Menu

ಅಯೋಧ್ಯೆ ರಾಮನ ಹಣ ಹದ್ದು ಶೇರ್‌ ಮಾರ್ಕೆಟ್‌ನಲ್ಲೂ ಹೂಡಿಕೆ

ರಾಮ ಮಂದಿರದ ದೇಣಿಗೆ ಹಣ ದುರುಪಯೋಗ ಪ್ರಕರಣದ ಆರೋಪಿಗಳು ನಾನಾ ಬಗೆಯ ಆಸ್ತಿಗಳಲ್ಲಿ ಹೂಡಿಕೆ ಮಾಡಿರುವ ಜೊತೆಗೆ ಕದ್ದ ಹಣದ ಒಂದು ಭಾಗವನ್ನು ಷೇರು ಮಾರುಕಟ್ಟೆ ಹಾಗೂ ಇತರ ಹಣಕಾಸು ಯೋಜನೆಗಳಲ್ಲಿ ಹೂಡಿಕೆ ಮಾಡಿರುವುದು ತನಿಖೆಯಲ್ಲಿ ಪತ್ತೆಯಾಗಿದೆ. ಹಣದ ಮೂಲ ಮರೆಮಾಚುವ ಜೊತೆಗೆ ಲಾಭ ಗಳಿಸುವ ಉದ್ದೇಶದಿಂದ ಹೀಗೆ ಮಾಡಿದ್ದಾರೆ ಎನ್ನಲಾಗಿದೆ.

ಅಯೋಧ್ಯೆ ಪೊಲೀಸರು ಆರೋಪಿಗಳ ಮನೆಗಳಲ್ಲಿ ಮತ್ತೊಮ್ಮೆ ಶೋಧ ನಡೆಸಿದ್ದು, ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ. ಪೊಲೀಸರು ಆರೋಪಿ ಅನುಕಲ್ಪ್ ಮಿಶ್ರಾ ಅವರನ್ನು ಮನೆಗೆ ಕರೆದೊಯ್ದು ಶೋಧ ನಡೆಸಿ, ಕುಟುಂಬ ಸದಸ್ಯರ ವಿಚಾರಣೆ ನಡೆಸಿದ್ದಾರೆ.

ತಾನು ಹಾಗೂ ಸಹ ಆರೋಪಿ ಅವಿನಾಶ್ ಶುಕ್ಲಾ ಕಳವಾದ ದೇಣಿಗೆ ಹಣವನ್ನು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದ್ದಾಗಿ ಅನುಕಲ್ಪ್ ಮಿಶ್ರಾ ಪೊಲೀಸರಿಗೆ ತಿಳಿಸಿದ್ದಾನೆ. ಅವರು ಬಡ್ಡಿಗೆ ಹಣ ನೀಡುವುದರ ಜೊತೆಗೆ ಸಂಬಂಧಿಕರು ಹಾಗೂ ಆಪ್ತರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿ, ಬಳಿಕ ತಮ್ಮ ಖಾತೆಗಳಿಗೆ ಮರಳಿ ವರ್ಗಾಯಿಸುತ್ತಿದ್ದರು ಎಂದು ಒಪ್ಪಿಕೊಂಡಿದ್ದಾನೆ.

ಪೊಲೀಸರು ಆರೋಪಿಗಳಾದ ಲವ್‌ಕುಶ್ ಮಿಶ್ರಾ ಹಾಗೂ ಕರುಣೇಶ್ ಪಾಂಡೆ ಅವರನ್ನೂ ಮನೆಗಳಿಗೆ ಕರೆದೊಯ್ದು ಶೋಧ ನಡೆಸಿದ್ದರು. ಮೂವರು ಆರೋಪಿಗಳನ್ನು 40 ಗಂಟೆಗಳ ಪೊಲೀಸ್ ಕಸ್ಟಡಿಗೆ ಪಡೆಯಲಾಗಿತ್ತು. ಶೋಧ ಕಾರ್ಯವನ್ನು ವಿಧಿ ವಿಜ್ಞಾನ ತಜ್ಞರು ಹಾಗೂ ಸ್ವತಂತ್ರ ಸಾಕ್ಷಿದಾರರ ಸಮ್ಮುಖ ನಡೆಸಲಾಯಿತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಅಧಿಕಾರಿಗಳು ಕುಟುಂಬ ಸದಸ್ಯರನ್ನು ವಿಚಾರಣೆ ನಡೆಸಿದ್ದು, ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ಎಲೆಕ್ಟ್ರಾನಿಕ್ ಸಾಧನಗಳು, ಹೂಡಿಕೆ ದಾಖಲೆಗಳು ಹಾಗೂ ಇತರ ಹಣಕಾಸು ಸಂಬಂಧಿತ ಸಾಕ್ಷ್ಯಗಳನ್ನು ಶೋಧಿಸಿದ್ದಾರೆ.
ಆರೋಪಿಗಳು ಹಾಗೂ ಅವರ ಸಂಬಂಧಿಕರ ಹೆಸರಿನ 30 ಬ್ಯಾಂಕ್ ಖಾತೆಗಳಲ್ಲಿ ಘೋಷಿತ ಆದಾಯಕ್ಕೆ ಹೊಂದಿಕೆಯಾಗದ ವಹಿವಾಟುಗಳು ಪತ್ತೆಯಾದ ಹಿನ್ನೆಲೆಯಲ್ಲಿ ಅವುಗಳನ್ನು ಜಪ್ತಿ ಮಾಡಲಾಗಿದೆ. ಆರೋಪಿಗಳ ಬಳಿ ಇದ್ದ ನಕಲಿ ದೇಣಿಗೆ ರಸೀದಿಗಳನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಆರೋಪಿಗಳು ದೇವಸ್ಥಾನದ ದೇಣಿಗೆ ಎಣಿಕೆ ವ್ಯವಸ್ಥೆಯಲ್ಲಿದ್ದ ಲೋಪಗಳನ್ನು ದುರುಪಯೋಗಪಡಿಸಿ ಎಣಿಕೆ ವೇಳೆ ಸಣ್ಣ ಪ್ರಮಾಣದಲ್ಲಿ ನಗದು ಎಗರಿಸಿ ಅದನ್ನು ಹಣಕಾಸು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಲಾಭ ಗಳಿಸುವ ವಿಧಾನವನ್ನು ಆರೋಪಿಗಳು ಅನುಸರಿಸಿದ್ದರು ಎಂದು ತನಿಖಾಧಿಕಾರಿಗಳು ನಂಬಿದ್ದಾರೆ. ಆರೋಪಿಗಳು ಒಟ್ಟಾರೆ ಎಷ್ಟು ಮೊತ್ತ ಹೂಡಿಕೆ ಮಾಡಿದ್ದರು ಎಂಬುದನ್ನು ನಿರ್ಧರಿಸಲು ಹಣಕಾಸು ತಜ್ಞರ ನೆರವು ಪಡೆಯಲಾಗುತ್ತಿದೆ.

Related Posts

Leave a Reply

Your email address will not be published. Required fields are marked *