Menu

ಪಂಚ ರಾಜ್ಯ ಚುನಾವಣೆ ಫಲಿತಾಂಶ: ಹೊಸ ಪೀಳಿಗೆಯ ರಾಜಕೀಯ ಸುನಾಮಿ

ಪಂಚ ರಾಜ್ಯಗಳಲ್ಲಿ ನಡೆದ ಚುನಾವಣೆಯ ಫಲಿತಾಂಶದಲ್ಲಿ ಹೊಸ ಪೀಳಿಗೆ ಎಬ್ಬಿಸಿರುವ ರಾಜಕೀಯ ಸುನಾಮಿ ಎದ್ದು ಕಾಣಿಸುತ್ತಿದೆ. ಇಲ್ಲದಿದ್ದಲ್ಲಿ ಬಂಗಾಳದ ದೀದಿಯಿಂದ ಹಿಡಿದು ತಮಿಳುನಾಡಿನ ಸ್ಟಾಲಿನ್ ಧೂಳೀಪಟವಾಗುತ್ತಿರಲಿಲ್ಲ. ಈ ಬಾರಿಯ ಫಲಿತಾಂಶದ ವಿಶೇಷ ಎಂದರೆ ಹೊಸ ವ್ಯಕ್ತಿಯ ಆಯ್ಕೆಯಲ್ಲ, ಹೊಸ ಪಕ್ಷದ ಆಯ್ಕೆ. ಇದು ಕಷ್ಟದ ಕೆಲಸ. ಇಲ್ಲದಿದ್ದಲ್ಲಿ ವಿಜಯನ್ ಮೊದಲ ಚುನಾವಣೆಯಲ್ಲೇ ಸಿಎಂ ಆಗಲು ಸಾಧ್ಯವಿರಲಿಲ್ಲ. ಎಂಜಿಆರ್ ಮಾತ್ರ ಇದನ್ನು ಸಾಧಿಸಿದ್ದರು. ಮೋದಿ ಪ್ರದಾನಿಯಾದ ದಿನದಿಂದ ಪ್ರತಿಪಕ್ಷಗಳು  ಅವರನ್ನು ಟೀಕಿಸುವುದೇ ದೊಡ್ಡ ಕೆಲಸ ಎಂದು ಭಾವಿಸಿದವು. ಅದರಲ್ಲೂ ಪ್ರತಿಪಕ್ಷಗಳ ಹಿರಿಯ ತಲೆಗಳು ಬೇರೆ ಯಾವುದೇ ವಿಷಯದ ಬಗ್ಗೆ ಮಾತನಾಡುತ್ತಿರಲಿಲ್ಲ. ಇದರಿಂದ ಯುವಕರು ಎಲ್ಲ ರಾಜಕೀಯಪಕ್ಷಗಳಿಗೆ ದೂರ ಸರಿಯಲು ಆರಂಭಿಸಿದರು. ಎಲ್ಲ ಪಕ್ಷಗಳಲ್ಲೂ ವಂಶಪಾರಂಪರ್‍ಯ ಆಡಳಿತ ಮುಂದುವರಿಯಿತು. ಬಿಜೆಪಿ ಈ ಸಂಪ್ರದಾಯವನ್ನು ಮುರಿದು ಹೊಸಬರನ್ನು ತರಲು ಆರಂಭಿಸಿತು.

ಈಗ ರಾಷ್ಟ್ರೀಯ ಅಧ್ಯಕ್ಷರು ಎಲ್ಲರಿಗಿಂತ ಕಿರಿಯರು. ಮೊದಲಿನಿಂದಲೂ ನಮ್ಮ ಭಾವನೆ ಏನು ಎಂದರೆ ಪಕ್ಷದ ಅಧ್ಯಕ್ಷರು ಎಂದರೆ ಅವರ ಕೈಕಾಲು ನಡುಗುತ್ತಿರಬೇಕು. ಅವರ ಮಾತಿನಲ್ಲಿ ಯಾವುದೇ ರೀತಿಯ ಅರ್ಥ ಇರಬಾರದು ಎಂಬ ಭಾವನೆ ಮೂಡಿತ್ತು. ಬಿಜೆಪಿ ಈ ಸಂಪ್ರದಾಯ ಕೈಬಿಟ್ಟಿದೆ. ಯುವಕರು ಇಲ್ಲದ ಕಾರಣ ಎಲ್ಲ ರಾಜಕೀಯ ಪಕ್ಷಗಳು ಮತಬ್ಯಾಂಕ್ ಕಾಪಾಡುವುದರಲ್ಲಿ ನಿರತ. ಪಶ್ಚಿಮ ಬಂಗಾಳದ ದೀದಿಗೆ ಬಾಂಗ್ಲಾದಿಂದ ಬಂದು ಮತ ಚಲಾಯಿಸಿ ಹೋಗುವ ಪಡೆಯೇ ಇತ್ತು. ಅದನ್ನು ಚುನಾವಣೆ ಆಯೋ ಗ ಕ್ಷಿಪ್ರ ಮತದಾರರ ಪಟ್ಟಿ ಪರಿಷ್ಕರಣೆ ಮೂಲಕ ತಡೆಯೊಡ್ಡಿತು. ಅಲ್ಲದೆ ಮತ ಚಲಾಯಿಸಿದ್ದಲ್ಲಿ ಪೌರತ್ವ ಹೋಗುತ್ತದೆ ಎಂಬ ಭಯ ಹುಟ್ಟಿತು. ಅದರಿಂದ ಮತದಾನದ ದಿನ ಪಿಕ್‌ನಿಕ್ ಹೋಗುತ್ತಿದ್ದ ಯುವಕರು ಎಲ್ಲೂ ಹೋಗದೆ ಮತಚಲಾಯಿಸಿದರು. ಅದರ ಫಲವೇ ಎಲ್ಲ ಕಡೆ ಶೇಕಡಾವಾರು ಮತದಾನ ಅಧಿಕಗೊಂಡಿತು. ಮತ ಬ್ಯಾಂಕ್ ಇಟ್ಟುಕೊಂಡವರಿಗೆ ಹೊಸ ಮತದಾರರು ಯಾರಿಗೆ ಮತ ಹಾಕಿದ್ದಾರೆ ಎಂಬುದು ತಿಳಿಯಲಿಲ್ಲ. ಇದರಿಂದ ಫಲಿತಾಂಶ ನಿರೀಕ್ಷೆ ಮೀರಿ ಬಂದಿದೆ. ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳದಲ್ಲಿ ಅತಿ ಹೆಚ್ಚು ಮತದಾನವಾಗಿದೆ. ಯಾವುದೇ ಬದಲಾವಣೆ ಬಾರದೆ ಇರುವುದು ಪುದುಚೇರಿ ಮತ್ತು ಅಸ್ಸಾಂ. ಅದು ಚಿಕ್ಕ ರಾಜ್ಯಗಳು.

ಇನ್ನು ಕರ್ನಾಟಕದಲ್ಲಿ ಎರಡು ಉಪಚುನಾವಣೆ ಫಲಿತಾಂಶ ಕಾಂಗ್ರೆಸ್ ಪರ ಬಂದಿದ್ದರೂ ಸಂತೋಷವೇನೂ ತಂದಿಲ್ಲ. ದಾವಣಗೆರೆಯಲ್ಲಿ ಪಕ್ಷದ ಅಭ್ಯರ್ಥಿ ಗೆದ್ದಿದ್ದರೂ ಮುಸ್ಲಿಂ ಮತದಾರರ ಮುನಿಸು ಇನ್ನೂ ಹೋಗಿಲ್ಲ. ಹೋಗುವುದೂ ಇಲ್ಲ. ಮುಸ್ಲಿಮರು ಇದುವರೆಗೆ ಕಾಂಗ್ರೆಸ್ ಪಕ್ಷದ ಮತ ಬ್ಯಾಂಕ್ ಮಾತ್ರ ಆಗಿದ್ದರು. ಈಗ ಅಧಿಕಾರದಲ್ಲಿ ಪಾಲು ಕೇಳಲು ಆರಂಭಿಸಿದ್ದಾರೆ. ಮುಸ್ಲಿಮರು ಬಿಜೆಪಿಗೆ ಹೋಗೋಲ್ಲ. ನಮ್ಮಲ್ಲೇ ಇರುತ್ತಾರೆ ಎಂದು ಕೈ ನಾಯಕರು ಇದುವರೆಗೆ ಭಾವಿಸಿದ್ದರು. ಆದರೆ ಈಗ ಮುಸ್ಲಿಂ ನಾಯಕರು ನಮಗೂ ಟಿಕೆಟ್ ಕೊಡಿ ಎಂದು ಬಹಿರಂಗವಾಗಿ ಒತ್ತಾಯಿಸಲು ಆರಂಭಿಸಿದ್ದಾರೆ. ಇದು ಮುಂದಿನ ದಿನಗಳಲ್ಲಿ ಅಧಿಕಗೊಳ್ಳುತ್ತದೆಯೇ ಹೊರತು ಶಮನಗೊಳ್ಳುವುದಿಲ್ಲ. ಕೈ ಹೈಕಮಾಂಡ್‌ಗೆ ಎಂದಿದ್ದರೂ ತಲೆನೋವು ಎಂಬುದರಲ್ಲಿ ಸಂದೇಹವಿಲ್ಲ.

ಈಗ ಕೇರಳದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಅದಕ್ಕೆ ಮಹತ್ವ ನೀಡಿ ಕರ್ನಾಟಕವನ್ನು ಕಡೆಗಣಿಸಿದರೆ ಅದರಿಂದ ಕೈಗೆ ಹಾನಿಯಾಗುವುದರಲ್ಲಿ ಸಂದೇಹ ಇಲ್ಲ. ಈಗ ರಾಜ್ಯಸಭೆ ಮತ್ತು ಮೇಲ್ಮನೆಯಲ್ಲಿ ಮುಸ್ಲಿಮರಿಗೆ ಹೆಚ್ಚಿನ ಸ್ಥಾನಮಾನ ಕಲ್ಪಿಸಿಕೊಡುವುದು ಅನಿವಾರ್ಯವಾಗಲಿದೆ. ಉಪ ಚುನಾವಣೆಯಲ್ಲಿ ಪಕ್ಷ ಗೆದ್ದಿರುವುದರಿಂದ ಸಿದ್ದರಾಮಯ್ಯ ನವರನೇತೃತ್ವಕ್ಕೆ ತೊಂದರೆ ಏನೂ ಇಲ್ಲ. ಆದರೆ ಜೂನ್ ನಲ್ಲಿ ಮಲ್ಲಿಕಾರ್ಜು ಖರ್ಗೆ ಅವರ ರಾಜ್ಯಸಭೆ ಸ್ಥಾನ ಮುಕ್ತಾಯಗೊಳ್ಳಲಿದೆ. ಅವರು ರಾಜ್ಯಕ್ಕೆ ಬರಲು ಬಯಸಿದರೆ ಸಿದ್ದರಾಮಯ್ಯ ಜಾಗ ಖಾಲಿಮಾಡುವುದು ಅನಿವಾರ್ಯವಾಗಲಿದೆ. ಈಗ ಉಪಚುನಾವಣೆ ಫಲಿತಾಂಶ ಸಿದ್ದರಾಮಯ್ಯನವರಿಗೆ ರಿಲೀಫ್ ಕೊಟ್ಟಿದೆ ಎಂದು ಹೇಳಬಹುದು.

Related Posts

Leave a Reply

Your email address will not be published. Required fields are marked *