Wednesday, October 14, 2026
Menu

ಸ್ವಯಂ e-KYC ಮಾಡಲು ‘ಅನ್ನಸೇವೆ’ ಮೊಬೈಲ್ ಆ್ಯಪ್ ಇಂದಿನಿಂದ ರಾಜ್ಯಾದ್ಯಂತ ಲಭ್ಯ: ಸಚಿವ ರಿಜ್ವಾನ್ ಅರ್ಷದ್

ಉದಯಕಾಲ ನ್ಯೂಸ್, ಬೆಂಗಳೂರು: ರಾಜ್ಯದ ಅನ್ನಭಾಗ್ಯ ಸೇರಿದಂತೆ ವಿವಿಧ ಸಾರ್ವಜನಿಕ ವಿತರಣಾ ಯೋಜನೆಗಳ (PDS) ಫಲಾನುಭವಿಗಳು ಯಾವುದೇ ಅಲೆದಾಟವಿಲ್ಲದೆ ಸ್ವತಃ ತಮ್ಮ ಮೊಬೈಲ್ ಮೂಲಕವೇ e-KYC (Know Your Customer) ಮಾಡಿಕೊಳ್ಳಲು ಅನುಕೂಲವಾಗುವಂತೆ ಅಭಿವೃದ್ಧಿಪಡಿಸಿರುವ ‘ಅನ್ನ ಸೇವೆ’ (Anna Seve) ಮೊಬೈಲ್ ಆ್ಯಪ್ ಇಂದಿನಿಂದ (ಬುಧವಾರ) ರಾಜ್ಯಾದ್ಯಂತ ಅಧಿಕೃತವಾಗಿ ಲಭ್ಯವಾಗಲಿದೆ.

ಈ ಕುರಿತು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಅಧಿಕೃತ ಪ್ರಕಟಣೆ ಹೊರಡಿಸಿದೆ.

ಆ್ಯಪ್ ಹಿನ್ನೆಲೆ ಹಾಗೂ ಪ್ರಾಯೋಗಿಕ ಯಶಸ್ಸು

ರಾಷ್ಟ್ರೀಯ ಮಾಹಿತಿ ಕೇಂದ್ರ (NIC) ಹಾಗೂ ಇ-ಆಡಳಿತ ಇಲಾಖೆ ಸಹಯೋಗದಲ್ಲಿ ಈ ಮೊಬೈಲ್ ಆ್ಯಪ್ ಅನ್ನು ಸಿದ್ಧಪಡಿಸಲಾಗಿದ್ದು, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವ **ರಿಜ್ವಾನ್ ಅರ್ಷದ್** ಅವರು ಅಕ್ಟೋಬರ್ 1ರಂದೇ ಇದನ್ನು ಲೋಕಾರ್ಪಣೆ ಮಾಡಿದ್ದರು.

ಮೊದಲ ಹಂತದಲ್ಲಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಉಡುಪಿ, ಉತ್ತರ ಕನ್ನಡ, ಬಳ್ಳಾರಿ, ಬೀದರ್ ಮತ್ತು ಕೊಪ್ಪಳ ಸೇರಿದಂತೆ ಒಟ್ಟು ಎಂಟು ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಆ್ಯಪ್ ಬಳಕೆಗೆ ಅವಕಾಶ ನೀಡಲಾಗಿತ್ತು. ಇದಕ್ಕೆ ಸಾರ್ವಜನಿಕರಿಂದ ಅತ್ಯುತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಅಕ್ಟೋಬರ್ 1 ರಿಂದ ಅಕ್ಟೋಬರ್ 12ರ ವರೆಗಿನ ಅವಧಿಯಲ್ಲಿ ಈ ಎಂಟು ಜಿಲ್ಲೆಗಳ ಬರೋಬ್ಬರಿ  1,60,267 ಫಲಾನುಭವಿಗಳು  ‘ಅನ್ನ ಸೇವೆ’ ಆ್ಯಪ್ ಬಳಸಿ ಯಶಸ್ವಿಯಾಗಿ ತಮ್ಮ e-KYC ಪ್ರಕ್ರಿಯೆ ಪೂರ್ಣಗೊಳಿಸಿದ್ದಾರೆ. ಈ ಯಶಸ್ಸಿನ ಹಿನ್ನೆಲೆಯಲ್ಲಿ ಇಂದಿನಿಂದ ಅಕ್ಟೋಬರ್ 14ರಿಂದ ರಾಜ್ಯದ ಉಳಿದೆಲ್ಲ ಜಿಲ್ಲೆಗಳ ಫಲಾನುಭವಿಗಳಿಗೂ ಆ್ಯಪ್ ಮುಕ್ತಗೊಳಿಸಲಾಗಿದೆ.

ಫಲಾನುಭವಿಗಳಿಗೆ ದೊರೆಯುವ ಅನುಕೂಲಗಳೇನು?

* ಅನ್ನಭಾಗ್ಯ ಯೋಜನೆಯ ಬಹುಪಾಲು ಫಲಾನುಭವಿಗಳು ಕಾರ್ಮಿಕ ವರ್ಗಕ್ಕೆ ಸೇರಿದವರಾಗಿದ್ದು, ಉದ್ಯೋಗ ಅರಸಿ ನಗರ ಹಾಗೂ ಪಟ್ಟಣಗಳಿಗೆ ವಲಸೆ ಹೋಗುತ್ತಾರೆ.
* ಹಿಂದೆ KYC ಪೂರ್ಣಗೊಳಿಸಲು ಅವರು ತಮ್ಮ ಕೆಲಸದ ಸ್ಥಳದಿಂದ ಸ್ವಗ್ರಾಮಗಳಿಗೆ ತೆರಳಿ, ನ್ಯಾಯಬೆಲೆ ಅಂಗಡಿಗಳು ಅಥವಾ ಕಚೇರಿಗಳ ಮುಂದೆ ಗಂಟೆಗಟ್ಟಲೆ ಸರದಿ ಸಾಲಿನಲ್ಲಿ ಕಾಯಬೇಕಾದ ಅನಿವಾರ್ಯತೆ ಇತ್ತು.
* ಈಗ ‘ಅನ್ನ ಸೇವೆ’ ಆ್ಯಪ್ ಬಂದಿರುವುದರಿಂದ ಈ ಎಲ್ಲಾ ತೊಂದರೆಗಳು ನಿವಾರಣೆಯಾಗಲಿದ್ದು, ಫಲಾನುಭವಿಗಳು ಮನೆಯಲ್ಲೇ ಕುಳಿತುಕೊಂಡು ಸುಲಭವಾಗಿ e-KYC ಮಾಡಿಕೊಳ್ಳಬಹುದು.

e-KYC ಮಾಡುವುದು ಹೇಗೆ?

1. ಫಲಾನುಭವಿಗಳು ಗೂಗಲ್ ಪ್ಲೇ ಸ್ಟೋರ್‌ನಿಂದ (Google Play Store) ‘ಅನ್ನ ಸೇವೆ’ (Anna Seve) ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಬೇಕು.
2. UIDAI ಫೇಸ್ ಅಥೆಂಟಿಕೇಶನ್ (Face Authentication) ತಂತ್ರಜ್ಞಾನದ ಮೂಲಕ ಸ್ವಯಂ ಆಗಿ e-KYC ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದಾಗಿದೆ.

ಪ್ರಮುಖ ದಿನಾಂಕಗಳು ಹಾಗೂ ಅಂಕಿ ಅಂಶಗಳು

* ರಾಜ್ಯದಲ್ಲಿ ಒಟ್ಟು 2,67,64,276 ಫಲಾನುಭವಿಗಳು ಇ-ಕೆವೈಸಿ ಮಾಡಿಸಬೇಕಿದೆ.
* ಈ ಪೈಕಿ ಅಕ್ಟೋಬರ್ 12ರ ವರೆಗಿನ ಅಂಕಿ-ಅಂಶಗಳ ಪ್ರಕಾರ ಈಗಾಗಲೇ 2,06,76,278ಫಲಾನುಭವಿಗಳು ಈ ಪ್ರಕ್ರಿಯೆ ಮುಗಿಸಿದ್ದಾರೆ.
* ವಿಶೇಷ ಸೂಚನೆ: ಒಂದು ವರ್ಷದ ಹಿಂದೆ e-KYC ಮಾಡಿಸಿದ್ದ ಫಲಾನುಭವಿಗಳೂ ಸಹ ಮತ್ತೊಮ್ಮೆ ಕಡ್ಡಾಯವಾಗಿ e-KYC ಮಾಡಿಸಬೇಕು ಎಂದು ಇಲಾಖೆ ಸ್ಪಷ್ಟಪಡಿಸಿದೆ.
* e-KYC ಮಾಡಿಸಲು ಅಕ್ಟೋಬರ್ 20 ಕೊನೆಯ ದಿನ ವಾಗಿದೆ.

ಉಳಿದ ಎಲ್ಲಾ ಫಲಾನುಭವಿಗಳು ಸರ್ಕಾರದ ಈ ‘ಅನ್ನಸೇವೆ’ ಆ್ಯಪ್‌ನ ಸದುಪಯೋಗಪಡಿಸಿಕೊಂಡು, ನಿಗದಿತ ಅವಧಿಯೊಳಗೆ ತಮ್ಮ e-KYC ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸುವಂತೆ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ರಿಜ್ವಾನ್ ಅರ್ಷದ್ ಮನವಿ ಮಾಡಿದ್ದಾರೆ.
#AnnaSeveApp #PriyankKharge #RizwanArshad #FoodDepartmentKarnataka #AnnaBhagya #EKYC #KarnatakaNews #UdayakalaNews #GovtOfKarnataka

Related Posts

Leave a Reply

Your email address will not be published. Required fields are marked *