖಲೆಗಳನ್ನು ನೀಡಿರುವುದಕ್ಕೆ ಇಕ್ಕಟ್ಟಿಗೆ ಸಿಲುಕಿ ರಾಜೀನಾಮೆ ನೀಡುವ ಪ್ರಸಂಗ ಬಂದಿದೆ. ತಪ್ಪು ಮಾಡಿಲ್ಲವೆಂದರೆ ಸಿದ್ದರಾಮಯ್ಯನವರ ಅವಧಿಯಲ್ಲಿ ರಾಜೀನಾಮೆ ಪಡೆದಿದ್ದೇಕೆ? ಸಿದ್ದರಾಮಯ್ಯನವರಿಗೆ ಹಾಗೂ ಆಗ ಡಿಸಿಎಂ ಆಗಿದ್ದ ಡಿ.ಕೆ.ಶಿವಕುಮಾರ್‌ಗೆ ಇವರು ದಲಿತರು ಎಂದು ಆಗ ಗೊತ್ತಿರಲಿಲ್ಲವೇ? ಯಾಕೆ ಅದನ್ನು ಸಿಎಂ ಡಿ.ಕೆ.ಶಿವಕುಮಾರ್‌ ಆಗ ತಡೆಯಲಿಲ್ಲ? ಆಗಲೇ ಡಿ.ಕೆ.ಶಿವಕುಮಾರ್‌ ದೆಹಲಿಗೆ ಹೋಗಿ ರಾಹುಲ್‌ ಗಾಂಧಿಗೆ ಮನವರಿಕೆ ಮಾಡಿ ರಾಜೀನಾಮೆ ನೀಡುವುದನ್ನು ತಪ್ಪಿಸಬೇಕಿತ್ತು ಎಂದು ತರಾಟೆ ತೆಗೆದುಕೊಂಡರು.

ಸಿಬಿಐ, ಇಡಿಯಿಂದ ತನಿಖೆಗಾಗಿ ರಾಜ್ಯಪಾಲರಿಗೆ ಅನುಮತಿ ಕೇಳಲಾಗಿದೆ. ಆದರೂ ಸಚಿವ ಡಾ.ಜಿ.ಪರಮೇಶ್ವರ್‌ ಅವರು ಚಾರ್ಜ್‌ಶೀಟ್‌ನಲ್ಲಿ ಹೆಸರಿಲ್ಲ ಎಂದು ಕಾಮನ್‌ಸೆನ್ಸ್‌ ಇಲ್ಲದಂತೆ ಹೇಳುತ್ತಾರೆ. ಸಿಬಿಐ ನವರು ಸುಮ್ಮನೆ ಆರೋಪ ಮಾಡಿದ್ದರೆ ಪರಮೇಶ್ವರ್‌ ಅವರೇ ತನಿಖಾ ಸಂಸ್ಥೆಗಳ ವಿರುದ್ಧ ಮಾನನಷ್ಟ ಪ್ರಕರಣ ದಾಖಲಿಸಲಿ. ನಾಗೇಂದ್ರ ಹಣ ತಿಂದೆ ಎಂದು ಪ್ರಾಯಶ್ಚಿತ್ತದಿಂದ ಕಣ್ಣೀರು ಹಾಕಿದ್ದಾರೆ, ಇದೇ ಸತ್ಯ ಎಂದರು.

ದಲಿತರು ತಪ್ಪು ಮಾಡಿದರೆ ಆ ಜಾತಿ ಹೆಸರಲ್ಲಿ ರಕ್ಷಣೆ ಪಡೆಯುತ್ತಾರೆಯೇ? ಅಂತಹ ಅವಕಾಶ ಸಂವಿಧಾನದಲ್ಲಿ ಇದೆಯೇ? ನಾಗೇಂದ್ರ ಜಾತಿ ಹೆಸರಲ್ಲಿ ರಕ್ಷಣೆ ಪಡೆಯಲು ಮುಂದಾದರೂ ಅವರ ಸಮಾಜದ ಯಾರೂ ಸಹಾಯಕ್ಕೆ ಬಂದಿಲ್ಲ.  ಲೂಟಿ ಮಾಡುವಾಗ ಇಲ್ಲದ ಆಲೋಚನೆಗಳು ರಾಜೀನಾಮೆ ನೀಡುವಾಗ ಬಂದಿದೆ. ನಾವು ದಲಿತರ ಪರವಾಗಿ ಹೋರಾಟ ಮಾಡಿದ್ದೇವೆ, ತಪ್ಪು ಯಾರದೆಂದು ನ್ಯಾಯಾಲಯದಲ್ಲಿ ಸಾಬೀತಾಗಬೇಕು. ಅಲ್ಲಿಯವರೆಗೆ ಕಾಯಬೇಕು. ರಾಜ್ಯಪಾಲರಿಂದ ಅನುಮತಿ ಸಿಕ್ಕಿದರೆ, ಸಚಿವರು ಮತ್ತೆ ಬಂಧನ ಆಗಿ ವಿಚಾರಣೆ ಎದುರಿಸಬೇಕಾಗುತ್ತದೆ. ಆಗ ಪ್ರತಿ ದಿನ ಮಾಧ್ಯಮಗಳಲ್ಲಿ ಸುದ್ದಿ ಬಂದು ಸರ್ಕಾರಕ್ಕೆ ಮುಜುಗರವಾಗುತ್ತದೆ. ಅದಕ್ಕಾಗಿ ರಾಜೀನಾಮೆ ನೀಡಿದ್ದಾರೆ. ಈ ಹೋರಾಟಕ್ಕೆ ಕೈ ಜೋಡಿಸಿದ ಎಲ್ಲ ಶಾಸಕರು, ಕಾರ್ಯಕರ್ತರಿಗೆ ಧನ್ಯವಾದ ತಿಳಿಸುತ್ತೇನೆ ಎಂದು ಹೇಳಿದರು.

ಎಸ್‌ಸಿಎಸ್‌ಪಿ/ಟಿಎಸ್‌ಪಿ ಹಣವನ್ನು ಕಾಂಗ್ರೆಸ್‌ ಸರ್ಕಾರ ಗ್ಯಾರಂಟಿಗಳಿಗೆ ಬಳಸಿಕೊಂಡಿದೆ. ಇದು ಕೂಡ ಮುಂದಿನ ದಿನಗಳಲ್ಲಿ ದಲಿತರ ಆಕ್ರೋಶಕ್ಕೆ ಕಾರಣವಾಗಲಿದೆ. ಆದ್ದರಿಂದ ಈ ಬಗ್ಗೆ ಈಗಲೇ ಸರ್ಕಾರ ಎಚ್ಚೆತ್ತುಕೊಳ್ಳಲಿ . ಬರಗಾಲ, ಕೆಪಿಎಸ್‌ಸಿ ಹಗರಣ, ನೀರಾವರಿ, ನೈಸ್‌ ಟೋಲ್‌, ಬಿಡದಿ ಮೊದಲಾದ ವಿಷಯಗಳ ಬಗ್ಗೆ ಮುಂದೆ ಚರ್ಚೆಯಾಗಲಿದೆ. ಹೊಸ ಮುಖ್ಯಮಂತ್ರಿ ಬಂದ ಮೂರೇ ತಿಂಗಳಲ್ಲಿ ಒಬ್ಬ ಸಚಿವರ ವಿಕೆಟ್‌ ಬಿದ್ದಿದೆ. ಈ ಕ್ರೆಡಿಟ್‌ ಹೋರಾಟ ಮಾಡಿದ ಎಲ್ಲರಿಗೂ ದೊರೆಯುತ್ತದೆ ಎಂದರು.

ಈ ಸಲ ನಾಗೇಂದ್ರ ಪ್ರಕರಣವನ್ನು ತಾರ್ಕಿಕ ಅಂತ್ಯ ಕಾಣಿಸಬೇಕು ಎಂದು ನಿಶ್ಚಯಿಸಿ ನೀಲನಕ್ಷೆ ಸಿದ್ಧಪಡಿಸಿ ಕೊಂಡು ಕಾರ್ಯತಂತ್ರ ರೂಪಿಸಲಾಗಿತ್ತು ಎಂದು ಅಶೋಕ್  ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.  ಮೈತ್ರಿ ಪಕ್ಷದ ನಾಯಕರಾದ ಕುಮಾರಸ್ವಾಮಿ ಮತ್ತು ಇತರ ಮುಖಂಡರ ಜತೆ ಚರ್ಚೆ ನಡೆಸಲಾಯಿತು.  ಶಾಸಕರ ಜತೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುತ್ತಿತ್ತು. ಜೆಡಿಎಸ್ ಶಾಸಕರಿಗೆ ಅಶೋಕ್ ಸೂಚನೆಯಂತೆ ನಡೆದುಕೊಳ್ಳುವಂತೆ ಕುಮಾರಸ್ವಾಮಿ ಸೂಚನೆ ನೀಡಿದ್ದರು ಎಂದರು.

ಸದನದ ಹೊರಗೆ ಕೂಡ ಪ್ರತಿಭಟನೆ ನಡೆಸಲಾಗುತ್ತಿತ್ತು. ಮಾಧ್ಯಮಗಳು ನಮ್ಮ ಹೋರಾಟದ ನೈಜತೆ ಗಮನಿಸಿ ಬೆಂಬಲಿಸಿದವು. ಕಾಂಗ್ರೆಸ್ ಮುಖಂಡರ ಹೇಳಿಕೆಗಳಿಗೆ ಪ್ರತಿಯಾಗಿ ದಾಖಲೆಗಳನ್ನು ಬಿಡುಗಡೆ ಮಾಡುತ್ತಾ ಬಂದೆ. ಅಂತಿಮವಾಗಿ ಸುಪ್ರೀಂ ಕೋರ್ಟ್ ತೀರ್ಪನ್ನು  ಉಲ್ಲೇಖ ಮಾಡಿ ಅವರ ಕೈಕಟ್ಟಿ ಹಾಕಲಾಯಿತು. ಒಟ್ಟು 37 ದಾಖಲೆ ಬಿಡುಗಡೆ ಮಾಡಿದ್ದೇನೆ.  ನಮ್ಮ ಧರಣಿಯನ್ನು ಸದನದ ಬಾವಿಗೆ ಸ್ಥಳಾಂತರಿಸಿ ಹಗಲು – ರಾತ್ರಿ ಧರಣಿ ಮಾಡುವುದಾಗಿ ಘೋಷಿಸುತ್ತಿದ್ದಂತೆ ಸರ್ಕಾರ ಇಕ್ಕಟ್ಟಿಗೆ ಸಿಲುಕಿತು. ಎರಡು ದಿನ ಮುಂಚಿತವಾಗಿ ಕಲಾಪ ಮುಂದೂಡಿದರು. ಆಗಲೇ ರಾಜೀನಾಮೆ ನೀಡಲು ಸಿಎಂ ನಾಗೇಂದ್ರ ಅವರಿಗೆ ಸೂಚನೆ ಕೊಟ್ಟಿದ್ದರು ಎಂದು ವಿವರಿಸಿದರು.

Related Posts

Leave a Reply

Your email address will not be published. Required fields are marked *