Menu

ಬ್ಯಾಂಕಾಕ್‌ನಿಂದ ಬೆಂಗಳೂರಿಗೆ ಸಾಗಿಸುತ್ತಿದ್ದ 13.14 ಕೋಟಿ ರೂ. ಮೌಲ್ಯದ ಗಾಂಜಾ ವಶ

ದೇವನಹಳ್ಳಿ ಬಳಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಬ್ಯಾಂಕಾಕ್‌ನಿಂದ ಅಕ್ರಮವಾಗಿ ಬೆಂಗಳೂರಿಗೆ ಸಾಗಿಸುತ್ತಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಹೈಡ್ರೋಪೋನಿಕ್ ಗಾಂಜಾವನ್ನು ಜಪ್ತಿ ಮಾಡಿದ್ದಾರೆ.

ಕಸ್ಟಮ್ಸ್ ಇಲಾಖೆಯ ತಪಾಸಣೆ ನಡೆಸುವಾಗ ಲಗೇಜ್ ಬ್ಯಾಗ್‌ನಲ್ಲಿ ಅಡಗಿಸಿಡಲಾಗಿದ್ದ ಒಟ್ಟು 38.34 ಕೆಜಿ ಗಾಂಜಾ ಪತ್ತೆಯಾಗಿದ್ದು, ಪ್ರಕರಣ ಸಂಬಂಧ ಆರು ಪ್ರಯಾಣಿಕರನ್ನು ಬಂಧಿಸಲಾಗಿದೆ.  ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳು ನೀಡಿದ ಅಧಿಕೃತ ಮಾಹಿತಿ ಪ್ರಕಾರ, ಜೂನ್ 11ರಂದು ಬ್ಯಾಂಕಾಕ್‌ನಿಂದ ಬೆಂಗಳೂರಿಗೆ ಬಂದಿಳಿದ ಐವರನ್ನು ತಪಾಸಣೆ ನಡೆಸುವಾಗ ಗಾಂಜಾ ಕಳ್ಳಸಾಗಣೆ ಪತ್ತೆಯಾಗಿದೆ. ಆರೋಪಿಗಳು ವಿಮಾನ ನಿಲ್ದಾಣದಲ್ಲಿ ತಪಾಸಣೆಯಿಂದ ತಪ್ಪಿಸಿಕೊಳ್ಳಲು ಚೆಕ್-ಇನ್ ಬ್ಯಾಗೇಜ್‌ಗಳ ಒಳಗೆ ಗಾಂಜಾ ಅಡಗಿಸಿಟ್ಟಿದ್ದರು.

ಅಧಿಕಾರಿಗಳು ಬ್ಯಾಗ್‌ಗಳನ್ನು ಕೂಲಂಕಷವಾಗಿ ಸ್ಕ್ಯಾನ್ ಮಾಡಿದಾಗ ಒಟ್ಟು 24.8 ಕೆಜಿ ತೂಕದ ಅತ್ಯಾಧುನಿಕ ಹೈಡ್ರೋಪೋನಿಕ್ ಗಾಂಜಾ ಪತ್ತೆಯಾಗಿದೆ. ಇದರ ಅಂತರರಾಷ್ಟ್ರೀಯ ಮಾರುಕಟ್ಟೆ ಮೌಲ್ಯ 8.68 ಕೋಟಿ ರೂ. ಎಂದು ಅಂದಾಜಿಲಾಗಿದೆ.

ಜೂನ್ 13, 2026ರಂದು ಬ್ಯಾಂಕಾಕ್‌ನಿಂದಲೇ ಬಂದ ಮತ್ತೊಂದು ವಿಮಾನದ ಪ್ರಯಾಣಿಕನ ಚೆಕ್-ಇನ್ ಬ್ಯಾಗ್ ಹಾಗೂ ಹ್ಯಾಂಡ್ ಲಗೇಜ್ ಬ್ಯಾಗ್‌ಗಳನ್ನು ಪರಿಶೀಲಿಸಿದಾಗ ವ್ಯಾಕ್ಯೂಮ್ ಪ್ಯಾಕ್ ಮಾಡಲಾಗಿದ್ದ 13.54 ಕೆಜಿ ಹೈಡ್ರೋಪೋನಿಕ್ ಗಾಂಜಾ ಸಿಕ್ಕಿಬಿದ್ದಿದೆ. ಇದರ ಮೌಲ್ಯ 4.74 ಕೋಟಿ ರೂ. ಆಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬಂಧಿತ ಆರು ಆರೋಪಿಗಳ ವಿರುದ್ಧ ಮಾದಕ ದ್ರವ್ಯ ನಿಯಂತ್ರಣ ಕಾಯ್ದೆ ಎನ್‌ಡಿಪಿಎಸ್ ಅಡಿ ಪ್ರಕರಣ ದಾಖಲಿಸಲಾಗಿದೆ. ಈ ಡ್ರಗ್ಸ್ ಮಾಫಿಯಾದ ಹಿಂದೆ ಬೆಂಗಳೂರಿನಲ್ಲಿಯಾರಿದ್ದಾರೆ, ನಗರದ ಯಾವ ಭಾಗಗಳಿಗೆ ಡ್ರಗ್ಸ್‌ ಸರಬರಾಜು ಮಾಡಲು ತರಲಾಗುತ್ತಿತ್ತು ಎಂಬುದನ್ನು ತಿಳಿಯಲು ಕಸ್ಟಮ್ಸ್ ಅಧಿಕಾರಿಗಳು ತನಿಖೆ ತೀವ್ರಗೊಳಿಸಿದ್ದಾರೆ.

Related Posts

Leave a Reply

Your email address will not be published. Required fields are marked *