ಮೇಕೆದಾಟು ಯೋಜನೆ ವಿಚಾರವಾಗಿ ತಮಿಳುನಾಡು ಸಲ್ಲಿಸಿದ್ದ ಪರಿಶೀಲನಾ ಅರ್ಜಿಯನ್ನು ಸುಪ್ರೀಂ ಕೋರ್ಟ್ ತ್ರಿಸದಸ್ಯ ಪೀಠ ವಜಾಗೊಳಿಸಿದೆ. ಇದು ಕರ್ನಾಟಕ ಪಾಲಿಗೆ ಶುಭಸುದ್ದಿ. ಕರ್ನಾಟಕ ರಾಜ್ಯದ ಜನರ ಪರವಾಗಿ ನಾವು ಸುಪ್ರೀಂ ಕೋರ್ಟಿಗೆ ಧನ್ಯವಾದ ಅರ್ಪಿಸುತ್ತೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ದೆಹಲಿಯ ಕರ್ನಾಟಕ ಭವನದಲ್ಲಿ ಮಾಧ್ಯಮಗಳಿಗೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದರು.“ಸುಪ್ರೀಂ ಕೋರ್ಟ್ ಈ ಹಿಂದಿನ ಆದೇಶದಲ್ಲೇ ನಮಗೆ ಸ್ಪಷ್ಟ ಸೂಚನೆ ನೀಡಿದ್ದು ತಮಿಳುನಾಡಿನ ಪಾಲಿನ 177 ಟಿಎಂಸಿ ನೀರನ್ನು ಹರಿಸಬೇಕು ಎಂದು ಷರತ್ತು ವಿಧಿಸಿದೆ. ಈಗ ಈ ಯೋಜನೆ ಕುರಿತು ತೀರ್ಮಾನ ಮಾಡಬೇಕಿರುವುದು ಕೇಂದ್ರ ಸರ್ಕಾರ. ನಾವು ಪರಿಷ್ಕೃತ ಡಿಪಿಆರ್ ಸಲ್ಲಿಕೆ ಪ್ರಕ್ರಿಯೆಯಲ್ಲಿದ್ದೇವೆ” ಎಂದು ತಿಳಿಸಿದರು.
ಕಾವೇರಿ ನದಿಗೆ ಅಡ್ಡಲಾಗಿ ಮೇಕೆದಾಟು ಅಣೆಕಟ್ಟು ನಿರ್ಮಿಸುವ ಕರ್ನಾಟಕದ ಯೋಜನೆಗೆ ತಡೆ ನೀಡಬೇಕೆಂದು ಕೋರಿ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ 2025 ನವೆಂಬರ್ ನಲ್ಲಿ ವಜಾಗೊಳಿಸಿತ್ತು. ಆ ತೀರ್ಪನ್ನು ಮರುಪರಿಶೀಲನೆ ಮಾಡಬೇಕೆಂದು ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ಜಾಯ್ ಮಾಲ್ಯ ಬಾಗ್ಚಿ, ವಿಪುಲ್ ಎಂ. ಪಂಚೋಲಿ ಅವರಿದ್ದ ಪೀಠ ವಜಾ ಮಾಡಿ ಆದೇಶ ಪ್ರಕಟಿಸಿದೆ. ಮರು ಪರಿಶೀಲನಾ ಅರ್ಜಿಯ ವಿಷಯಗಳು ಮತ್ತು ಅದರೊಂದಿಗೆ ಲಗತ್ತಿಸಲಾದ ದಾಖಲೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದ್ದು, ತೀರ್ಪಿನ ಪುನರ್ ಪರಿಶೀಲನೆ ಅಗತ್ಯ ಇಲ್ಲ ಎಂದು ಪೀಠ ಹೇಳಿದೆ.
ಯೋಜನೆಗಾಗಿ ಶೀಘ್ರದಲ್ಲೇ ಭೂಮಿ ಪೂಜೆ ನೆರವೇರಿಸಲು ಸಿದ್ಧತೆ ನಡೆಸುತ್ತಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ವಿಜಯ್ ತುರ್ತು ಸಭೆ ಕರೆದು ಕರ್ನಾಟಕವು ಮೇಕೆದಾಟು ಅಣೆಕಟ್ಟು ನಿರ್ಮಿಸುವುದನ್ನು ತಡೆಯಲು ಮತ್ತು ತಮಿಳುನಾಡಿನ ಕಾವೇರಿ ನೀರಿನ ಹಕ್ಕನ್ನು ರಕ್ಷಿಸಲು ಕಾನೂನು ಹೋರಾಟ ತೀವ್ರಗೊಳಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು.


