Menu

SIR ಕರಡು ಮತದಾರರ ಪಟ್ಟಿ ಪ್ರಕಟ: ಕೋಟಿಗೂ ಹೆಚ್ಚು ಮಂದಿಯ ಹೆಸರು ಡಿಲಿಟ್‌

ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಪೂರ್ಣಗೊಂಡಿದ್ದು, ಮೊದಲ ಕರಡು ಮತದಾರರ ಪಟ್ಟಿಯನ್ನು ರಾಜ್ಯ ಚುನಾವಣಾ ಆಯೋಗ ಪ್ರಕಟಿಸಿದೆ. ಒಂದು ಕೋಟಿಗೂ ಹೆಚ್ಚು ಮಂದಿಯ ಹೆಸರು ಡಿಲಿಟ್‌ ಆಗಿದೆ.  ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಎಸ್ಐಆರ್-2026 ಕರಡು ಮತದಾರರ ಪಟ್ಟಿ ಕುರಿತು ಮಾಹಿತಿ ನೀಡಿದ್ದಾರೆ.

ರಾಜ್ಯದಲ್ಲಿ ಇದ್ದ 5 ಕೋಟಿ 54 ಲಕ್ಷ 32 ಸಾವಿರದ 314 ಮತದಾರರಲ್ಲಿ ಎಸ್ಐಆರ್ ನಂತರ 4 ಕೋಟಿ 46 ಲಕ್ಷ 80 ಸಾವಿರದ 151 ಮತದಾರರು ಉಳಿದಿದ್ದಾರೆ. 4 ಕೋಟಿ 46 ಲಕ್ಷ 35 ಸಾವಿರದ 975 ಮತದಾರರ ಮಾಹಿತಿ ಡಿಜಿಟಲೀಕರಣಗೊಂಡಿದೆ. ಕರಡು ಪಟ್ಟಿಯಲ್ಲಿ 2 ಕೋಟಿ 22 ಲಕ್ಷದ 1 ಸಾವಿರದ 727 ಪುರುಷ ಮತದಾರರು, 2 ಕೋಟಿ 24 ಲಕ್ಷದ 75 ಸಾವಿರದ 553 ಮಹಿಳಾ ಮತದಾರರು ಹಾಗೂ 2,871 ತೃತೀಯ ಲಿಂಗಿ ಮತದಾರರು ಇರುವುದಾಗಿ ಚುನಾವಣಾಧಿಕಾರಿ ಅಂಕಿ-ಅಂಶ ನೀಡಿದ್ದಾರೆ.

ಎನ್ಯುಮರೇಷನ್ ಫಾರ್ಮ್ ಸಲ್ಲಿಸದ 1 ಕೋಟಿ 7 ಲಕ್ಷ 96 ಸಾವಿರದ 339 ಮತದಾರರನ್ನು ಎಎಸ್‌ಡಿಡಿಒ ಪಟ್ಟಿಗೆ ಸೇರಿಸಲಾಗಿದೆ. ಅವರಲ್ಲಿ 65 ಲಕ್ಷ 45 ಸಾವಿರದ 679 ಜನರು ಶಾಶ್ವತವಾಗಿ ಸ್ಥಳಾಂತರಗೊಂಡಿದ್ದಾರೆ. 16 ಲಕ್ಷ 39 ಸಾವಿರದ 864 ಜನರು ಮೃತಪಟ್ಟಿದ್ದಾರೆ. 15 ಲಕ್ಷ 17 ಸಾವಿರದ 42 ಮಂದಿ ಗೈರಾದವರು, 7 ಲಕ್ಷ 9 ಸಾವಿರದ 870 ಜನರು ಒಂದಕ್ಕಿಂತ ಹೆಚ್ಚು ಕಡೆ ಮತ ಹೊಂದಿದ್ದ ಡ್ಯೂಪ್ಲಿಕೇಟ್ ಮತದಾರರು ಹಾಗೂ 3 ಲಕ್ಷ 83 ಸಾವಿರದ 884 ಮಂದಿ ಇತರ ವಿಭಾಗದವರು ಸೇರಿದ್ದಾರೆ.

ಆಗಸ್ಟ್ 24ರಿಂದ ಸೆಪ್ಟೆಂಬರ್ 23ರವರೆಗೆ ಒಂದು ತಿಂಗಳು ಕಾಲ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಆಕ್ಷೇಪಣೆಗಳನ್ನು ಪರಿಶೀಲಿಸಿ ಅಕ್ಟೋಬರ್ 27ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುವುದು ಎಂದು ಆಯೋಗ ಹೇಳಿದೆ.

ಕರಡು ಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೆ ಮತದಾರರು ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಬಹುದು. ಭೌತಿಕವಾಗಿ ಅಥವಾ ಆನ್‌ಲೈನ್‌ನಲ್ಲಿ Voters ECI ಪೋರ್ಟಲ್ ಮತ್ತು ECINET ಮೊಬೈಲ್ ಆ್ಯಪ್ ಮೂಲಕ ಅರ್ಜಿ ಸಲ್ಲಿಸಬಹುದು. ಆಕ್ಷೇಪಣೆಗಳ ಪಟ್ಟಿ CEO ಕರ್ನಾಟಕ ವೆಬ್‌ಸೈಟ್‌ನಲ್ಲಿ ಲಭ್ಯವಿದ್ದು, ಸಾರ್ವಜನಿಕರು ಸಂಬಂಧಪಟ್ಟ ಇಆರ್​​ಒಗೆ ಆಕ್ಷೇಪಣೆ ಸಲ್ಲಿಸಬಹುದಾಗಿದೆ.

Related Posts

Leave a Reply

Your email address will not be published. Required fields are marked *