ದುರಾಸೆಯ ಬೆನ್ನು ಹತ್ತಿ ಉದ್ಯಮಿಯೊಬ್ಬರಿಗೆ ಕೋಟ್ಯಂತರ ರೂಪಾಯಿ ವಂಚಿಸಿದ ಬ್ಯಾಂಕ್ ಮ್ಯಾನೇಜರ್ ಸೇರಿ ಮೂವರು ಆರೋಪಿಗಳನ್ನು ಬೆಂಗಳೂರಿನ ಬಾಗಲಗುಂಟೆ ಪೊಲೀಸರು ಬಂಧಿಸಿದ್ದಾರೆ.
ಬಾಗಲಗುಂಟೆ ಶಾಖೆಯ ಆ್ಯಕ್ಸಿಸ್ ಬ್ಯಾಂಕ್ ಮ್ಯಾನೇಜರ್ ವಿನೋದ್ ಕುಮಾರ್, ಅರುಣ್ ಕುಮಾರ್ ಮತ್ತು ಕಿರಣ್ ಬಂಧಿತ ಆರೋಪಿಗಳು. 30 ಕೋಟಿ ಬಿಸಿನೆಸ್ ಕಾಂಟ್ರಾಕ್ಟ್ ಆಮಿಷ ಒಡ್ಡಿ ನಕಲಿ ಖಾತೆಗೆ ಹಣ ವರ್ಗಾವಣೆ ಮಾಡಿಕೊಂಡು ಆರೋಪಿಗಳು ಉದ್ಯಮಿಗೆ ಮೋಸ ಮಾಡಿದ್ದಾರೆ. ಉದ್ಯಮಿ ದೂರು ದಾಖಲಿಸಿದ ಎರಡೇ ದಿನದಲ್ಲಿ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಮುಖ್ಯ ಆರೋಪಿ ವಿನೋದ್ ಕುಮಾರ್ ಆಕ್ಸಿಸ್ ಬ್ಯಾಂಕ್‌ನಲ್ಲಿ ದೊಡ್ಡ ಮಟ್ಟದ ವ್ಯವಹಾರ ನಡೆಸುತ್ತಿದ್ದ ಸುಬ್ರಮಣಿ ಎಂಬ ಉದ್ಯಮಿಯನ್ನು ಗುರಿಯಾಗಿಸಿ ವಂಚನೆ ಎಸಗಿರುವುದು ಪತ್ತೆಯಾಗಿದೆ. ಸುಬ್ರಮಣಿ ಟ್ರಾನ್ಸ್‌ಪೋರ್ಟ್ ಹಾಗೂ ಮ್ಯಾನ್‌ಪವರ್ ಏಜೆನ್ಸಿ ನಡೆಸುತ್ತಿದ್ದು, ತಿಂಗಳಿಗೆ ಹತ್ತು ಕೋಟಿಗೂ ಅಧಿಕ ಹಣದ ವಹಿವಾಟು ನಡೆಸುತ್ತಿದ್ದರು.
ಬೇರೆಯವರ ಹೆಸರಿನಲ್ಲಿ ನಕಲಿ ಸಿಮ್ ಕಾರ್ಡ್ ಪಡೆದುಕೊಂಡಿದ್ದ ವಿನೋದ್, ಇಬ್ಬರು ಕೂಲಿ ಕಾರ್ಮಿಕರ ಹೆಸರಿನಲ್ಲಿ ನಕಲಿ ಬ್ಯಾಂಕ್ ಖಾತೆಗಳನ್ನು ತೆರೆದಿದ್ದ. ಉದ್ಯಮಿ ಸುಬ್ರಮಣಿ ಅವರಿಗೆ ವಾಟ್ಸಾಪ್ ಕರೆ ಮಾಡಿ, 30 ಕೋಟಿ ರೂಪಾಯಿ ಮೌಲ್ಯದ ಬಿಸಿನೆಸ್ ಕಾಂಟ್ರಾಕ್ಟ್ ಕೊಡಿಸುವುದಾಗಿ ನಂಬಿಸಿದ್ದ. ಪ್ರತಿಯಾಗಿ ಶೇ 10 ಕಮಿಷನ್ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದ, 2 ಕೋಟಿ 66 ಲಕ್ಷ ರೂಪಾಯಿ ಆರ್ಟಿಜಿಎಸ್ ಮೂಲಕ ನಕಲಿ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದ.
ಹಣ ವರ್ಗಾವಣೆಯಾದ ನಂತರ ವಿನೋದ್ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದ. ಅನುಮಾನಗೊಂಡ ಸುಬ್ರಮಣಿ ತಕ್ಷಣ ಬ್ಯಾಂಕ್‌ಗೆ ಹೋಗಿ ವಿಚಾರಿಸಿದಾಗ ಮ್ಯಾನೇಜರ್ ವಿನೋದ್‌ನಿಂದ ಸರಿಯಾದ ಪ್ರತಿಕ್ರಿಯೆ ಸಿಗಲಿಲ್ಲ. ವಂಚನೆಯಾಗಿರುವುದು ಖಚಿತವಾಗುತ್ತಿದ್ದಂತೆ ಉದ್ಯಮಿ ಬಾಗಲಗುಂಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಬಾಗಲಗುಂಟೆ ಪೊಲೀಸರು ಬ್ಯಾಂಕ್ ಮ್ಯಾನೇಜರ್ ವಿನೋದ್ ಕುಮಾರ್ ಮತ್ತು ಆತನ ಸಹಚರರನ್ನು ಬಂಧಿಸಿದ್ದಾರೆ.


