Menu

ಚೀನಾ ಶೂ ಕಾರ್ಖಾನೆಯಲ್ಲಿ ಅಗ್ನಿ ದುರಂತ: 28ಕಾರ್ಮಿಕರ ಸಾವು, ಹಲವರು ನಾಪತ್ತೆ

ಚೀನಾದ ಜಿಂಜಿಯಾಂಗ್‌ನಲ್ಲಿ ಇರುವ ಶೂ ಕಾರ್ಖಾನೆಯಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಕನಿಷ್ಠ 28 ಮಂದಿ ಮೃತಪಟ್ಟಿದ್ದು, ದುರಂತದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಕಾರ್ಖಾನೆಯಿಂದ ಮುಗಿಲಲೆತ್ತರ ದಟ್ಟ ಹೊಗೆ ಆವರಿಸಿಕೊಂಡು ಕಟ್ಟಡದ ಮೇಲ್ಚಾವಣಿಯಲ್ಲಿ ಕೆಲವರು ಸಿಲುಕಿಕೊಂಡಿರುವುದು ವೀಡಿಯೊಗಳಲ್ಲಿ ಕಂಡುಬಂದಿದೆ. ಬೆಂಕಿ ಹೊತ್ತಿಕೊಂಡ ಸಮಯದಲ್ಲಿ ಕಾರ್ಖಾನೆಯಲ್ಲಿ 240 ಮಂದಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಹಲವರು ಸುರಕ್ಷಿತವಾಗಿ ಹೊರಬಂದಿದ್ದರೆ, ಕೆಲವರು ನಾಪತ್ತೆಯಾಗಿದ್ದಾರೆ.

ತುರ್ತು ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿದ್ದು, 200ಕ್ಕೂ ಹೆಚ್ಚು ಮಂದಿಯನ್ನು ಕಾರ್ಖಾನೆ ಆವರಣದಿಂದ ಸ್ಥಳಾಂತರಿಸಲಾಗಿದೆ. ಅಗ್ನಿಶಾಮಕ ಸಿಬ್ಬಂದಿ, ರಕ್ಷಣಾ ಪಡೆಗಳು ಮತ್ತು ಸ್ಥಳೀಯ ಆಡಳಿತ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದು, ನಾಪತ್ತೆಯಾದವರಿಗಾಗಿ ಶೋಧ ಮುಂದುವರಿದಿದೆ.

ಅಗ್ನಿ ಅವಘಡದ ನಿಖರ ಕಾರಣ ಬಹಿರಂಗವಾಗಿಲ್ಲ. ಘಟನೆಯ ಬಳಿಕ ಕಾರ್ಖಾನೆಗೆ ಸಂಬಂಧಪಟ್ಟ ಕೆಲವು ಸಿಬ್ಬಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಂಪನಿಯ ಬ್ಯಾಂಕ್ ಖಾತೆ ಸ್ಥಗಿತಗೊಳಿಸಲಾಗಿದೆ ಎನ್ನಲಾಗಿದೆ. ಅವಘಡಕ್ಕೆ ಸಂಬಂಧಿಸಿದಂತೆ ಕಾರ್ಖಾನೆಯ ಸುರಕ್ಷತಾ ಲೋಪಗಳ ಬಗ್ಗೆ ಗಂಭೀರ ತನಿಖೆ ಕೈಗೊಳ್ಳಲಾಗಿದೆ.

ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್, ಈ ದುರಂತವನ್ನು ಗಂಭೀರವಾಗಿ ಪರಿಗಣಿಸಿ ಸಾವು ನೋವುಗಳಿಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. . ಕೈಗಾರಿಕಾ ಘಟಕಗಳಲ್ಲಿ ಕಠಿಣ ಮತ್ತು ಪರಿಣಾಮಕಾರಿ ಸುರಕ್ಷತಾ ವ್ಯವಸ್ಥೆಗಳನ್ನು ಜಾರಿಗೆ ತರಬೇಕು ಎಂದು ಸೂಚಿಸಿದ್ದಾರೆ.

ಫುಜಿಯಾನ್ ಪ್ರಾಂತ್ಯದ ಜಿಂಜಿಯಾಂಗ್ ವಿಶ್ವದ ಕ್ರೀಡಾ ಶೂ ಉತ್ಪಾದನೆಯ ಪ್ರಮುಖ ಕೇಂದ್ರ. ವಿಶ್ವದ ಒಟ್ಟು ಕ್ರೀಡಾ ಶೂಗಳ 20 ಶೇಕಡಾ ಉತ್ಪಾದನೆ ಇಲ್ಲಿ ನಡೆಯುತ್ತದೆ. ಕಳೆದ ನವೆಂಬರ್‌ನಲ್ಲಿ ಹಾಂಗ್ ಕಾಂಗ್‌ನ ಹಲವು ಅಪಾರ್ಟ್‌ಮೆಂಟ್ ಕಟ್ಟಡಗಳಲ್ಲಿ ಸಂಭವಿಸಿದ್ದ ಅಗ್ನಿ ಅವಘಡದಲ್ಲಿ 168 ಮಂದಿ ಮೃತಪಟ್ಟಿದ್ದರು.

Related Posts

Leave a Reply

Your email address will not be published. Required fields are marked *