ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ದುರುಪಯೋಗ ಮಾಡಿಕೊಂಡಿದೆ. ವಿಶೇಷವಾಗಿ ಪಶ್ಚಿಮ ಬಂಗಾಳ, ಅಸ್ಸಾಂ ಹಾಗೂ ತಮಿಳುನಾಡಿನಲ್ಲಿ ದೊಡ್ಡಮಟ್ಟದಲ್ಲಿ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ. 2.50 ಲಕ್ಷ ಕೇಂದ್ರ ಸಶಸ್ತ್ರ ಮೀಸಲು ಪಡೆ ಸಿಬ್ಬಂದಿ ನಿಯೋಜಿಸಿ 96 ಲಕ್ಷ ಮತದಾರರನ್ನು ಮತಪಟ್ಟಿಯಿಂದ ತೆಗೆದುಹಾಕಿ ಚುನಾವಣೆ ಮಾಡಿದ್ದಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಹಾಗೂ ಕನಕಪುರದಲ್ಲಿ ಚುನಾವಣಾ ಫಲಿತಾಂಶ ವಿಚಾರವಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ಕೆಪಿಸಿಸಿ ಅಧ್ಯಕ್ಷರಾಗಿ ಪಂಚರಾಜ್ಯ ಚುನಾವಣೆಯನ್ನು ಹೇಗೆ ವ್ಯಾಖ್ಯಾನ ಮಾಡುತ್ತೀರಿ ಎಂದು ಕೇಳಿದಾಗ ಹೀಗೆ ಉತ್ತರಿಸಿದರು.
ಅಸ್ಸಾಂ ಚುನಾವಣೆ ಬಗ್ಗೆ ನೀವು ಬಹಳಷ್ಟು ಭರವಸೆ ಹೊಂದಿದ್ದಿರಿ ಎಂದಾಗ, “ರಾಜಕಾರಣಿಯಾಗಿ ನಾನು ಭರವಸೆಯಿಂದಲೇ ಬದುಕಬೇಕು” ಎಂದರು. ವಿಜಯ್ ಅವರಿಗೆ ರಾಜಕೀಯ ಅನುಭವವಿಲ್ಲ ಎಂಬ ನಿಮ್ಮ ಹೇಳಿಕೆ ವೈರಲ್ ಆಗುತ್ತಿದೆ ಎಂಬ ನಿಮ್ಮ ಹೇಳಿಕೆ ಈಗ ವೈರಲ್ ಆಗುತ್ತಿದೆ ಎಂದು ಕೇಳಿದಾಗ, “ಅವರು ಚುನಾವಣೆ ಪ್ರಚಾರದ ವೇಳೆ ಕಾಂಗ್ರೆಸ್ ಪಕ್ಷದ ಬೆಂಬಲ ನಮಗಿದೆ ಎಂದಿದ್ದರು. ನಾವು ಅವರಿಗೆ ಎಲ್ಲಿ ಬೆಂಬಲ ನೀಡಿದ್ದೆವು? ಆ ವಿಚಾರವಾಗಿ ನಾನು ಆ ಮಾತು ಹೇಳಿದ್ದೆ. ನಾವು ಈಗಾಗಲೇ ಒಂದು ಪಕ್ಷದ ಜತೆ ಮೈತ್ರಿ ಮಾಡಿಕೊಂಡಿರುವಾಗ ಹೇಗೆ ಆ ರೀತಿ ಮಾಡಲು ಸಾಧ್ಯ? ಒಂದು ಪಕ್ಷದ ಜತೆ ಅರ್ಧ, ಮತ್ತೊಂದು ಪಕ್ಷದ ಜತೆ ಅರ್ಧ ಮೈತ್ರಿ ಮಾಡಲು ಆಗುವುದಿಲ್ಲ” ಎಂದರು.
ತಮಿಳುನಾಡಿನಲ್ಲಿ ಟಿವಿಕೆ ಬಹುಮತಕ್ಕೆ ಬೆಂಬಲದ ಅಗತ್ಯವಿದ್ದು ಕಾಂಗ್ರೆಸ್ ಬೆಂಬಲ ನೀಡುವುದೇ ಎಂದು ಕೇಳಿದಾಗ, “ನಮ್ಮ ಪಕ್ಷ ಏನು ತೀರ್ಮಾನ ಮಾಡುತ್ತದೋ ಗೊತ್ತಿಲ್ಲ. ನಾನು ಅದರ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ. ಬಿಜೆಪಿ ಹಾಗೂ ಅದರ ಮೈತ್ರಿಯನ್ನು ದೂರವಿಡುವುದು ನಮ್ಮ ಗುರಿ” ಎಂದರು.
ನೀವು ಪ್ರಚಾರ ಮಾಡಿದ ಕಡೆ ಸೋಲಾಗಿದೆ ಎಂಬ ಬಿಜೆಪಿ ನಾಯಕರ ಟೀಕೆ ಬಗ್ಗೆ ಕೇಳಿದಾಗ, “ಬಿಜೆಪಿ ನಾಯಕರು ಬಾಗಲಕೋಟೆ, ದಾವಣಗೆರೆ ದಕ್ಷಿಣಕ್ಕೆ ಹೋಗಿದ್ದರು. ಅಲ್ಲಿ ಯಾಕೆ ಅವರು ಗೆಲ್ಲಲಿಲ್ಲ. ನೀವು ಅವರನ್ನು ತೋರಿಸುತ್ತೀರಿ ಎಂಬ ಕಾರಣಕ್ಕೆ ಅವರು ಏನೋ ಟೀಕೆ ಮಾಡಿ ಮಾತನಾಡುತ್ತಾರೆ” ಎಂದು ತಿಳಿಸಿದರು.
“ಕರ್ನಾಟಕದ ಎರಡು ಕ್ಷೇತ್ರಗಳ ಉಪಚುನಾವಣೆಯಲ್ಲಿ ಜನ ನಮ್ಮ ಮೇಲೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನಮ್ಮ ಸರ್ಕಾರ ಗ್ಯಾರಂಟಿ ಯೋಜನೆಗಳ ಜತೆಗೆ ದಕ್ಷ ಡಳಿತ ನೀಡುತ್ತಿರುವುದನ್ನು ಗಮನಿಸಿದ್ದಾರೆ. 2028ರಲ್ಲಿ ಮತ್ತೆ ಅಧಿಕಾರಕ್ಕೆ ಬರಲು ಬೆಂಬಲ ನೀಡುವ ಸಂದೇಶ ನೀಡಿದ್ದಾರೆ” ಎಂದು ಶಿವಕುಮಾರ್ ಬಣ್ಣಿಸಿದರು.
“ಕರ್ನಾಟಕ ರಾಜ್ಯದಲ್ಲಿ ನಮ್ಮ ಇಬ್ಬರು ನಾಯಕರ ನಿಧನದಿಂದ ಎರಡು ವಿಧಾನಸಭಾ ಕ್ಷೇತ್ರಗಳು ತೆರವಾಗಿದ್ದವು. ಈ ಎರಡು ಕ್ಷೇತ್ರಗಳ ಜನತೆಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ನಮ್ಮ ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಪ್ರತಿ ಹಳ್ಳಿಗೆ ಭೇಟಿ ನೀಡಿ ಹಗಲಿರುಳು ಶ್ರಮಿಸಿದ್ದಾರೆ. ಅವರಿಗೂ ನಾನು ಪಕ್ಷ ಹಾಗೂ ಸರ್ಕಾರದ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ” ಎಂದರು.
ದಾವಣಗೆರೆ ಫಲಿತಾಂಶದಲ್ಲಿ ಮತ ಪ್ರಮಾಣ ಕಡಿಮೆಯಾಗಿರುವ ಬಗ್ಗೆ ಪರಾಮರ್ಶೆ ಮಾಡುತ್ತೀರಾ ಎಂದು ಕೇಳಿದಾಗ, “ಈಗ ಆ ಚರ್ಚೆ ಬೇಡ ಸಮಯ ಬಂದಾಗ ನೋಡೋಣ” ಎಂದರು. ದಾವಣಗೆರೆ ದಕ್ಷಿಣದಲ್ಲಿ ಶಿವಶಂಕರಪ್ಪ ಅವರು ಪಡೆದ ಮುನ್ನಡೆ ಈಗ ಬರಲಿಲ್ಲ ಎಂದು ಕೇಳಿದಾಗ, “ಒಂದೊಂದು ಚುನಾವಣೆ ಒಂದೊಂದು ರೀತಿ ನಡೆಯುತ್ತದೆ. ಬಾಗಲಕೋಟೆಯಲ್ಲಿ 5ಸಾವಿರ ಇದ್ದ ಅಂತರ ಈಗ 22 ಸಾವಿರಕ್ಕೆ ಏರಿಕೆಯಾಗಿದೆಯಲ್ಲ ಅದಕ್ಕೆ ಏನು ಹೇಳುತ್ತೀರಾ? ಅಲ್ಲಿ ಒಗ್ಗಟ್ಟಿನಲ್ಲಿ ಕೆಲಸ ಮಾಡಿರುವಂತೆ ಇಲ್ಲೂ ಒಗ್ಗಟ್ಟಿನಲ್ಲಿ ಕೆಲಸ ಮಾಡಿದ್ದಾರೆ” ಎಂದು ಉತ್ತರಿಸಿದರು.
ದಾವಣಗೆರೆ ಫಲಿತಾಂಶ ಬರುವ ಮುನ್ನವೇ ಕ್ರಮಕೈಗೊಂಡಿದ್ದು ಆತುರವಾಗಲಿಲ್ಲವೇ ಎಂದು ಕೇಳಿದಾಗ, “ಪಕ್ಷವು ತನಗೆ ಮಾಹಿತಿ ತಿಳಿದ ನಂತರ ಯಾವ ಸಮಯಕ್ಕೆ ಯಾವ ನಿರ್ಧಾರ ತೆಗೆದುಕೊಳ್ಳಬೇಕೋ ಅದನ್ನು ತೆಗೆದುಕೊಂಡಿದೆ. ಸಾಕ್ಷಿ ಸಮೇತ ಮಾಹಿತಿ ರವಾನೆಯಾಗಿದ್ದು, ಈ ವಿಚಾರವಾಗಿ ಮುಖ್ಯಮಂತ್ರಿಗಳು, ಹೈಕಮಾಂಡ್ ನಾಯಕರು, ನಮಗೆ ಹಾಗೂ ಅದನ್ನು ಮಾಡಿದವರಿಗೂ ಗೊತ್ತಿತ್ತು” ಎಂದು ಹೇಳಿದರು.
ಕೇರಳದಲ್ಲಿ ಇಷ್ಟು ದೊಡ್ಡ ಬಹುಮತ ಬರುವ ವಿಶ್ವಾಸವಿತ್ತೆ ಎಂದು ಕೇಳಿದಾಗ, “ಖಂಡಿತ, ನಾನು ಕೇರಳ ಚುನಾವಣೆ ಪ್ರಚಾರದ ವೇಳೆ ನನ್ನ ಹೇಳಿಕೆ ಗಮಿನಿಸಿ. ನಾವು ಮೂರನೇ ಎರಡರಷ್ಟು ಬಹುಮತದೊಂದಿಗೆ ಅಧಿಕಾರಕ್ಕೆ ಬರುವ ವಿಶ್ವಾಸ ವ್ಯಕ್ತಪಡಿಸಿದ್ದೆ. ಕೇರಳದಲ್ಲಿ ಎಲ್ಲಾ ನಾಯಕರು ಒಗ್ಗಟ್ಟಾಗೊ ಕೆಲಸ ಮಾಡಿದ್ದಾರೆ. ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಕೇರಳದ ಕಾರ್ಯಕರ್ತರು ಹಾಗೂ ಮತದಾರರಿಗೆ ಧನ್ಯವಾದ ಅರ್ಪಿಸುತ್ತೇನೆ. ದಕ್ಷಿಣ ಭಾರತದಲ್ಲಿ ಜನ ಬಿಜೆಪಿಯನ್ನು ಸಂಪೂರ್ಣವಾಗಿ ಕಿತ್ತೊಗೆದು ಸಂದೇಶ ರವಾನಿಸಲಾಗಿದೆ” ಎಂದು ತಿಳಿಸಿದರು.


