Wednesday, October 14, 2026
Menu

ಬೆಂಗಳೂರಿಗೆ ಸೀಮಿತವಾಗದೆ ಇತರೆ ಜಿಲ್ಲೆಗಳಲ್ಲೂ ಹೂಡಿಕೆ ಮಾಡಿ: ಝೆಕ್ ಉದ್ಯಮಿಗಳಿಗೆ ಸಿಎಂ ಡಿ.ಕೆ. ಶಿವಕುಮಾರ್ ಆಹ್ವಾನ

ಉದಯಕಾಲ ನ್ಯೂಸ್, ಬೆಂಗಳೂರು: ಕರ್ನಾಟಕವು ಹಲವು ಒಪ್ಪಂದಗಳ ಮೂಲಕ ಝೆಕ್ ಗಣರಾಜ್ಯದ ದೀರ್ಘಾವಧಿಯ ವಿಶ್ವಾಸಾರ್ಹ ಪಾಲುದಾರನಾಗಿ ಹೊರಹೊಮ್ಮಲಿದೆ. ಝೆಕ್ ಕಂಪನಿಗಳು ಬರೀ ರಾಜಧಾನಿ ಬೆಂಗಳೂರಿಗೆ ಮಾತ್ರ ತಮ್ಮ ವ್ಯಾಪಾರವನ್ನು ಸೀಮಿತಗೊಳಿಸದೆ, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಿ ಹೂಡಿಕೆ ಮಾಡಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಆಹ್ವಾನ ನೀಡಿದ್ದಾರೆ.

ವಿಧಾನ್‌ಸೌಧದಲ್ಲಿ ಝೆಕ್ ಗಣರಾಜ್ಯದ ಉಪ ಪ್ರಧಾನಮಂತ್ರಿ ಹಾಗೂ ಕೈಗಾರಿಕೆ ಮತ್ತು ವ್ಯಾಪಾರ ಸಚಿವ ಕಾರೆಲ್ ಹಾವ್ಲಿಕ್ (Karel Havlicek) ಅವರ ನೇತೃತ್ವದ ಉನ್ನತ ಮಟ್ಟದ ಅಧಿಕೃತ ನಿಯೋಗವು ಬುಧವಾರ ಭೇಟಿ ಮಾಡಿ ಸಮಾಲೋಚನೆ ನಡೆಸಿತು. ಈ ಮಹತ್ವದ ಸಭೆಯಲ್ಲಿ ಉಭಯ ದೇಶಗಳ ನಡುವಿನ ಕೈಗಾರಿಕಾ ಸಹಕಾರ, ತಂತ್ರಜ್ಞಾನ ವಿನಿಮಯ ಮತ್ತು ಹೂಡಿಕೆ ಅವಕಾಶಗಳ ಕುರಿತು ವಿಸ್ತೃತ ಚರ್ಚೆ ನಡೆಯಿತು.

ಕೃಷಿ, ಇಂಧನ ಹಾಗೂ ನವೀಕರಿಸಬಹುದಾದ ಸಂಪನ್ಮೂಲ ಕ್ಷೇತ್ರಗಳಿಗೆ ಆಹ್ವಾನ

ನಿಯೋಗವನ್ನು ಉದ್ದೇಶಿಸಿ ಮಾತನಾಡಿದ ಡಿ.ಕೆ. ಶಿವಕುಮಾರ್, “ಕೃಷಿ, ಅರಣ್ಯ, ತೋಟಗಾರಿಕೆ ಮತ್ತು ಪುಷ್ಪಕೃಷಿ (Floriculture) ಕ್ಷೇತ್ರಗಳಲ್ಲಿ ಕರ್ನಾಟಕವು ಅತ್ಯಂತ ಮುಂದುವರಿದ ರಾಜ್ಯಗಳಲ್ಲಿ ಒಂದಾಗಿದೆ. ಝೆಕ್ ಗಣರಾಜ್ಯದ ಬಂಡವಾಳ ಹೂಡಿಕೆಗೆ ನಮ್ಮ ರಾಜ್ಯದಲ್ಲಿ ಅಪಾರ ಅವಕಾಶಗಳಿವೆ” ಎಂದು ಮನವರಿಕೆ ಮಾಡಿದರು.
ಅಲ್ಲದೆ, “ಕರ್ನಾಟಕವು ದೇಶದಲ್ಲೇ ಅತ್ಯಂತ ದೊಡ್ಡ ಸೌರ ವಿದ್ಯುತ್ ಸ್ಥಾವರಗಳು ಹಾಗೂ ಹಳೆಯ ಜಲವಿದ್ಯುತ್ ಯೋಜನೆಗಳಿಗೆ ನೆಲೆಯಾಗಿದೆ. ರಾಜ್ಯದಲ್ಲಿ ಬೃಹತ್ ಪ್ರಮಾಣದ ಇಂಧನ ಅಗತ್ಯತೆಗಳಿದ್ದು, ಇಂಧನ (Energy) ಹಾಗೂ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ಇದುವೇ ಸರಿಯಾದ ಸಮಯ” ಎಂದು ಹೇಳಿದರು.

ಆಟೋಮೊಬೈಲ್, ಇವಿ ಮತ್ತು ವೈಮಾಂತರಿಕ್ಷ ಕ್ಷೇತ್ರದಲ್ಲಿ ಸಹಕಾರ

“ಆಟೋಮೊಬೈಲ್ ಬಿಡಿಭಾಗಗಳು, ಎಲೆಕ್ಟ್ರಿಕ್ ವೆಹಿಕಲ್ಸ್ (EV) ಹಾಗೂ ಮುಂದಿನ ಪೀಳಿಗೆಯ ವಾಹನಗಳ ತಂತ್ರಜ್ಞಾನ, ಪರೀಕ್ಷೆ ಮತ್ತು ವಿಶೇಷ ಉತ್ಪಾದನಾ ವಲಯಗಳಲ್ಲಿ (Specialized Manufacturing) ಎರಡೂ ಪ್ರದೇಶಗಳು ಪರಸ್ಪರ ಕೈಜೋಡಿಸಬಹುದು. ಇದರೊಂದಿಗೆ ವೈಮಾಂತರಿಕ್ಷ (Aerospace) ಕ್ಷೇತ್ರದಲ್ಲೂ ಹೂಡಿಕೆ ಮಾಡಲು ಮುಂದಾಗುವಂತೆ ಝೆಕ್ ಉದ್ಯಮಿಗಳಿಗೆ ಮನವಿ ಮಾಡಲಾಗಿದೆ” ಎಂದು ಸಿಎಂ ಡಿಕೆ ಶಿವಕುಮಾರ್ ವಿವರಿಸಿದರು.

ಹೂಡಿಕೆದಾರರಿಗೆ ಬೇಕಾದ ನೆರವು ಸಿಗಲಿದೆ

ರಾಜ್ಯ ಸರ್ಕಾರವು ಉದ್ಯಮಿಗಳಿಗೆ ಮುಕ್ತ ಆಹ್ವಾನ ನೀಡುತ್ತಿದ್ದು, ‘ಇನ್ವೆಸ್ಟ್ ಕರ್ನಾಟಕ’ (Invest Karnataka), ‘ಕರ್ನಾಟಕ ಉದ್ಯೋಗ ಮಿತ್ರ’, ಕೆಐಎಡಿಬಿ (KIADB) ಹಾಗೂ ಏಕ ಗವಾಕ್ಷಿ (Single Window) ವ್ಯವಸ್ಥೆಗಳ ಮೂಲಕ ಅಗತ್ಯವಿರುವ ಎಲ್ಲಾ ಅನುಮೋದನೆಗಳು ಮತ್ತು ಬೆಂಬಲವನ್ನು ಕ್ಷಿಪ್ರವಾಗಿ ಒದಗಿಸಲಾಗುತ್ತಿದೆ ಎಂದು ಭರವಸೆ ನೀಡಿದರು. ಸ್ಥಳೀಯ ಉದ್ಯಮಗಳನ್ನು ಬಲಪಡಿಸುವ, ಗುಣಮಟ್ಟದ ಉದ್ಯೋಗಗಳನ್ನು ಸೃಷ್ಟಿಸುವ ಮತ್ತು ರಫ್ತಿಗೆ ಒತ್ತು ನೀಡುವ ಹೂಡಿಕೆಗಳಿಗೆ ಸರ್ಕಾರ ಮೊದಲ ಪ್ರಾಶಸ್ತ್ಯ ನೀಡಲಿದೆ ಎಂದರು.

ತಂತ್ರಜ್ಞಾನ ಹಾಗೂ ಶೈಕ್ಷಣಿಕ ಪಾಲುದಾರಿಕೆ

ಬೆಂಗಳೂರು ಭಾರತದ ತಂತ್ರಜ್ಞಾನ, ಸಂಶೋಧನೆ ಮತ್ತು ನಾವೀನ್ಯತೆಯ ಪ್ರಮುಖ ಕೇಂದ್ರವಾಗಿದೆ. ಝೆಕ್ ಗಣರಾಜ್ಯವು ನಿಖರ ಎಂಜಿನಿಯರಿಂಗ್ (Precision Engineering), ಯಂತ್ರೋಪಕರಣಗಳು ಮತ್ತು ಅನ್ವಯಿಕ ಸಂಶೋಧನೆಯಲ್ಲಿ (Applied Research) ದೊಡ್ಡ ಸಾಮರ್ಥ್ಯ ಹೊಂದಿದೆ. ಈ ನಿಟ್ಟಿನಲ್ಲಿ ಎರಡೂ ದೇಶಗಳ ವಿಶ್ವವಿದ್ಯಾನಿಲಯಗಳು ಹಾಗೂ ತಾಂತ್ರಿಕ ಸಂಸ್ಥೆಗಳ ನಡುವೆ ಕೌಶಲ್ಯ ಅಭಿವೃದ್ಧಿ ಮತ್ತು ಸಂಶೋಧನಾ ವಿನಿಮಯಕ್ಕೆ ಒತ್ತು ನೀಡಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸ್ಕೋಡಾ (Skoda), ಬಾಟಾ (Bata) ಮುಂತಾದ ಜಾಗತಿಕ ಝೆಕ್ ಕಂಪನಿಗಳ ಮಾದರಿಯಲ್ಲಿ ಹೊಸ ಪಾಲುದಾರಿಕೆಗಳು ರೂಪುಗೊಳ್ಳಲಿವೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಲಾಯಿತು.
#CMDKShivakumar #CzechRepublic #KarelHavlicek #KarnatakaInvestment #InvestKarnataka #TechNews #BusinessNews #UdayakalaNews #BengaluruUpdates

Related Posts

Leave a Reply

Your email address will not be published. Required fields are marked *