Menu

ಪಶ್ಚಿಮ ಘಟ್ಟದ  ವಿದ್ಯುದ್ದೀಕೃತ ರೈಲು ಮಾರ್ಗಕ್ಕೆ ಶಕ್ತಿ ತುಂಬಿದ KPTCL: 12 ರೈಲ್ವೆ ಟ್ರಾಕ್ಷನ್ ಕೇಂದ್ರಗಳಿಗೆ ವಿದ್ಯುತ್

ಉದಯಕಾಲ ನ್ಯೂಸ್, ಬೆಂಗಳೂರು: ಪಶ್ಚಿಮ ಘಟ್ಟದಲ್ಲಿ ಅತ್ಯಂತ ಸವಾಲೆನಿಸಿರುವ ಸಕಲೇಶಪುರ – ಸುಬ್ರಹ್ಮಣ್ಯ ರೋಡ್ ರೈಲು ಮಾರ್ಗ ಹೊಸದಾಗಿ ವಿದ್ಯುದ್ದೀಕೃತಗೊಂಡಿರುವ ಹಿನ್ನೆಲೆಯಲ್ಲಿ, ಈ ಮಾರ್ಗದಲ್ಲಿ ವಿದ್ಯುತ್ ರೈಲುಗಳ ಸಂಚಾರಕ್ಕೆ ಅಗತ್ಯವಾದ ವಿಶ್ವಾಸಾರ್ಹ ಟ್ರಾಕ್ಷನ್ ಪವರ್ (traction power) ಒದಗಿಸಲು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (KPTCL) ಬಲಿಷ್ಠ ಪ್ರಸರಣ ಮೂಲಸೌಕರ್ಯವನ್ನು ಯಶಸ್ವಿಯಾಗಿ ಅಭಿವೃದ್ಧಿಪಡಿಸಿದೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ತಿಳಿಸಿದ್ದಾರೆ.

ಶುಕ್ರವಾರ ಆರಂಭವಾಗಿರುವ ಯಶವಂತಪುರ–ಮಂಗಳೂರು–ಮಡಗಾಂವ್ ವಂದೇ ಭಾರತ್ ಎಕ್ಸ್‌ಪ್ರೆಸ್ ಸೇವೆಯೊಂದಿಗೆ, ಪಶ್ಚಿಮ ಘಟ್ಟದ ಹೊಸ ವಿದ್ಯುದ್ದೀಕೃತ ಮಾರ್ಗದಲ್ಲಿ ಮೊದಲ ಬಾರಿಗೆ ವಂದೇ ಭಾರತ್ ವಿದ್ಯುತ್ ರೈಲು ಸಂಚರಿಸಲಿದ್ದು, ಈ ಐತಿಹಾಸಿಕ ಯೋಜನೆಗೆ ಕೆಪಿಟಿಸಿಎಲ್‌ ಪ್ರಮುಖ ಶಕ್ತಿ ಕೇಂದ್ರವಾಗಿ ಕಾರ್ಯನಿರ್ವಹಿಸಿದೆ.

ಘಟ್ಟಸಾಲುಗಳ ಸವಾಲು ಮತ್ತು ಕೆಪಿಟಿಸಿಎಲ್ ತಾಂತ್ರಿಕ ಕೊಡುಗೆಗಳು

ಪಶ್ಚಿಮ ಘಟ್ಟದ ಕಡಿದಾದ ಬೆಟ್ಟಗಳು, ತೀವ್ರ ಏರಿಳಿತ, ಭಾರಿ ಮಳೆ ಹಾಗೂ ಸಂಕೀರ್ಣ ಭೌಗೋಳಿಕ ಪರಿಸ್ಥಿತಿಯಲ್ಲಿ ಟ್ರಾಕ್ಷನ್-ಪವರ್ ಮೂಲಸೌಕರ್ಯವನ್ನು ಸಜ್ಜುಗೊಳಿಸುವುದು ದೊಡ್ಡ ತಾಂತ್ರಿಕ ಸವಾಲಾಗಿತ್ತು. ಈ ಸವಾಲಿನ ನಡುವೆಯೂ ಕೆಪಿಟಿಸಿಎಲ್ ಇಂಜಿನಿಯರ್‌ಗಳು ಮತ್ತು ತಾಂತ್ರಿಕ ಸಿಬ್ಬಂದಿ ನಿರಂತರವಾಗಿ ಕಾರ್ಯನಿರ್ವಹಿಸಿ, ಅಗತ್ಯ ಪ್ರಸರಣ ಸಂಪರ್ಕ, ಗ್ರಿಡ್ ಬಲವರ್ಧನೆ ಮತ್ತು ವಿದ್ಯುತ್ ಪೂರೈಕೆ ವ್ಯವಸ್ಥೆಗಳನ್ನು ಸಜ್ಜುಗೊಳಿಸಿದ್ದಾರೆ.

ಮಾರ್ಗದ 12 ರೈಲ್ವೆ ಟ್ರಾಕ್ಷನ್ ಉಪಕೇಂದ್ರಗಳಿಗೆ (RTSS) 12 KPTCL ಉಪಕೇಂದ್ರಗಳಿಂದ ವಿದ್ಯುತ್ ಪೂರೈಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರಮುಖ ತಾಂತ್ರಿಕ ಕೊಡುಗೆಗಳೆಂದರೆ

ಸಿದ್ದಾಪುರಕ್ಕೆ 4.5 ಕಿ.ಮೀ. 66 ಕೆವಿ ಪ್ರಸರಣ ಮಾರ್ಗ ಹಾಗೂ ಸಕಲೇಶಪುರ RTSSಗೆ 220 ಕೆವಿ ಯುಜಿ (UG) ಹಾಗೂ ಓವರ್‌ಹೆಡ್ ಪ್ರಸರಣ ಸಂಪರ್ಕ.
ನೆರಳಕಟ್ಟೆಗೆ 2.760 ಕಿ.ಮೀ. 220 ಕೆವಿ ಅಂಡರ್‌ಗ್ರೌಂಡ್ ಕೇಬಲ್ ಹಾಗೂ ಜೋಕಟ್ಟೆ, ಮುಲ್ಕಿ, ಬಾರ್ಕೂರು ಮತ್ತು ಸೇನಾಪುರಕ್ಕೆ 110 ಕೆವಿ ಪ್ರಸರಣ/ಲೈಲೋ (LILO)/ಸ್ವಿಚಿಂಗ್ ಮೂಲಸೌಕರ್ಯ.
ಅಂಚೆಪಾಳ್ಯ ಹಾಗೂ ಯಾಚೇನಹಳ್ಳಿ ಉಪಕೇಂದ್ರಗಳಲ್ಲಿ 220/66 ಕೆವಿ ಟ್ರಾನ್ಸ್‌ಫಾರ್ಮರ್ ಸಾಮರ್ಥ್ಯ ವೃದ್ಧಿ (augmentation).
ಮುರುಡೇಶ್ವರ, ಕುಮಟಾ ಮತ್ತು ಕಾರವಾರ RTSSಗಳಿಗೆ ಹಾಲಿ KPTCL ಜಾಲದಿಂದ ವಿದ್ಯುತ್ ಬೆಂಬಲ ಮತ್ತು ವಂದೇ ಭಾರತ್ ಸಂಚಾರದ ಹಿನ್ನೆಲೆಯಲ್ಲಿ 24×7 ತಾಂತ್ರಿಕ ಮೇಲ್ವಿಚಾರಣೆ.

ಪ್ರವಾಸೋದ್ಯಮಕ್ಕೆ ಒತ್ತು – ಸ್ಥಳೀಯ ಆರ್ಥಿಕತೆಗೆ ಬಲ

ಈ ಕುರಿತು ಮಾತನಾಡಿದ ಸಚಿವ ಕೆ.ಜೆ. ಜಾರ್ಜ್, “ಪಶ್ಚಿಮ ಘಟ್ಟದಂತಹ ದುರ್ಗಮ ಪ್ರದೇಶದಲ್ಲಿ ಹೊಸದಾಗಿ ವಿದ್ಯುದ್ದೀಕೃತಗೊಂಡ ರೈಲು ಮಾರ್ಗಕ್ಕೆ ನಿರಂತರ ಮತ್ತು ವಿಶ್ವಾಸಾರ್ಹ ಶಕ್ತಿ ಒದಗಿಸುವುದು ದೊಡ್ಡ ಜವಾಬ್ದಾರಿಯಾಗಿದೆ. ಕೆಪಿಟಿಸಿಎಲ್ ಸಿಬ್ಬಂದಿ ಅತ್ಯಂತ ಸವಾಲಿನ ಪರಿಸ್ಥಿತಿಯಲ್ಲೂ ಶ್ರಮಿಸಿ ಮೂಲಸೌಕರ್ಯ ಸಜ್ಜುಗೊಳಿಸಿದ್ದಾರೆ” ಎಂದು ಪ್ರಶಂಸಿಸಿದರು. ಈ ಹೊಸ ರೈಲು ಸಂಪರ್ಕವು ಬೆಂಗಳೂರು ಮತ್ತು ಕರಾವಳಿ ಕರ್ನಾಟಕದ ನಡುವಿನ ಪ್ರಯಾಣವನ್ನು ಸುಗಮಗೊಳಿಸುವುದರ ಜೊತೆಗೆ ಮಂಗಳೂರು, ಉಡುಪಿ, ಮುರುಡೇಶ್ವರ, ಗೋಕರ್ಣ ಸೇರಿದಂತೆ ಕರಾವಳಿ ಭಾಗದ ಪ್ರವಾಸೋದ್ಯಮ, ಆತಿಥ್ಯ ಮತ್ತು ಸ್ಥಳೀಯ ಆರ್ಥಿಕ ಚಟುವಟಿಕೆಗಳಿಗೆ ಹೊಸ ಅವಕಾಶಗಳನ್ನು ಸೃಷ್ಟಿಸಲಿದೆ ಎಂದು ತಿಳಿಸಿದರು. ಕೆಪಿಟಿಸಿಎಲ್ ಎಂಡಿ ಡಾ. ರಾಮ್ ಪ್ರಸಾತ್ ಮನೋಹರ್ ಮಾತನಾಡಿ, ವಂದೇ ಭಾರತ್ ಸಂಚಾರದ ಸಂದರ್ಭದಲ್ಲಿ ಪ್ರಮುಖ ಉಪಕೇಂದ್ರಗಳಲ್ಲಿ ತಾಂತ್ರಿಕ ಸಿಬ್ಬಂದಿಯನ್ನು ನಿಯೋಜಿಸಿ 24×7 ಮೇಲ್ವಿಚಾರಣೆ ನಡೆಸಲಾಗುತ್ತಿದೆ ಎಂದರು.
#KPTCL #KJGeorge #VandeBharat #WesternGhats #RailwayElectrification #KarnatakaPower #SakleshpurSubrahmanya #UdayakalaNews

Related Posts

Leave a Reply

Your email address will not be published. Required fields are marked *