ಇಂಗ್ಲೆಂಡ್ನ ವೈದ್ಯ ಡಾ. ಚಿರಾಗ್ ಪಟೇಲ್ ತಮ್ಮ ರೋಗಿಯ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದು, ಆಕೆಗೆ ಅಫೀಮು ಆಧರಿತ ಮಾದಕ ದ್ರವ್ಯ ನೀಡಿದ್ದ ಕಾರಣಕ್ಕೆ ವೈದ್ಯಕೀಯ ಲೈಸೆನ್ಸ್ ರದ್ದುಗೊಳಿಸಲಾಗಿದೆ.
ಅಲ್ಲಿನ ವೈದ್ಯಕೀಯ ವೃತ್ತಿಯ ನೀತಿ ಸಂಹಿತೆಯ ಪ್ರಕಾರ, ವೈದ್ಯರು ತಮ್ಮ ರೋಗಿಗಳೊಂದಿಗೆ ಯಾವುದೇ ವೈಯಕ್ತಿಕ ಅಥವಾ ಲೈಂಗಿಕ ಸಂಬಂಧಹೊಂದುವಂತಿಲ್ಲ. ಆದರೆ ಚಿರಾಗ್ ಪಟೇಲ್ ಈ ನಿಯಮ ಉಲ್ಲಂಘಿಸಿದ್ದಾರೆ.
ಚಿರಾಗ್ ಪಟೇಲ್ರು ಕಾರ್ಡಿಫ್‌ನ ‘ಯೂನಿವರ್ಸಿಟಿ ಹಾಸ್ಪಿಟಲ್ ಆಫ್ ವೇಲ್ಸ್’ನಲ್ಲಿ ಕನ್ಸಲ್ಟೆಂಟ್ ನ್ಯೂರೋಸರ್ಜನ್ ಆಗಿ 2018ರಿಂದ ಸೇವೆ ಸಲ್ಲಿಸುತ್ತಿದ್ದರು. ವೇಲ್ಸ್ ಭಾಗದಲ್ಲಿ ನಿರ್ದಿಷ್ಟ ಬೆನ್ನುಮೂಳೆಯ ಕಾಯಿಲೆಗೆ ಚಿಕಿತ್ಸೆ ನೀಡಬಲ್ಲ ಏಕೈಕ ವೈದ್ಯ ಇವರಾಗಿದ್ದರು. ರೋಗಿಯ ಜೊತೆ ಅನೈತಿಕ ಸಂಬಂಧ ಮತ್ತು ದಾಖಲೆಗಳಲ್ಲಿ ನಮೂದಿಸದೆ ಅತ್ಯಂತ ವ್ಯಸನಕಾರಿ ನೋವು ನಿವಾರಕ ಮಾತ್ರೆಗಳನ್ನು ನೀಡಿದ ಹಿನ್ನೆಲೆಯಲ್ಲಿ ಅವರನ್ನು 8 ತಿಂಗಳು ವೈದ್ಯಕೀಯ ವೃತ್ತಿಯಿಂದ ಅಮಾನತುಗೊಳಿಸಲಾಗಿದೆ.
ದೈಹಿಕ ಸಂಬಂಧ ಮಾತ್ರವಲ್ಲದೆ ಆಕೆಗೆ ಪ್ರಿಸ್ಕ್ರಿಪ್ಷನ್ ಇಲ್ಲದೆ ಒಪಿಯಾಡ್ಸ್ ನೀಡುತ್ತಿದ್ದರು. ಈ ವಿಚಾರ ಬೆಳಕಿಗೆ ಬಂದ ತಕ್ಷಣ ವೈದ್ಯಕೀಯ ಮಂಡಳಿಯು ಅತ್ಯಂತ ಗಂಭೀರ ವೃತ್ತಿಪರ ದುರ್ನಡತೆ ಎಂದು ಪರಿಗಣಿಸಿದೆ. ವೈದ್ಯರ ಈ ವರ್ತನೆಯು ಇಡೀ ವೈದ್ಯಕೀಯ ಕ್ಷೇತ್ರದ ಮೇಲಿರುವ ಸಾರ್ವಜನಿಕರ ನಂಬಿಕೆಗೆ ದ್ರೋಹ ಬಗೆದಂತಿದೆ ಎಂದು ವೈದ್ಯಕೀಯ ಮಂಡಳಿ ಆಕ್ರೋಶ ವ್ಯಕ್ತಪಡಿಸಿದೆ. ಮತ್ತಷ್ಟು ತನಿಖೆ ನಡೆಯುತ್ತಿದ್ದು ಲೈಸೆನ್ಸ್ ಶಾಶ್ವತವಾಗಿ ರದ್ದುಗೊಳಿಸುವ ಸಾಧ್ಯತೆಯೂ ಇದೆ.
2019ರ ಫೆಬ್ರವರಿಯಲ್ಲಿ ಬೆನ್ನುಮೂಳೆಯ ಡಿಸ್ಕ್ ಸಮಸ್ಯೆಯಿಂದ ಬಳಲುತ್ತಿದ್ದ ಮಹಿಳೆಗೆ ಡಾ. ಚಿರಾಗ್ ಪಟೇಲ್ ಮೊದಲ ಬಾರಿಗೆ ಶಸ್ತ್ರಚಿಕಿತ್ಸೆ ಮಾಡಿದ್ದರು. 2019ರ ಆಗಸ್ಟ್ನಲ್ಲಿ ಆಕೆಗೆ ಎರಡನೇ ಬಾರಿ ಶಸ್ತ್ರಚಿಕಿತ್ಸೆ ಮಾಡಿದ್ದರು. ಕೆಲವೇ ದಿನಗಳಲ್ಲಿ ಇಬ್ಬರ ನಡುವೆ ವೈಯಕ್ತಿಕ ಸಂಬಂಧ ಆರಂಭವಾಗಿ ಅದು ಲೈಂಗಿಕ ಸಂಬಂಧಕ್ಕೆ ತಿರುಗಿತು. ಸಂಬಂಧದ ಅವಧಿಯಲ್ಲಿ ವೈದ್ಯರು ತಮ್ಮ ನಗ್ನ ಚಿತ್ರಗಳನ್ನು ಆಕೆಗೆ ಕಳುಹಿಸಿದ್ದರು. 2021ರ ಡಿಸೆಂಬರ್ ತಿಂಗಳಲ್ಲಿ ವೈದ್ಯರು ಆಕೆಗೆ ಮೂರನೇ ಬಾರಿಗೆ ಶಸ್ತ್ರಚಿಕಿತ್ಸೆ ಮಾಡಿದ್ದರು.
ಇವರಿಬ್ಬರ ಸಂಬಂಧ ಜನವರಿ 2023ರವರೆಗೆ ಮುಂದುವರಿದಿತ್ತು. ಈ ಸಮಯದಲ್ಲಿ ಡಾ. ಚಿರಾಗ್ ಪಟೇಲ್ ಮಾದಕ ದ್ರವ್ಯಗಳಾದ ‘ಮಾರ್ಫಿನ್ ಸಲ್ಫೇಟ್’ ಮತ್ತು ‘ಡಯಾಜೆಪಮ್’ ಮಾತ್ರೆಗಳನ್ನು ಅಕ್ರಮವಾಗಿ ನೀಡುತ್ತಿದ್ದರು. ಮಹಿಳೆ ತನ್ನ ಸಂಬಂಧದ ವಿಷಯವನ್ನು ಎಲ್ಲರಿಗೂ ತಿಳಿಸುವುದಾಗಿ ನಿರಂತರವಾಗಿ ಬೆದರಿಕೆ ಹಾಕುತ್ತಿದ್ದ ಕಾರಣದಿಂದ ಆಕೆಗೆ ಮಾತ್ರೆಗಳನ್ನು ನೀಡುತ್ತಿದ್ದುದಾಗಿ ಚಿರಾಗ್ ಪಟೇಲ್ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.
ಇಬ್ಬರ ಸಂಬಂಧ ಹದಗೆಟ್ಟ ನಂತರ ಮಹಿಳೆ ಪೊಲೀಸರ ಬಳಿ ಹೋಗಿ ದೂರು ನೀಡಿದ್ದರು. ಪೊಲೀಸರು ಆರೋಗ್ಯ ಮಂಡಳಿಯ ವೈದ್ಯಕೀಯ ನಿರ್ದೇಶಕರಿಗೆ ಮಾಹಿತಿ ನೀಡಿದ್ದರು. ಡಾ. ಚಿರಾಗ್ ಪಟೇಲ್ ತಾವೇ ಜನರಲ್ ಮೆಡಿಕಲ್ ಕೌನ್ಸಿಲ್ ಮುಂದೆ ಹಾಜರಾಗಿದ್ದಾರೆ. ಕಾರ್ಡಿಫ್ ಆರೋಗ್ಯ ಮಂಡಳಿಯು ಡಾ. ಚಿರಾಗ್ ಪಟೇಲ್ ಅವರನ್ನು ಸೇವೆಯಿಂದ ವಜಾಗೊಳಿಸಿದೆ.


