Menu

ಉಷ್ಣಮಾರುತಕ್ಕೆ ಫ್ರಾನ್ಸ್‌ ತತ್ತರ: ನದಿ, ಕೆರೆಗಳಲ್ಲಿ ಮುಳುಗಿ 40 ಮಂದಿ ಸಾವು

ಯುರೋಪ್ ಖಂಡವು ಒಮೆಗಾ ಬ್ಲಾಕ್ ಎಂಬ ಹವಾಮಾನ ವೈಪರೀತ್ಯದ ಉಷ್ಣ ಮಾರುತಕ್ಕೆ ತತ್ತರಿಸಿದೆ. ಫ್ರಾನ್ಸ್ ದೇಶದಲ್ಲಿ ಬಿಸಿಲಿನ ಬೇಗೆಯಿಂದ ಪಾರಾಗಲು ನದಿ ಮತ್ತು ಕೆರೆಗಳಿಗೆ ಇಳಿದು ಐದು ದಿನಗಳ ಅಂತರದಲ್ಲಿ 40 ಮಂದಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಬಿಸಿಲಿನ ಬೇಗೆ ತಾಳಲಾಗದೆ ಯಾವುದೇ ಸುರಕ್ಷತೆ ಇಲ್ಲದ ನೈಸರ್ಗಿಕ ಜಲಮೂಲಗಳಲ್ಲಿ ಏಕಾಏಕಿ ಈಜಲು ಹೋಗಿರುವುದೇ ಈ ಸಾವುಗಳಿಗೆ ಕಾರಣ. ಫ್ರಾನ್ಸ್ ಪ್ರಧಾನಿ ಸೆಬಾಸ್ಟಿಯನ್ ಲೆಕೋರ್ನು ತುರ್ತು ಸಭೆ ನಡೆಸಿ, ಜೂನ್ 18ರಿಂದ ಈವರೆಗೆ 40 ಸಾವುಗಳಾಗಿದ್ದು, ಮೃತಪಟ್ಟವರಲ್ಲಿ ಬಹುತೇಕರು ಯುವಕರು, ಇದು ದುರದೃಷ್ಟಕರ ಸಂಗತಿ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಸಹಾರಾ ಮರುಭೂಮಿಯಿಂದ ಬೀಸುತ್ತಿರುವ ಬಿಸಿಗಾಳಿಯಿಂದಾಗಿ ಫ್ರಾನ್ಸ್‌ನ ತಾಪಮಾನವು ಸಾರ್ವಕಾಲಿಕ ಏರಿಕೆ ಕಂಡಿದೆ. ಫ್ರಾನ್ಸ್‌ನ ಕೆಲವು ಭಾಗಗಳಲ್ಲಿ ಉಷ್ಣಾಂಶವು 44.3 ಡಿಗ್ರಿ ಸೆಲ್ಸಿಯಸ್ ತಲುಪಿದ್ದು, ಇದು 1947ರ ನಂತರದ ಅತಿ ಹೆಚ್ಚಿನ ತಾಪಮಾನ. ಜನರು ಬಿಸಿಲಿನ ತಾಪಕ್ಕೆ ಬಸವಳಿದಿದ್ದು, ದೇಶದ 54 ಪ್ರಾಂತ್ಯಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.

ದಕ್ಷಿಣ ಫ್ರಾನ್ಸ್‌ನಲ್ಲಿದ ಕಾರಿನೊಳಗೆ ವಿಪರೀತ ಸೆಕೆಯಿಂದ ಉಸಿರುಗಟ್ಟಿ 2 ಮತ್ತು 4 ವರ್ಷದ ಇಬ್ಬರು ಮಕ್ಕಳು ಅಸು ನೀಗಿವೆ, ಬೋರ್ಡೆಕ್ಸ್ ಪ್ರದೇಶದಲ್ಲಿ 80ರಿಂದ 95 ವರ್ಷದ ಮೂವರು ಪ್ರಾಣ ಕಳೆದುಕೊಂಡಿದ್ದಾರೆ. ಜನಜೀವನ ಹಾಗೂ ಮೂಲಸೌಕರ್ಯಗಳು ಅಸ್ತವ್ಯಸ್ತಗೊಂಡಿವೆ. ಸುರಕ್ಷತೆಯ ದೃಷ್ಟಿಯಿಂದ ಐಫೆಲ್ ಟವರ್ ಪ್ರವೇಶದ ಸಮಯವನ್ನು ಕಡಿತಗೊಳಿಸಲಾಗಿದೆ. ನದಿ ನೀರು 28 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚು ಬಿಸಿಯಾದ ಕಾರಣ ಪರಮಾಣು ರಿಯಾಕ್ಟರ್‌ವೊಂದನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ, ಬ್ರಿಟನ್-ಫ್ರಾನ್ಸ್‌ನ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

Related Posts

Leave a Reply

Your email address will not be published. Required fields are marked *