Menu

ವೆನಿಜುವೆಲಾವನ್ನು ಕಾಡಿದ ಕರಾಳ ಭೂಕಂಪ: ಲಕ್ಷ ಮಂದಿಯ ಸಾವು ಸಾಧ್ಯತೆ?

ವೆನೆಜುವೆಲಾದಲ್ಲಿ ಎರಡು ಪ್ರಬಲ ಭೂಕಂಪ ಸಂಭವಿಸಿದ್ದು, ದೇಶವೇ ತತ್ತರಿಸಿದೆ. ರಾಜಧಾನಿ ಕ್ಯಾರಕಾಸ್‌ನಲ್ಲಿ ಹಲವು ಬಹುಮಹಡಿ ಕಟ್ಟಡಗಳು ಮತ್ತು ವಸತಿ ಗೃಹಗಳು ಕುಸಿದು ಬಿದ್ದಿದ್ದು, ನಗರ ಧೂಳಿನಿಂದ ಆವೃತವಾಗಿದೆ. 100 ವರ್ಷಕ್ಕೂ ಹೆಚ್ಚಿನ ಅವಧಿ ಬಳಿಕ ವೆನೆಜುವೆಲಾವನ್ನು ಕಾಡಿದ ಭೀಕರ ಭೂಕಂಪ ಇದು ಎಂದು ತಜ್ಞರು ಹೇಳಿದ್ದಾರೆ.

ಇಲ್ಲಿವರೆಗೆ ಸಾವಿನ ಸಂಖ್ಯೆಯನ್ನು ಅಧಿಕೃತವಾಗಿ ಬಿಡುಗಡೆ ಮಾಡಿಲ್ಲವಾದರೂ 10,000 ರಿಂದ 100,000 ಮಂದಿ ಪ್ರಾಣ ಕಳೆದುಕೊಂಡಿರುವ ಸಾಧ್ಯತೆ ಇದೆ ಎಂದು ಯುನೈಟೆಡ್ ಸ್ಟೇಟ್ಸ್ ಭೂವೈಜ್ಞಾನಿಕ ಸಮೀಕ್ಷೆ ಹೇಳಿದೆ.
ಹಂಗಾಮಿ ಅಧ್ಯಕ್ಷ ಡೆಲ್ಸಿ ರೊಡ್ರಿಗಸ್ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ.

7.1 ತೀವ್ರತೆಯ ಮೊದಲ ಭೂಕಂಪದ ಕೇಂದ್ರಬಿಂದು ಕ್ಯಾರಕಾಸ್‌ನಿಂದ 168 ಕಿ.ಮೀ ದೂರದ ಮೊರೊನ್ ಕರಾವಳಿಯ 22 ಕಿ.ಮೀ ಆಳದಲ್ಲಿತ್ತು. ಒಂದು ನಿಮಿಷದ ಅಂತರದಲ್ಲಿ 7.5 ತೀವ್ರತೆಯ ಭೂಕಂಪ ಸಂಭವಿಸಿದೆ. ಇದು ಭೂಮಿಯ ಒಳಗಡೆ 10 ಕಿ.ಮೀ ಆಳದಲ್ಲಿದ್ದ ಕಾರಣ ಹಾನಿಯ ತೀವ್ರತೆ ಹೆಚ್ಚಾಗಿತ್ತು.

ಕಂಪನ ಆರಂಭವಾಗುತ್ತಿದ್ದಂತೆ ಜನರು ದಿಕ್ಕಾಪಾಲಾಗಿ ಓಡಲಾರಂಭಿಸಿದರು. ರಾತ್ರಿಯಲ್ಲೂ ಜನರು ಮನೆಗಳ ಒಳಗೆ ಹೋಗಲು ಹೆದರಿ ಬೀದಿಗಳಲ್ಲೇ ಇದ್ದರು. ಸಾಕುಪ್ರಾಣಿಗಳನ್ನು ಬಿಗಿಯಾಗಿ ಅಪ್ಪಿಕೊಂಡು ರಸ್ತೆಯ ಮೇಲೆಯೇ ಕುಳಿತಿದ್ದರು.

ಭೂಕಂಪದ ಬೆನ್ನಲ್ಲೇ ಅಮೆರಿಕದ ಪೆಸಿಫಿಕ್ ಸುನಾಮಿ ಎಚ್ಚರಿಕೆ ಕೇಂದ್ರವು ವರ್ಜಿನ್ ದ್ವೀಪಗಳು ಹಾಗೂ ಡೊಮಿನಿಕನ್ ಗಣರಾಜ್ಯದ ಕರಾವಳಿ ಪ್ರದೇಶಗಳಿಗೆ ಸುನಾಮಿ ಎಚ್ಚರಿಕೆ ಘೋಷಿಸಿದೆ. ಪೋರ್ಟೊ ರಿಕೊಗೆ ನೀಡಲಾಗಿದ್ದ ಎಚ್ಚರಿಕೆ ಹಿಂಪಡೆಯಲಾಗಿದೆ. ರಕ್ಷಣಾ ತಂಡಗಳು ಅವಶೇಷಗಳ ಅಡಿಯಲ್ಲಿ ಸಿಲುಕಿರುವವರನ್ನು ಹೊರತೆಗೆಯುವ ಕೆಲಸ ಕೈಗೊಂಡಿವೆ.

Related Posts

Leave a Reply

Your email address will not be published. Required fields are marked *